ಅಮೆರಿಕ, ಇರಾನ್‌ನಿಂದ ಮತ್ತೆ ಹೋರ್ಮುಜ್‌ ಮಾರ್ಗ ಬಂದ್‌

Published : Jul 16, 2026, 08:00 AM IST
hormuz

ಸಾರಾಂಶ

ಅಮೆರಿಕ-ಇರಾನ್‌ ನಡುವಿನ ಕದನ ತೀವ್ರತರವಾಗಿ ಮುಂದುವರಿಯುತ್ತಿರುವ ನಡುವೆಯೇ, ಪುನಃ ಹೋರ್ಮುಜ್‌ ಜಲಸಂಧಿಯ ಮೇಲೆ ಅಮೆರಿಕ ಬುಧವಾರ ನಿರ್ಬಂಧ ಹೇರಿದೆ. ಜತೆಗೆ ಇರಾನ್‌ನ ಹಲವು ಸ್ಥಳಗಳ ಮೇಲೆ ಭೀಕರ ದಾಳಿ ನಡೆಸಿ ಎಚ್ಚರಿಕೆ ನೀಡಿದೆ.

ವಾಷಿಂಗ್ಟನ್‌/ಟೆಹ್ರಾನ್‌:  ಅಮೆರಿಕ-ಇರಾನ್‌ ನಡುವಿನ ಕದನ ತೀವ್ರತರವಾಗಿ ಮುಂದುವರಿಯುತ್ತಿರುವ ನಡುವೆಯೇ, ಪುನಃ ಹೋರ್ಮುಜ್‌ ಜಲಸಂಧಿಯ ಮೇಲೆ ಅಮೆರಿಕ ಬುಧವಾರ ನಿರ್ಬಂಧ ಹೇರಿದೆ. ಜತೆಗೆ ಇರಾನ್‌ನ ಹಲವು ಸ್ಥಳಗಳ ಮೇಲೆ ಭೀಕರ ದಾಳಿ ನಡೆಸಿ ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ಇರಾನ್‌ ಕೂಡ ಪ್ರತಿದಾಳಿ ನಡೆಸಿದ್ದು, ಜಲಸಂಧಿ ಒಂದೋ ಎಲ್ಲರಿಗೂ ಮುಕ್ತವಾಗಿರಬೇಕು, ಇಲ್ಲದಿದ್ದರೆ ಯಾರಿಗೂ ತೆರೆದಿರಬಾರದು ಎಂದು ಗುಡುಗಿದೆ.

ಆದರೆ ಇಷ್ಟೆಲ್ಲ ಆದರೂ ಮಧ್ಯಪ್ರಾಚ್ಯದ ಮೇಲೆ ಈ ಹಿಂದೆ ತೈಲ/ಅನಿಲದ ಮೇಲೆ ಅವಲಂಬಿತ ಆಗಿದ್ದ ಭಾರತಕ್ಕೆ ಆತಂಕವಿಲ್ಲ. ಏಕೆಂದರೆ, ಶಾಂತಿ ಒಪ್ಪಂದಕ್ಕೂ ಮುನ್ನ ನಡೆದ 90 ದಿನದ ಯುದ್ಧದಲ್ಲಿ ಭಾರತ ಪಾಠ ಕಲಿತಿದೆ. ಸರ್ಕಾರಿ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿಸಿಎಲ್, ಎಚ್‌ಪಿಸಿಎಲ್ ಮಧ್ಯಪ್ರಾಚ್ಯದಿಂದ ದೂರ ಸರಿದು ರಷ್ಯಾ, ಅಮೆರಿಕ, ವೆನಿಜುವೇಲಾ, ಬ್ರೆಜಿಲ್, ಗಯಾನಾ ಮತ್ತು ಪಶ್ಚಿಮ ಆಫ್ರಿಕಾದಿಂದ ತೈಲ ಖರೀದಿ ಹೆಚ್ಚಿಸಿವೆ. ಜುಲೈನಲ್ಲಿ ರಷ್ಯಾದಿಂದ ದಾಖಲೆಯ 27 ಲಕ್ಷ ಬ್ಯಾರೆಲ್ ತೈಲ ಆಮದು ಮಾಡಿಕೊಳ್ಳಲಾಗಿದೆ.

