ಬೆಂಗಳೂರು ಅಪಾರ್ಟ್‌ಮೆಂಟ್‌ ನಿವಾಸಿಗಳ ಹಕ್ಕು ರಕ್ಷಣೆಗೆ ಬದ್ಧ: ಡಿಕೆಶಿ

KannadaprabhaNewsNetwork |  
Published : Jul 16, 2026, 04:45 AM IST
ಪ್ರತಿಭಟನೆ  | Kannada Prabha

ಸಾರಾಂಶ

ಅಪಾರ್ಟ್‌ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯ, ಸಲಹೆ ಪಡೆದು ವಿಧೇಯಕ ಜಾರಿಗೆ ತರಲು ಉದ್ದೇಶಿಸಲಾಗಿದೆ. ಏಕಪಕ್ಷೀಯವಾಗಿ ಕಾಯಿದೆ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪಾರ್ಟ್‌ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯ, ಸಲಹೆ ಪಡೆದು ವಿಧೇಯಕ ಜಾರಿಗೆ ತರಲು ಉದ್ದೇಶಿಸಲಾಗಿದೆ. ಏಕಪಕ್ಷೀಯವಾಗಿ ಕಾಯಿದೆ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.

ಬುಧವಾರ ನಗರದ ನೆಹರು ತಾರಾಲಯದಲ್ಲಿ ‘ಕರ್ನಾಟಕ ಅಪಾರ್ಟ್‌ಮೆಂಟ್‌ (ಮಾಲೀಕತ್ವ ಮತ್ತು ನಿರ್ವಹಣೆ) 2026’ ಕರಡು ಕುರಿತು ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಡು ಕುರಿತಂತೆ ಆ.6ರವರೆಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ತಮಗೆ ಬರೆಯಬಹುದು.

ಆಸ್ತಿ ಕೊಂಡವರಿಗೆ ಅನುಕೂಲವಾಗುವಂತೆ ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ. ಎಲ್ಲ ಪಕ್ಷದ ನಾಯಕರೂ ಸೇರಿದಂತೆ ಶಾಸಕರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಕರಡು ಕುರಿತಂತೆ ಡೆವಲಪರ್‌ಗಳನ್ನು ಕರೆಸಿ ಅವರ ಜೊತೆಯೂ ಮಾತನಾಡಿ ಕಾನೂನು ಏನಿದೆ ಎಂದು ಮನವರಿಕೆ ಮಾಡಲಾಗುವುದು ಎಂದರು.

ಬೆಂಗಳೂರಿನಲ್ಲಿ ಇರುವ 40 ಲಕ್ಷ ಆಸ್ತಿಗಳ ಪೈಕಿ ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಖಾತೆ ನೀಡಲಾಗಿದೆ. ಒಂದಷ್ಟು ಜನ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. 3 ಮಹಡಿಗಳಿಗೆ ಅನುಮತಿ ಪಡೆದು 5 ಮಹಡಿಗಳನ್ನು ನಿರ್ಮಿಸಿದ್ದಾರೆ. ಹೆಚ್ಚಿನವರು ಪ್ರಾಮಾಣಿಕರಿದ್ದು ಅವರು ಕಾನೂನಿನ ಅಡಿ ಕೆಲಸ ಮಾಡಿದ್ದಾರೆ ಎಂದರು. ಒಮ್ಮೆ ಅಪಾರ್ಟ್‌ಮೆಂಟ್‌ ನಿವಾಸಿಗಳಾದ ಮೇಲೆ ಒಪ್ಪಂದ ಮಾಡಿಕೊಳ್ಳುವಾಗಲೇ ಒಂದು ರೀತಿ, ನೋಂದಣಿ ಮಾಡಿಕೊಳ್ಳುವಾಗಲೇ ಇನ್ನೊಂದು ರೀತಿ, ಮನೆ ಸಿಕ್ಕ ಮೇಲೆಯೇ ಮತ್ತೊಂದು ರೀತಿಯಾಗಿ ಬದಲಾವಣೆ ಆಗುವುದು ನೋಡಿ ನನಗೆ ಬೇಸರವಾಗಿದೆ. ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಲ್ಲಿ ಒಂದಿಬ್ಬರು ತಕರಾರು ಗಿರಾಕಿಗಳು ಸೇರಿಕೊಂಡು ತೊಂದರೆ ತೊಡಕುಗಳನ್ನು ನೀಡುವುದೇ ಅವರ ಕೆಲಸವಾಗುತ್ತದೆ ಎಂದರು.

