16,000 ಗರ್ಭ ನಾಪತ್ತೆ ತನಿಖೆ ಆಗಲಿ : ಬಿಜೆಪಿ

Published : Jul 14, 2026, 11:23 AM IST
BY Vijayendra

ಸಾರಾಂಶ

ಯಾದಗಿರಿ ಜಿಲ್ಲೆಯಲ್ಲಿ 16 ಸಾವಿರಕ್ಕೂ ಹೆಚ್ಚು ಗರ್ಭಗಳು ನಾಪತ್ತೆಯಾಗಿರುವ ಬಗ್ಗೆ ತನಿಖಾ ವರದಿ ಹೊರಬಂದಿರುವುದು ರಾಜ್ಯ ಆರೋಗ್ಯ ಇಲಾಖೆಯ ನಿಷ್ಕ್ರಿಯತೆ ಅತ್ಯಂತ ಆಘಾತಕಾರಿ ಹಾಗೂ ಆಕ್ಷಮ್ಯ ಲೋಪ ಎಂದು ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು :  ಯಾದಗಿರಿ ಜಿಲ್ಲೆಯಲ್ಲಿ 16 ಸಾವಿರಕ್ಕೂ ಹೆಚ್ಚು ಗರ್ಭಗಳು ನಾಪತ್ತೆಯಾಗಿರುವ ಬಗ್ಗೆ ತನಿಖಾ ವರದಿ ಹೊರಬಂದಿರುವುದು ರಾಜ್ಯ ಆರೋಗ್ಯ ಇಲಾಖೆಯ ನಿಷ್ಕ್ರಿಯತೆ ಅತ್ಯಂತ ಆಘಾತಕಾರಿ ಹಾಗೂ ಆಕ್ಷಮ್ಯ ಲೋಪ ಎಂದು ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಸಂಬಂಧ ತಕ್ಷಣ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತಕ್ಷಣ ತನಿಖೆ ಆದೇಶಿಸಿ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗರ್ಭ ನಾಪತ್ತೆ ಸಂಬಂಧ ‘ಕನ್ನಡಪ್ರಭ’ ದಿನ ಪತ್ರಿಕೆ ಜು.13ರಂದು ಮುಖಪುಟದಲ್ಲಿ ‘ಯಾದಗಿರಿ ಜಿಲ್ಲೆಯಲ್ಲಿ 16,116 ‘ಗರ್ಭಗಳೇ ನಾಪತ್ತೆ’ ಶೀರ್ಷಿಕೆಯಡಿ ಪ್ರಕಟಿಸಿರುವ ವರದಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿ, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರದ ಆಡಳಿತ ವೈಫಲ್ಯ:

ಯಾದಗಿರಿ ಜಿಲ್ಲೆಯಲ್ಲಿ 16 ಸಾವಿರಕ್ಕೂ ಹೆಚ್ಚು ಗರ್ಭಗಳು ನಾಪತ್ತೆಯಾಗಿರುವುದು ಮತ್ತು ಇದರಲ್ಲಿ ಬಹುತೇಕರು ಅಕ್ರಮ ಭ್ರೂಣ ಹತ್ಯೆ ಜಾಲಕ್ಕೆ ಬಲಿಯಾಗಿರುವ ಭೀಕರತೆ ಬಯಲು ಮಾಡಿರುವ ತನಿಖಾ ವರದಿ ಹೊರ ಬಂದಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಜೀವಗಳು ಕಣ್ಮರೆಯಾದರೂ ಆರೋಗ್ಯ ಇಲಾಖೆ ಮೌನಕ್ಕೆ ಶರಣಾಗಿರುವುದು ಆಡಳಿತದ ಸಂಪೂರ್ಣ ವೈಫಲ್ಯ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವ್ಯವಸ್ಥಿತ ಜಾಲ ಭೇದಿಸಿ:

ಕಾನೂನುಗಳಿದ್ದರೂ ಅಕ್ರಮ ಸ್ಕ್ಯಾನಿಂಗ್ ಮತ್ತು ಗರ್ಭಪಾತದ ದಂಧೆಕೋರರು ರಾಜಾರೋಷವಾಗಿ ಹಗಲು ದರೋಡೆ ನಡೆಸುತ್ತಿದ್ದಾರೆ. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ, ಇಡೀ ರಾಜ್ಯದ ಲಿಂಗಾನುಪಾತದ ಮೇಲೆ ಭೀಕರ ಪರಿಣಾಮ ಬೀರಲಿರುವ ಬೆಳವಣಿಗೆ. ರಾಜ್ಯದಲ್ಲಿ ಆರೋಗ್ಯ ಕಣ್ಗಾವಲು ವ್ಯವಸ್ಥೆ ಈಗ ಸಂಪೂರ್ಣ ಕುಸಿದಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಈ ವ್ಯವಸ್ಥಿತ ಅಪರಾಧದ ಹಿಂದಿರುವ ಜಾಲ ಭೇದಿಸಿ, ಹೆಣ್ಣುಮಕ್ಕಳಿಗೆ ಗರ್ಭದಲ್ಲೇ ರಕ್ಷಣೆ ನೀಡುವ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಭೀಕರ ದಂಧೆ ರಿಜಿಸ್ಟ್ರೇಷನ್‌ ರದ್ದು ಯಾವಾಗ?:

