ಟೌನ್‌ಶಿಪ್‌ ಕುಮಾರಣ್ಣನ ಯೋಜನೆ, ನನ್ನದಲ್ಲ: ಡಿಕೆ

Published : Jul 16, 2026, 05:44 AM IST
DK Shivakumar

ಸಾರಾಂಶ

‘ದೇವೇಗೌಡರು ಈ ವಯಸ್ಸಿನಲ್ಲಿ ಗಾಂಧಿ ಪ್ರತಿಮೆ ಬಳಿ ಕೂರುವ ಅಗತ್ಯವಿಲ್ಲ. ಬಿಡದಿ ಟೌನ್‌ಶಿಪ್‌ ನನ್ನ ಯೋಜನೆಯಲ್ಲ. ಅವರ ಸುಪುತ್ರ ಕುಮಾರಣ್ಣ ಆದೇಶ ಮಾಡಿರುವ ಯೋಜನೆ. ಕುಮಾರಣ್ಣನ ಸಹಿಗೆ ಗೌರವ ಕೊಡುವ ಕೆಲಸವಷ್ಟೇ ನಾನು ಮಾಡುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು :  ‘ದೇವೇಗೌಡರು ಈ ವಯಸ್ಸಿನಲ್ಲಿ ಗಾಂಧಿ ಪ್ರತಿಮೆ ಬಳಿ ಕೂರುವ ಅಗತ್ಯವಿಲ್ಲ. ಬಿಡದಿ ಟೌನ್‌ಶಿಪ್‌ ನನ್ನ ಯೋಜನೆಯಲ್ಲ. ಅವರ ಸುಪುತ್ರ ಕುಮಾರಣ್ಣ ಆದೇಶ ಮಾಡಿರುವ ಯೋಜನೆ. ಕುಮಾರಣ್ಣನ ಸಹಿಗೆ ಗೌರವ ಕೊಡುವ ಕೆಲಸವಷ್ಟೇ ನಾನು ಮಾಡುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಮಾಜಿ ಪ್ರಧಾನಿಗಳು ಪತ್ರ ಬರೆದಿದ್ದಾರೆ. ಅವರ ಮನವಿಯನ್ನು ಸಂಪೂರ್ಣವಾಗಿ ನೋಡಿದ್ದೇನೆ. ಅವರಿಗೆ ಉತ್ತರವನ್ನೂ ನಾನು ಕೊಡುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿಯೂ ಆದ ಅವರ ಸುಪುತ್ರರ ಕೆಲ ಸುದ್ದಿಗೋಷ್ಠಿಗಳನ್ನೂ ಗಮನಿಸಿದ್ದೇನೆ. ಈ ವಯಸ್ಸಿನಲ್ಲಿ ಅವರು ಗಾಂಧೀಜಿ ಪ್ರತಿಮೆ ಬಳಿ ಕೂರುವ ಅಗತ್ಯವಿಲ್ಲ. ಜಮೀನು ಕೊಡಲು ಮುಂದೆ ಬರುವ ರೈತರಿಂದ ಮಾತ್ರ ಪಡೆದು ಯೋಜನೆ ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಯೋಜನೆ ನನ್ನದಲ್ಲ:

ನಿನ್ನೆ ಬಿಡದಿಯಲ್ಲಿ ನಡೆದ ಘಟನೆಯಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ರಾಜಕೀಯ ಪ್ರೇರಿತ ಕುಮ್ಮಕ್ಕು, ರೈತರನ್ನು ತಪ್ಪು ದಾರಿಗೆ ಎಳೆಯುವ ದೊಡ್ಡ ಸಂಚು ನಡೆಯುತ್ತಿದೆ. ಯಾರ ಮನಸ್ಸಿಗೂ ನೋವುಂಟು ಮಾಡುವುದು ನನಗೆ ಇಷ್ಟವಿಲ್ಲ. ಈ ಯೋಜನೆ ನನ್ನ ಕನಸಿನ ಯೋಜನೆಯಲ್ಲ. ಯಾವತ್ತೂ ಕೂಡ ಬಿಡದಿ ಟೌನ್‌ಶಿಪ್‌ ನನ್ನ ಕನಸಿನ ಯೋಜನೆ ಎಂದು ಹೇಳೇ ಇಲ್ಲ. ಶಂಕುಸ್ಥಾಪನೆಯೂ ಹಾಕಿಲ್ಲ, ನಮ್ಮ ಹಿರಿಯರು, ರೈತಬಂಧು, ಹೋರಾಟಗಾರರಾದ ಕುಮಾರಸ್ವಾಮಿ ಅವರ ಯೋಜನೆಯಿದು. ಈ ರಾಜ್ಯಕ್ಕೆ ಅವರು ಯಾವ ಮಾರ್ಗದರ್ಶನ ಕೊಟ್ಟರೋ ಅದಕ್ಕೆ ಮುನ್ನುಡಿ ಬರೆಯುವ ಕೆಲಸ ಮಾತ್ರ ಮಾಡುತ್ತಿದ್ದೇನೆ. ಅವರ ಸಹಿಗೆ ಗೌರವ ಕೊಡುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಬಲವಂತವಾಗಿ ಜಮೀನು ಪಡೆಯಲ್ಲ:

‘ಯಾವುದೇ ರೈತರಿಂದ ಬಲವಂತವಾಗಿ ಜಮೀನು ಪಡೆಯಲ್ಲ. ಇಚ್ಛೆ ಇರುವವರು ಮಾತ್ರ ಜಮೀನು ಕೊಡಬಹುದು. ರೈತರಿಗೆ ಭೂಮಿ ನೀಡಲು ಇಷ್ಟವಿಲ್ಲದೆ ಸ್ವಾಧೀನ ಆಗದೆ ಉಳಿದ ಜಮೀನು ಕೆಂಪು ವಲಯದಲ್ಲೇ ಇರಲಿದ್ದು, ಅದನ್ನು ನಾವು ಮುಟ್ಟಲು ಹೋಗುವುದಿಲ್ಲ. ಅದು ಹಾಗೆಯೇ (ರೆಡ್‌ ಜೋನ್‌ ಆಗಿಯೇ) ಮುಂದುವರೆಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಮಾರಸ್ವಾಮಿ ತಮಗೆ ರಾಜಕೀಯ ಜೀವನ ಕೊಟ್ಟ ರೈತರ ಜೀವನ ಕಸಿದರು. ತಾವು ಮುಖ್ಯಮಂತ್ರಿ ಆಗಿದ್ದಾಗ ಬಿಡದಿ ರೈತರ ಬದುಕು ಕಿತ್ತುಕೊಳ್ಳಲು ಕುಮಾರಸ್ವಾಮಿ ಅವರು ಮಾಡಿದ ಸಂಚು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ಯಾರನ್ನು ಆ ಮುಗ್ಧ ಜನ ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿದರೋ ಅವರೇ ಆ ಜನರ ಜಮೀನುಗಳನ್ನು ಕೆಂಪು ವಲಯ ಮಾಡಿದರು ಎಂದು ದಾಖಲೆಗಳ ಸಹಿತ ವಿವರಿಸಿದರು.

ಹೋರಾಟದ ಛಲ ಆಗ ಏನಾಗಿತ್ತು?

ಈ ವಿಚಾರದಲ್ಲಿ ಎಚ್.ಡಿ.ದೇವೇಗೌಡರ ಹೆಸರು ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ಅವರು ನನಗೆ ಪತ್ರ ಬರೆದು ಧರಣಿ ಕೂರುವುದಾಗಿ ಹೇಳಿದ್ದಾರೆ. ಅಧಿಸೂಚನೆ ಹೊರಡಿಸಿದ್ದು ಇದೇ ಕುಮಾರಸ್ವಾಮಿ ನೇತೃತ್ವದ ಮೈತ್ರಿಪಕ್ಷದಲ್ಲಿ. ಆಗ ನಿಮ್ಮ ಹೋರಾಟ, ಧ್ವನಿ ಏನಾಗಿತ್ತು? ನಿಮ್ಮ ಕಿಚ್ಚು ಏನಾಗಿತ್ತು? ನೀವು ಆಗ ಯಾಕೆ ಧರಣಿ ಮಾಡಲಿಲ್ಲ? ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ನಿಮಗೆ ಈ ಛಲ ಬಂದಿದೆಯೇ? ಎಂದು ಡಿ.ಕೆ. ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ರಿಯಲ್‌ ಎಸ್ಟೇಟ್‌ ದಂಧೆ ಮಾಡಿದ್ದು ಯಾರಣ್ಣ?