ಎಸ್ಟಿಪಿ, ಕುಡಿಯುವ ನೀರಿನ ಬಗ್ಗೆ ಗಮನ ಹರಿಸಿ

ಎಲ್ಲ ಅಸೋಸಿಯೇಷನ್‌ಗಳು ಎಸ್‌ಟಿಪಿ ಬಗ್ಗೆ ಗಮನ ಹರಿಸಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸರ್ಕಾರ ಸುಧಾರಣೆಗಳನ್ನು ತಂದಿದೆ. ಅಂತರ್ಜಲ ವೃದ್ಧಿ, ಕಾವೇರಿ 5ನೇ ಹಂತಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ತರಲು ಸಾಕಷ್ಟು ಶ್ರಮವಹಿಸಿದೆ. ಅನೇಕರಿಗೆ ಕಂತುಗಳ ಮೂಲಕ ಹಣ ನೀಡಿ ನೀರಿನ ಸಂಪರ್ಕ ಪಡೆಯಲು ಅವಕಾಶ ನೀಡಲಾಗಿದೆ. ಸಮಸ್ಯೆ ಸೃಷ್ಟಿಸುವ ಕೆಲವ ಡೆವಲಪರ್‌ಗಳ ಜೊತೆ ಮಾತನಾಡಿ ದಾಖಲಾತಿಗಳ ವರ್ಗಾವಣೆ ಸರಾಗವಾಗಿ ಆಗಬೇಕೆಂದು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಆ.6ರವರೆಗೆ ಸಲಹೆ ನೀಡಲು ಅವಕಾಶ: ಕೃಷ್ಣ

ಅಪಾರ್ಟ್‌ಮೆಂಟ್‌ಗಳಲ್ಲಿ ಇರುವವರ ಕ್ರಿಮಿನಲ್ ಅಪರಾಧಗಳೂ ಹಾಗೂ ಸರ್ವೀಸ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರಗಳನ್ನು ಈ ಕಾನೂನಿನಲ್ಲಿ ಸೇರಿಸಲು ಸಾಧ್ಯವಿಲ್ಲ. ಅಪಾರ್ಟ್‌ಮೆಂಟ್ ಮಾಲಿಕರ ಸಂಘಗಳು ಸೊಸೈಟಿ ಕಾಯ್ದೆಯಡಿ ನೋಂದಣಿಯಾಗುವ ಬದಲು ಈ ಕಾಯ್ದೆಯ ಅಡಿಯಲ್ಲಿ ನೋಂದಣಿಯಾಗುತ್ತದೆ. ಅಲ್ಲದೆ, 1972 ಕರ್ನಾಟಕ ಅಪಾರ್ಟ್‌ಮೆಂಟ್‌ (ಮಾಲಿಕತ್ವ ಮತ್ತು ನಿರ್ವಹಣೆ) ಕಾಯ್ದೆ ಜಾರಿಗೆ ಬಂದಿರಲಿಲ್ಲ. ಈಗ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಎಲ್ಲರೂ ನಿಮ್ಮ ಕಾನೂನಿನ ಚೌಕಟ್ಟಿನ ಒಳಗಿರುವ ಸಲಹೆಗಳನ್ನು ಪತ್ರದ ಮೂಲಕ ಅಥವಾ kaomablr@gmail.comಗೆ ಆ.6ರ ಒಳಗೆ ಮೇಲ್ ಮಾಡಬಹುದು. ಆಗಸ್ಟ್‌ನಲ್ಲಿ ವಿಧಾನಮಂಡಲದ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಸಚಿವರಾದ ಬೈರತಿ ಸುರೇಶ್, ಕೆ.ಜೆ.ಜಾರ್ಜ್‌ ಶಾಸಕರಾದ ಎಸ್.ಆರ್.ವಿಶ್ವನಾಥ್, ಟಿ.ಎ. ಶರವಣ, ಸತೀಶ್ ರೆಡ್ಡಿ, ಶ್ರೀನಿವಾಸ್ ಉಪಸ್ಥಿತರಿದ್ದರು. ಪಾಲಿಕೆ ಅಧಿಕಾರಿಗಳು ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಿಎಂ ಡಿಕೆಶಿ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ: ಶಾಸಕ ಪಿ. ರವಿಕುಮಾರ್
16,000 ಗರ್ಭ ನಾಪತ್ತೆ ತನಿಖೆ ಆಗಲಿ : ಬಿಜೆಪಿ