ನನ್ನನ್ನು ಜೈಲಿಗೆ ಕಳಿಸಲು ಕುಮಾರಣ್ಣ ಸಂಚು : ಡಿಕೆಶಿ

Published : Jul 16, 2026, 06:42 AM IST
DK Shivakumar

ಸಾರಾಂಶ

ನಾನು ಸಿಎಂ ಆಗಿರುವುದನ್ನು ತಡೆದುಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ಅವರಿಗೆ ನಿದ್ರೆ ಬರುತ್ತಿಲ್ಲ. ನನ್ನನ್ನು ಜೈಲಿಗೆ ಕಳುಹಿಸಲು ಎಷ್ಟು ವರ್ಷದಿಂದ ಸಂಚು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

  ಬೆಂಗಳೂರು :  ನಾನು ಸಿಎಂ ಆಗಿರುವುದನ್ನು ತಡೆದುಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ಅವರಿಗೆ ನಿದ್ರೆ ಬರುತ್ತಿಲ್ಲ. ನನ್ನನ್ನು ಜೈಲಿಗೆ ಕಳುಹಿಸಲು ಎಷ್ಟು ವರ್ಷದಿಂದ ಸಂಚು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಅಲ್ಲದೆ ‘ನನ್ನನ್ನು ಜೈಲಿಗೆ ಕಳುಹಿಸಲು ನನ್ನ ಅಣ್ಣ (ಎಚ್.ಡಿ. ಕುಮಾರಸ್ವಾಮಿ) ಸಂಕಲ್ಪ ಮಾಡಿದ್ದಾರೆ. ಅವರಿಂದ ಈಗಾಗಲೇ ನನ್ನ ಮೇಲೆ ಕೇಸು, ಕೌಂಟರ್‌ ಕೇಸು ಪ್ರಯೋಗಗಳು ನಡೆಯುತ್ತಿವೆ. ನಾನು ಕೃಷ್ಣನ ಜನ್ಮಸ್ಥಳದಲ್ಲಿ ಇದ್ದವನು. ಮತ್ತೊಮ್ಮೆ ಅಲ್ಲಿಗೆ ಕಳುಹಿಸಲು ನಿಮಗೆ (ಎಚ್‌ಡಿಕೆ) ಆಸೆ ಇದ್ದರೆ ನಿಮ್ಮ ಪ್ರಯೋಗಗಳು ಮುಂದುವರೆಯಲಿ’ ಎಂದು ಸವಾಲು ಹಾಕಿದ್ದಾರೆ.

‘’ಡಿಕೆಶಿ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ: ಎಚ್‌ಡಿಕೆ''

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಡಿಕೆಶಿ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ: ಎಚ್‌ಡಿಕೆ’ (2025ರ ಸೆ.29) ಶೀರ್ಷಿಕೆಯ ‘ಕನ್ನಡಪ್ರಭ’ ವರದಿ ಪ್ರದರ್ಶಿಸಿ ಮಾತನಾಡಿದರು.

‘ನಾನು ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ನಮ್ಮಣ್ಣ ಹೇಳಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುವ ಅವರ ಪ್ರಯತ್ನ ಮುಂದುವರೆಯಲಿ. ನಿಮಗೆ (ಎಚ್‌ಡಿಕೆ) ಆಸೆ ಇದ್ದರೆ ನಿಮ್ಮ ಪ್ರಯೋಗಗಳು ನನ್ನ ಮೇಲೆ ಮುಂದುವರೆಯಲಿ. ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ, ಶ್ರಮ ಎಲ್ಲವೂ ಗೊತ್ತಿದೆ. ನನಗೆ ಜೈಲು ಹೊಸದೇನಲ್ಲ’ ಎಂದು ತಿರುಗೇಟು ನೀಡಿದರು.

‘ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ನಾನು ಕೃಷ್ಣನ ಜನ್ಮಸ್ಥಳದಲ್ಲಿ ಇದ್ದವನು. ನಾನು ಅಲ್ಲಿದ್ದಾಗ ಬಂದು ಭೇಟಿ ಮಾಡಿದ್ದೆ, ನಿನ್ನ ಆಶೀರ್ವಾದ, ಹೋರಾಟ, ಶ್ರಮ ಎಲ್ಲವೂ ಗೊತ್ತಿದೆ. ಬೇರೆ ಯಾವ ನಾಯಕರು ಬೆಳೆಯಬಾರದು ಎಂಬ ನಿಮ್ಮ ಮನಸ್ಥಿತಿ ನನಗೆ ಅರಿವಿದೆ. ಆದರೂ ನಿಮ್ಮ ಹಿರಿತನಕ್ಕೆ ನಮಸ್ಕರಿಸುವುದು ನನ್ನ ಧರ್ಮ. ನಾನು ಕೊಡುವ ಗೌರವ ನಿಮ್ಮಿಂದ ಸ್ವೀಕರಿಸಲು ಆಗದಿದ್ದರೆ ಅದು ನಿಮ್ಮ ಪಾಡು’ ಎಂದು ತರಾಟೆಗೆ ತೆಗೆದುಕೊಂಡರು.

ಜೈಲಿಗೆ ಹೋಗಿಬಂದೇ ಸಿಎಂ ಆಗಿದ್ದೇನೆ:

ನನ್ನನ್ನು ಜೈಲಿಗೆ ಕಳುಹಿಸಬೇಕು ಎಂಬ ಸಂಕಲ್ಪ ಮಾಡಿದ್ದಿರೋ ಅದನ್ನು ಮುಂದುವರಿಸಿ. ಆ ಜೈಲಿಗೆ ಹೋಗಿ ಬಂದೇ ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಕೂತಿದ್ದೇನೆ. ನಾನು ಜೈಲಿಗೆ ಹೋದಾಗ ಜನ ಹೇಗೆ ನನ್ನ ಪರವಾಗಿ ನಿಂತರು ಎಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ನಾನು ಜೈಲಿಗೆ ಹೋಗಿದ್ದ ಕೇಸು ಎರಡೂವರೆ ವರ್ಷಗಳಲ್ಲಿ ವಜಾ ಆಗಿದೆ. ಸುಪ್ರೀಂ ಕೋರ್ಟ್ ಪಾದಕ್ಕೆ ನಾನು ಇಲ್ಲಿಂದಲೇ ನಮಿಸುತ್ತೇನೆ. ಆ ಜೈಲಿನ ಕೋಣೆಯಲ್ಲಿ ನಾನು ಅನುಭವಿಸಿದ ನೋವು, ಆಗ ನನ್ನ ಕುಟುಂಬ ಅನುಭವಿಸಿದ ನೋವು ಎಲ್ಲವೂ ನಮಗೆ ಮಾತ್ರ ಗೊತ್ತು. ನನಗಾಗಿ ರಾಜ್ಯದ ನನ್ನ ತಾಯಂದಿರು, ಯುವಕರು ಕಣ್ಣೀರು ಹಾಕಿ, ಪ್ರಾರ್ಥಿಸಿ ನನ್ನನ್ನು ಜೈಲಿಂದ ಹೊರಗೆ ಕರೆತಂದು ಈ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

20ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ?
ಟೌನ್‌ಶಿಪ್‌ ಕುಮಾರಣ್ಣನ ಯೋಜನೆ, ನನ್ನದಲ್ಲ: ಡಿಕೆ