ಮತ್ತೆ ನಿರ್ಬಂಧ:

ಅಮೆರಿಕವು ಏಪ್ರಿಲ್‌ನಲ್ಲಿ ಹೋರ್ಮುಜ್‌ ಮೇಲೆ ನಿರ್ಬಂಧ ಹೇರಿ, ಜೂನ್‌ ಮಧ್ಯದಲ್ಲಿ ತಾತ್ಕಾಲಿಕ ಒಪ್ಪಂದದ ಬಳಿಕ ತೆಗೆದುಹಾಕಿತ್ತು. ಆದರೆ ಈಗ ಮತ್ತೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಇರಾನ್‌ನ ಅರೆಸೈನಿಕ ಪಡೆ ಆಕ್ರೋಶ ವ್ಯಕ್ತಪಡಿಸಿದ್ದು, ‘ಹೋರ್ಮುಜ್‌ ಪ್ರದೇಶದಿಂದ ತೈಲ ಮತ್ತು ಅನಿಲದ ರಫ್ತು ಎಲ್ಲರಿಗೂ ಮುಕ್ತವಾಗಿರಬೇಕು ಅಥವಾ ಯಾರಿಗೂ ಮುಕ್ತವಾಗಿರಬಾರದು’ ಎಂದು ಎಚ್ಚರಿಕೆ ನೀಡಿದೆ.

ನಿಲ್ಲದ ದಾಳಿ-ಪ್ರತಿದಾಳಿ:

ಹೋರ್ಮುಜ್‌ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲೇ ಮಂಗಳವಾರ ತಡರಾತ್ರಿ ಸತತ 7 ಗಂಟೆಗಳ ಕಾಲ ಇರಾನ್‌ನಲ್ಲಿ ಡಜನ್‌ಗಟ್ಟಲೆ ಗುರಿಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಅಮೆರಿಕದ ಕೇಂದ್ರ ಕಮಾಂಡ್ (ಸೆಂಟ್‌ಕಾಂ) ತಿಳಿಸಿದೆ. ಇರಾನ್‌ನ ಬುಶೆಹರ್, ಅಹ್ವಾಜ್ ಮತ್ತು ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟಗಳು ವರದಿಯಾಗಿವೆ. ಇದಾದ ಬಳಿಕ ಇರಾನ್‌ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ಸೇನೆ, ಹಗಲಲ್ಲೇ ದಾಳಿ ಆರಂಭಿಸಿದ್ದೇವೆ ಎಂದಿದೆ ಹಾಗೂ ಇರಾನ್‌ನ ಮೂಲಸೌಕರ್ಯ ಹಾಗೂ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ.

ಇರಾನ್‌ನಿಂದ ಅಮೆರಿಕದ ಮಿತ್ರದೇಶಗಳಾದ ಬಹ್ರೈನ್, ಕುವೈತ್ ಮತ್ತು ಜೋರ್ಡಾನ್‌ನಲ್ಲಿ ಕ್ಷಿಪಣಿ ಮತ್ತು ಡ್ರೋನ್‌ ದಾಳಿಗಳು ನಡೆದಿವೆ. ಜೋರ್ಡಾನ್ 3 ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾಗಿ ತಿಳಿಸಿದೆ. ಕುವೈತ್‌ನಲ್ಲಿ ಇರಾನ್ ದಾಳಿಗೆ ನಾಲ್ವರು ನೌಕಾಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ.

ಇರಾನ್‌ನಲ್ಲಿ 37 ಸಾವು, 260 ಮಂದಿಗೆ ಗಾಯ:

ಅಮೆರಿಕ ನಡೆಸಿದ ದಾಳಿಗೆ ಇರಾನ್‌ನಲ್ಲಿ ಕಳೆದ 3 ದಿನದಲ್ಲಿ 7 ಯೋಧರು ಸೇರಿ 37 ಜನ ಸಾವನ್ನಪ್ಪಿದ್ದರೆ, 260 ಮಂದಿಗೆ ಗಾಯವಾಗಿದೆ.

‘ಅಮೆರಿಕದ ತಡರಾತ್ರಿ ದಾಳಿಗಳಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ 30ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ’ ಎಂದು ಇರಾನ್‌ ಸರ್ಕಾರದ ವಕ್ತಾರ ಫಾತೆಮಾ ಮೊಹಜೆರಾನಿ ತಿಳಿಸಿದ್ದಾರೆ. ಬಂಪೋರ್‌ನಲ್ಲಿ ಇರಾನ್‌ನ 388ನೇ ಮೆಕ್ಯಾನೈಸ್ಡ್ ಇನ್ಫಂಟ್ರಿ ಬ್ರಿಗೇಡ್‌ನ ಬ್ಯಾರಕ್ ಮೇಲೆ ಬುಧವಾರ ನಡೆದ ದಾಳಿಯಲ್ಲಿ ಕನಿಷ್ಠ 7 ಸೈನಿಕರು ಸಾವಿಗೀಡಾಗಿದ್ದಾರೆ. ಇದಕ್ಕೆ ನಿರ್ಣಾಯಕ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಸೈನ್ಯ ಎಚ್ಚರಿಸಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಎಐ ಮೂಲಕವೇ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹೊಸ ಟೆಕ್‌!
ನನ್ನನ್ನು ಜೈಲಿಗೆ ಕಳಿಸಲು ಕುಮಾರಣ್ಣ ಸಂಚು : ಡಿಕೆಶಿ