ಆರ್‌ಎಸ್‌ಎಸ್ ಸಂಘಟನೆಗೆ ರಿಜಿಸ್ಟ್ರೇಷನ್ ಇದೆಯೇ ಎಂದು ಹುಡುಕುತ್ತಾ ದೇಶಭಕ್ತರ ವಿರುದ್ಧ ಹಾದಿಬೀದಿಯಲ್ಲಿ ವಿಷ ಕಾರುವ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಮೊದಲು ನಿಮ್ಮದೇ ಉಸ್ತುವಾರಿಯ ಕಲಬುರಗಿ-ಯಾದಗಿರಿ ಜಿಲ್ಲೆಗಳಲ್ಲಿ ಹುಟ್ಟುವ ಮುನ್ನವೇ ಹೆಣ್ಣುಮಕ್ಕಳನ್ನು ಕಟುಕರಂತೆ ಕೊಲ್ಲುತ್ತಿರುವ ಈ ಭೀಕರ ದಂಧೆಯ ರಿಜಿಸ್ಟ್ರೇಷನ್ ಯಾವಾಗ ರದ್ದು ಮಾಡಿಸುತ್ತೀರಿ ಎಂದು ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.

ಈ ಮಾಫಿಯಾ ಹಿಂದೆ ಯಾರ ಕೈವಾಡವಿದೆ?:

ಆರ್‌ಎಸ್‌ಎಸ್ ನೋಂದಣಿ ಪರಿಶೀಲಿಸಲು ಇರುವ ನಿಮ್ಮ ಉತ್ಸಾಹ, ಯಾದಗಿರಿ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಮಾಯವಾಗಿರುವ 16,116 ಗರ್ಭಗಳ ತನಿಖೆ ನಡೆಸಲು ಏಕೆ ತೋರುತ್ತಿಲ್ಲ? ಜನನ ನೋಂದಣಿ ಆಗುವ ಮುನ್ನವೇ ನವಜಾತ ಶಿಶುಗಳು ಎಲ್ಲಿ ಮಾಯ ಆಗುತ್ತಿವೆ? ಈ ಲಿಂಗ ಪತ್ತೆ ಮಾಫಿಯಾದ ಹಿಂದೆ ಯಾರ ಕೈವಾಡವಿದೆ ಎಂದು ಕೇಳಿದ್ದಾರೆ.

ಪ್ರವಾಸದ ವೇಳೆ ಭ್ರೂಣಗಳ ಆಕ್ರಂದನ ಕೇಳಿಸಲಿಲ್ಲವೇ?:

ಇತ್ತೀಚೆಗಷ್ಟೇ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಕೈಗೊಂಡಿದ್ದ ವೈಭವದ ಪ್ರವಾಸದಲ್ಲಿ 16 ಸಾವಿರ ಹೆಣ್ಣು ಭ್ರೂಣಗಳ ಆಕ್ರಂದನ ಕೇಳಿಸಲಿಲ್ಲವೇ? ಕೇವಲ ಅಧಿಕಾರ ಹಂಚಿಕೆ, ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಪ್ರವಾಸದಲ್ಲೇ ಮುಳುಗಿರುವ ನಿಮಗೆ ತಾಯಂದಿರ ಮತ್ತು ಹೆಣ್ಣುಮಕ್ಕಳ ಈ ಭೀಕರ ದುಸ್ಥಿತಿ ಕಣ್ಣಿಗೆ ಬೀಳದಿರುವುದು ಅತ್ಯಂತ ದುರ್ದೈವ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ.

ನ್ಯಾಯಾಂಗ ತನಿಖೆಗೆ ಆಗ್ರಹ:

ಒಂದೆಡೆ ಮಹಿಳಾ ಸಬಲೀಕರಣದ ಭಾಷಣ ಬಿಗಿಯುತ್ತಾ ಮತ್ತೊಂದೆಡೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಣ್ಣು ಭ್ರೂಣ ಹತ್ಯೆಯ ದಂಧೆಗೆ ರಕ್ಷಣೆ ನೀಡುತ್ತಿರುವ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ?

ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಈ ಪ್ರಕಾರದಲ್ಲಿ ತಕ್ಷಣವೇ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಆದೇಶಿಸಿ. ಇಲ್ಲದಿದ್ದರೆ ಸ್ತ್ರೀ ಭ್ರೂಣಹತ್ಯಾ ಪಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು ಎಂದು ಎಚ್ಚರಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದಿಲ್ಲಿಯತ್ತ ಕಿವಿಗೊಟ್ಟ ಕೈ ನಾಯಕರು
ರಾಜ್ಯದಲ್ಲಿ ದೇಗುಲ ಹುಂಡಿಗಳಿಗೆ ಇನ್ನು ಹೈಟೆಕ್‌ ಭದ್ರತೆ !