ಸಿಎಂ ಡಿಕೆಶಿ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Jul 16, 2026, 02:00 AM IST
15ಕೆಎಂಎನ್ ಡಿ17 | Kannada Prabha

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ರಾಜಕೀಯ ಷಡ್ಯಂತ್ರ ನಡೆಸಿ ಇ.ಡಿ. ಹಾಗೂ ಸಿಬಿಐ ನಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ರಾಜಕೀಯ ಷಡ್ಯಂತ್ರ ನಡೆಸಿ ಇ.ಡಿ. ಹಾಗೂ ಸಿಬಿಐ ನಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಪಿ.ರವಿಕುಮಾರ್ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದಲ್ಲಿರುವುದನ್ನು ಕೆಲವರು ಸಹಿಸಿಕೊಳ್ಳಲಾಗದೆ ಪ್ರತಿದಿನ ಹೊಸ ಹೊಸ ಸಂಚು ರೂಪಿಸುತ್ತಿದ್ದಾರೆ. ಅವರನ್ನು ಅಧಿಕಾರದಿಂದ ದೂರ ಮಾಡುವ ಉದ್ದೇಶದಿಂದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಬಿಡದಿಯಲ್ಲಿ ನಿರ್ಮಾಣವಾಗಬೇಕಿದ್ದ ಎಐ ಸಿಟಿ ಯೋಜನೆ ಹಳೆ ಮೈಸೂರು ಭಾಗದ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲಾಗುತ್ತಿತ್ತು. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಈ ಭಾಗದ ರೈತರ ಜಮೀನುಗಳಿಗೆ ಹೆಚ್ಚಿನ ಮೌಲ್ಯ ಸಿಗುತ್ತಿತ್ತು. ಆದರೆ, ರಾಜಕೀಯ ಕಾರಣಗಳಿಂದಲೇ ಆ ಯೋಜನೆಯನ್ನು ತಡೆಯಲಾಗುತ್ತಿದೆ ಎಂದು ಕಿಡಿಕಾರಿದರು.

ಈ ಹಿಂದೆ ಬಿಡದಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವ ಅವಕಾಶವನ್ನೂ ತಪ್ಪಿಸಲಾಯಿತು. ಆ ಯೋಜನೆ ಜಾರಿಯಾಗಿದ್ದರೆ ಹಳೆ ಮೈಸೂರು ಭಾಗದ ಸಮಗ್ರ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗುತ್ತಿತ್ತು. ರೈತರ ಜಮೀನುಗಳಿಗೆ ಚಿನ್ನದ ಬೆಲೆ ಬರುವಂತಾಗುತ್ತಿತ್ತು. ಆದರೆ, ಅಭಿವೃದ್ಧಿ ಬದಲಿಗೆ ರಾಜಕೀಯವೇ ಮೇಲುಗೈ ಸಾಧಿಸಿತು ಎಂದರು.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ಆರಂಭದಿಂದಲೂ ವಿರೋಧಿಸುತ್ತಿದ್ದವರು ಈಗಲೂ ಅದೇ ಮನೋಭಾವದಿಂದ ನಡೆದುಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೂ ಇದೇ ರೀತಿಯ ಅಡೆತಡೆ ಸೃಷ್ಟಿಸಲಾಗಿತ್ತು. ಈಗ ಅದೇ ರೀತಿ ರಾಜಕೀಯವನ್ನು ಡಿ.ಕೆ.ಶಿವಕುಮಾರ್ ವಿರುದ್ಧವೂ ಮುಂದುವರಿಸಲಾಗಿದೆ ಎಂದು ಆರೋಪಿಸಿದರು.

ಅಕ್ಕ ಸಮ್ಮೇಳನದ ನಿಯೋಗವು ದೆಹಲಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ವಿಚಾರವಾಗಿ ಏನು ಚರ್ಚೆ ನಡೆದಿದೆ ಎಂಬುದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇವೆ ಎಂದರು.

ಕೈಗಾರಿಕಾ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ಕೈಗಾರಿಕೆಗಳನ್ನು ತರಬೇಕಾದ ಜವಾಬ್ದಾರಿ ಹೊಂದಿದ್ದಾರೆ. ಕೈಗಾರಿಕೆಗಳ ಕುರಿತು ಪ್ರಶ್ನಿಸಿದಾಗ ನನ್ನನ್ನೇಕೆ ಕೇಳುತ್ತೀರಿ? ಎನ್ನುವುದು ಸರಿಯಲ್ಲ. ಜಲಸಂಪನ್ಮೂಲ ಸಚಿವರಾಗಿದ್ದರೆ ನೀರಿನ ಬಗ್ಗೆ ಕೇಳುತ್ತಿದ್ದೆವು. ರಸಗೊಬ್ಬರ ಸಚಿವರಾಗಿದ್ದರೆ ರಸಗೊಬ್ಬರದ ಬಗ್ಗೆ ಕೇಳುತ್ತಿದ್ದೆವು. ಕೈಗಾರಿಕಾ ಸಚಿವರಾಗಿರುವ ಕಾರಣ ಕೈಗಾರಿಕೆಗಳ ವಿಚಾರವನ್ನೇ ಕೇಳುವುದು ಸಹಜ ಎಂದು ಟೀಕಿಸಿದರು.

ಹಾಸನ ಜಿಲ್ಲೆಯ ಅಭಿವೃದ್ಧಿಯಲ್ಲಿ ಕುಮಾರಸ್ವಾಮಿ ಅವರ ಪಾತ್ರ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಶಾಸಕ ಎಚ್.ಡಿ.ರೇವಣ್ಣರ ಪ್ರಯತ್ನಗಳಿಂದ ಅಭಿವೃದ್ಧಿ ನಡೆದಿದೆ. ಹಾಸನದ ಅಭಿವೃದ್ಧಿಗೆ ಕುಮಾರಸ್ವಾಮಿ ಅವರ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದರೆ ತಮ್ಮ ಕುಟುಂಬದ ರಾಜಕೀಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದಲೇ ಬಿಡದಿ ಟೌನ್‌ಶಿಪ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಶಾಸಕರು ದೂರಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

16,000 ಗರ್ಭ ನಾಪತ್ತೆ ತನಿಖೆ ಆಗಲಿ : ಬಿಜೆಪಿ
ದಿಲ್ಲಿಯತ್ತ ಕಿವಿಗೊಟ್ಟ ಕೈ ನಾಯಕರು