2006ರ ಸೆ.23 ರಂದು ಅಂದಿನ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅಧ್ಯಕ್ಷತೆಯ ಸಭೆಯಲ್ಲಿ, ಐದು ಉಪನಗರಗಳ ಸಮಗ್ರ ಅಭಿವೃದ್ಧಿಗೆ ಯೋಜನೆಗೆ ತೀರ್ಮಾನಿಸಿದ್ದರು. ಬಳಿಕ ಬಿಎಂಆರ್‌ಡಿಎಯಿಂದ ಪಿಪಿಪಿ ಮಾದರಿಯಲ್ಲಿ ಬಿಡದಿ ಸಮಗ್ರ ಉಪ ನಗರ ಅಭಿವೃದ್ಧಿ ಪಡಿಸಲು ಅಧಿಕೃತ ಪಾಲುದಾರರನ್ನು ಗುರುತಿಸಲು ಜಾಗತಿಕ ಟೆಂಡರ್ ಕರೆಯಲು ತೀರ್ಮಾನ ಕೈಗೊಂಡಿದ್ದರು. 2007ರಲ್ಲಿ ಮತ್ತೆ ಹೆಚ್ಚುವರಿಯಾಗಿ ಮಾರಂಡಹಳ್ಳಿ, ಒಡೆಯರಳ್ಳಿ ಸೇರಿದಂತೆ ಹೊಸದಾಗಿ ಗ್ರಾಮಗಳನ್ನು ಟೌನ್‌ಶಿಪ್‌ನಲ್ಲಿ ಸೇರಿಸಲು ನಿರ್ಧರಿಸಿದ್ದರು.

ಬಳಿಕ ಇದೇ ಕುಮಾರಸ್ವಾಮಿ ಅವರು ಈ ಎಲ್ಲಾ ಖಾಸಗಿ ಜಮೀನಿನಲ್ಲಿ ಯಾವುದೇ ಪ್ರಾಧಿಕಾರವಾಗಲಿ, ವ್ಯಕ್ತಿಯಾಗಲಿ, ಬಿಡಿಎ ವತಿಯಿಂದ ಪೂರ್ವಾನುಮತಿ ಪಡೆಯದೆ ಅಭಿವೃದ್ಧಿಗೆ ಅನುಮತಿ ನೀಡತಕ್ಕದಲ್ಲ ಎಂದು ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ರೆಡ್ ಝೋನ್ (ಕೆಂಪು ವಲಯ) ಎಂದು ಗುರುತಿಸಿದ್ದರು ಎಂದು ಡಿ.ಕೆ. ಶಿವಕುಮಾರ್‌ ಅವರು ದಾಖಲೆಗಳನ್ನು ತೋರಿಸಿದರು.

ಇಷ್ಟು ಮಾತ್ರವಲ್ಲದೆ, ಗ್ರಾಮಠಾಣಾದಲ್ಲಿರುವ ಆಸ್ತಿ, ಮನೆಗಳು ಸೇರಿದಂತೆ ಒಕ್ಕಲೆಬ್ಬಿಸಲು, ಪರಿಹಾರ ಮೊತ್ತ ಘೋಷಿಸಿ ಆದೇಶ ಹೊರಡಿಸಿದ್ದರು. ಖಾಸಗಿ ಡೆವಲಪರ್ ಡಿಎಲ್ಎಫ್ ಗೆ ಪತ್ರ ಬರೆದು 400 ಕೋಟಿ ರು. ಸೆಕ್ಯುರಿಟಿ ಡೆಪಾಸಿಟಿ ದುಡ್ಡು ಕಟ್ಟಿಸಿಕೊಂಡು ರಿಯಲ್ ಎಸ್ಟೇಟ್‌ಗೆ ಅವಕಾಶ ಕೊಟ್ಟಿದ್ದರು. ಈಗ ಹೇಳಿ ಕುಮಾರಣ್ಣಾ, ರಿಯಲ್ ಎಸ್ಟೇಟ್ ದಂಧೆ ಯಾರು ಮಾಡಿದ್ದು, ನಾನು ಮಾಡಿದ್ದಾ? ನೀವಾ? ಎಂದು ಪ್ರಶ್ನಿಸಿದರು.

ಕಾಳಜಿ ಇದ್ದವರು ಟೌನ್‌ಶಿಪ್‌ ಯಾಕೆ ಮಾಡಿದರು?

ರೈತರ ಬಗ್ಗೆ ಇಷ್ಟು ಕಾಳಜಿ ಇರುವವರು ಟೌನ್ ಶಿಪ್ ಯಾಕೆ ಮಾಡಿದರು. ಕೈಗಾರಿಕಾ ಪ್ರದೇಶಕ್ಕೆ ಕೇತಗಾನಹಳ್ಳಿ, ದೇವಗೆರೆಯನ್ನು ಯಾಕೆ ಸೇರಿಸಿಕೊಳ್ಳಲಿಲ್ಲ? ನಿಮ್ಮ ಜಮೀನುಗಳು ಏಕೆ ಅಧಿಸೂಚನೆ ಅಡಿ ಬರಲಿಲ್ಲ? ಎಲ್ಲೆಲ್ಲಿ ಏನಾಗಿದೆ ಎಂದು ಬೇರೆ ದಿನ ಮಾತನಾಡುತ್ತೇನೆ ಎಂದು ಶಿವಕುಮಾರ್‌ ಹೇಳಿದರು.

ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಶಾಸಕ ಬಾಲಕೃಷ್ಣ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಜಿ.ಸಿ.ಚಂದ್ರಶೇಖರ್ ಹಾಜರಿದ್ದರು.

 ಅಧಿಕಾರಿಗಳಿಗೆ ಪೊರಕೆಯಲ್ಲಿ ಹೊಡೆವ ಅಗತ್ಯವಿಲ್ಲ, ನಾನು ಹೊಡೆಸಿಕೊಳ್ಳಲು ಸಿದ್ಧ: ಸಿಎಂ

ಎಚ್.ಡಿ. ದೇವೇಗೌಡ ಅಂಥವರನ್ನು ಇಳಿ ವಯಸ್ಸಿನಲ್ಲಿ ಗಾಂಧಿ ಪ್ರತಿಮೆ ಬಂದು ಧರಣಿ ಕೂರಿಸಿ, ಅವರ ಮನಸ್ಸು ನೋಯಿಸಲು ನನಗೆ ಇಷ್ಟವಿಲ್ಲ. ನಮ್ಮ ತಾಯಂದಿರು ಯಾವ ಅಧಿಕಾರಿಗಳಿಗೂ ಪೊರಕೆ ಏಟು ಹೊಡೆಯುವ ಅಗತ್ಯವಿಲ್ಲ. ನಾನು ಅವರ ಬದುಕಿಗೆ ಕೈಹಾಕಿ ತಪ್ಪು ಮಾಡಿದ್ದರೆ, ಅವರು ನನಗೆ ಬೇಕಾದರೆ ಹೊಡೆಯಲಿ, ನಾನು ಹೊಡೆಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಭಾವುಕರಾಗಿ ಹೇಳಿದರು.

ನಾನು ಸಿಎಂ ಆಗಿದ್ದಕ್ಕೆ ಅಸೂಯೆ: ಡಿಕೆಶಿ

ನಾನು ಮುಖ್ಯಮಂತ್ರಿ ಆಗದಿರುವಂತೆ ತಡೆಯಲು ತುಂಬಾ ಪ್ರಯತ್ನ ನಡೆಯಿತು. ಈಗ ಡಿ.ಕೆ ಮುಖ್ಯಮಂತ್ರಿ ಆಗಿಹೋದನಲ್ಲಾ ಎಂದು ಅಸೂಯೆ ನಿಮ್ಮನ್ನು ಕಾಡುತ್ತಿದೆ. ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ನಿಮಗೆ ಒಳ್ಳೆಯದಾಗಲಿ ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ನಾನು ಹೈಕಮಾಂಡ್‌ಗೆ ನೀಡಿದ್ದ ಭರವಸೆ ಈಡೇರಿಸಲು ಟೌನ್‌ಶಿಪ್‌ ಮಾಡಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ. ಇದು ಅವರು ನನಗೆ ತೋರುತ್ತಿರುವ ಪ್ರೀತಿ. ಕುಮಾರಸ್ವಾಮಿ ಅವರು 2006ರಲ್ಲಿ ಈ ಯೋಜನೆ ಮಾಡಿದಾಗ, ಯಾವ ಹೈಕಮಾಂಡ್ ಮೆಚ್ಚಿಸಲು ಮಾಡಿದ್ದರು? ಎಂದು ಪ್ರಶ್ನಿಸಿದರು.

ಜಮೀನು ನೀಡದವರು ಕೃಷಿ ಮುಂದುವರೆಸಬಹುದು

ಸ್ವಯಂ ಪ್ರೇರಿತವಾಗಿ ಜಮೀನು ನೀಡಿದವರ ಭೂಮಿಯಲ್ಲಿ ಮಾತ್ರ ಯೋಜನೆ ಮುಂದುವರೆಸುತ್ತೇವೆ. ಈಗಾಗಲೇ ಹಲವು ರೈತರಿಗೆ ಭೂಮಿ ಪರಿಹಾರ ಹಣ ವಿತರಣೆಯಾಗಿದೆ. ಹೀಗಾಗಿ ಯೋಜನೆ ಹಿಂಪಡೆಯಲು ಆಗುವುದಿಲ್ಲ. ಯೋಜನೆಗೆ ಜಮೀನು ನೀಡದವರು ಕೃಷಿ ಚಟುವಟಿಕೆ ಮುಂದುವರೆಸಬಹುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅವಶ್ಯಕತೆ ಇಲ್ಲವಾದರೆ ಯೋಜನೆ ಏಕೆ : ಎಚ್ಡಿಕೆ
ಬೆಂಗಳೂರು ಅಪಾರ್ಟ್‌ಮೆಂಟ್‌ ನಿವಾಸಿಗಳ ಹಕ್ಕು ರಕ್ಷಣೆಗೆ ಬದ್ಧ: ಡಿಕೆಶಿ