ರಾಜ್ಯದ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ: ಕೇಂದ್ರಕ್ಕೆ ಪರಂ

Published : Jul 17, 2026, 06:24 AM IST
Dr G Parameshwar on Drought

ಸಾರಾಂಶ

ರಾಜ್ಯದಲ್ಲಿ  ಮಳೆ ಕೊರತೆ ಉಂಟಾಗಿದ್ದು, ಎನ್‌ಡಿಆರ್‌ಎಫ್‌  ನಿಯಮಗಳನ್ನು ಸಡಿಲಿಸಿ ಕೂಡಲೇ ಬರ ಘೋಷಣೆ ಮಾಡಬೇಕು. ಜತೆಗೆ ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಪರಿಗಣಿಸಿ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು :  ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ) ನಿಯಮಗಳನ್ನು ಸಡಿಲಿಸಿ ಕೂಡಲೇ ಬರ ಘೋಷಣೆ ಮಾಡಬೇಕು. ಜತೆಗೆ ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಪರಿಗಣಿಸಿ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಜತೆಗೆ ಪ್ರತ್ಯೇಕವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಅವರಿಗೆ ಪತ್ರ ಬರೆದಿರುವ ಪರಮೇಶ್ವರ್‌ ಅವರು, ‘ಕರ್ನಾಟಕದಲ್ಲಿ ಮಳೆ ಕೊರತೆ ಉಂಟಾಗಿ ಬರದ ವಾತಾವರಣ ನಿರ್ಮಾಣವಾಗಿದ್ದು, ಈ ಸಂಕಷ್ಟದ ಸಮಯದಲ್ಲಿ ರಾಜ್ಯದ ರೈತರ ನೆರವಿಗೆ ಧಾವಿಸಿ’ ಎಂದು ಕೋರಿದ್ದಾರೆ.

ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಪತ್ರ ಬರೆದು, ಕರ್ನಾಟಕದಲ್ಲಿ ಉಂಟಾಗಿರುವ ತೀವ್ರ ಮಳೆಯ ಕೊರತೆ, ಬೆಳೆ ನಷ್ಟ, ಜಲಾಶಯಗಳ ಮಟ್ಟ ಕುಸಿತ ಮತ್ತು ತಲೆದೋರುತ್ತಿರುವ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ವಿಶೇಷ ಆರ್ಥಿಕ ನೆರವಿಗೆ ಮೋದಿಗೆ ಮನವಿ:

ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಕಂದಾಯ ಸಚಿವರೂ ಆದ ಪರಮೇಶ್ವರ್‌ ಅವರು, ರಾಜ್ಯದಲ್ಲಿ ತೀವ್ರ ಮಳೆ ಕೊರತೆ, ಕುಡಿಯುವ ನೀರಿನ ಬಿಕ್ಕಟ್ಟು ಹಾಗೂ ಕೃಷಿ ವಲಯದಲ್ಲಿ ಉಂಟಾಗಿರುವ ಸಂಕಷ್ಟ ಉಲ್ಲೇಖಿಸಿ, ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ ವಿಶೇಷ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಶೇ.42ರಷ್ಟು ಮತ್ತು ಜುಲೈನಲ್ಲಿ ಶೇ.34ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ವ್ಯಾಪಕ ಬೆಳೆ ನಷ್ಟ, ಅಂತರ್ಜಲ ಮಟ್ಟ ಕುಸಿತ, ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿರುವುದು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಇದು ಜೀವಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.

ಮನವಿಗಳೇನು?:

ಸಣ್ಣ ಮತ್ತು ಅತಿ ಸಣ್ಣ ರೈತರ (ಎಸ್ಎಂಎಫ್‌) ಸಂಖ್ಯೆಯನ್ನು ನಿರ್ಧರಿಸಲು ಹಳೆಯ 2015-16ರ ಕೃಷಿ ಜನಗಣತಿಯ ಬದಲಾಗಿ ಫ್ರೂಟ್ಸ್‌ ದತ್ತಾಂಶ ಪರಿಗಣಿಸಬೇಕು.

ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮತ್ತು ಬರ ಕೈಪಿಡಿ-2020ರ ಮಾನದಂಡಗಳನ್ನು ಏಕರೂಪಗೊಳಿಸಿ, ರೈತರಿಗೆ ತ್ವರಿತ ಹಾಗೂ ಸಮಾನ ಪರಿಹಾರ ದೊರೆಯುವಂತೆ ಮಾಡಬೇಕು.

ಬಿತ್ತನೆ ಅವಧಿಯಲ್ಲಿನ 20%-59% ಮಳೆ ಕೊರತೆಯನ್ನೂ ಬರ ಘೋಷಣೆಗೆ ಮಾನದಂಡವಾಗಿ ಪರಿಗಣಿಸಬೇಕು, ಕೇವಲ ಋತುಮಾನದ ಒಟ್ಟು ಮಳೆ ಆಧಾರದ ಮೇಲೆ ಮಾತ್ರ ನಿರ್ಧಾರ ಕೈಗೊಳ್ಳುವ ಪದ್ಧತಿ ಪರಿಷ್ಕರಿಸಬೇಕು.

ಒಣಹವೆಯ (ಡ್ರೈ ಸ್ಪೆಲ್‌) ವ್ಯಾಖ್ಯಾನವನ್ನು ಸ್ಥಳೀಯ ಕೃಷಿ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಪರಿಷ್ಕರಿಸಿ, ಅಗತ್ಯವಿದ್ದಲ್ಲಿ ಕಡಿಮೆ ಅವಧಿಯ ಒಣಹವೆಯನ್ನೂ ಪರಿಗಣಿಸಲು ರಾಜ್ಯಗಳಿಗೆ ಅವಕಾಶ ನೀಡಬೇಕು.

ಬರವನ್ನು ಮುಂಚಿತವಾಗಿ ಘೋಷಿಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸಿ, ಬಿತ್ತನೆ ಪೂರ್ಣಗೊಳ್ಳುವವರೆಗೆ ಕಾಯುವ ಷರತ್ತು ಸಡಿಲಗೊಳಿಸಿ, ರೈತರಿಗೆ ಸಕಾಲದ ನೆರವು ಒದಗಿಸಬೇಕು.

ಪರಿಸ್ಥಿತಿಯ ಗಂಭೀರತೆ ಪರಿಗಣಿಸಿ, ಕೇಂದ್ರ ಸರ್ಕಾರ ಹೆಚ್ಚುವರಿ ನೆರವು ನೀಡುವುದು ಮತ್ತು ಪ್ರಸ್ತುತ ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸುವುದು ಅಥವಾ ಅದಕ್ಕೆ ಸಮಾನವಾದ ವಿಶೇಷ ಆರ್ಥಿಕ ನೆರವನ್ನು ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.

ಬೆಳೆ ನಷ್ಟ ಪರಿಹಾರ ವ್ಯತ್ಯಾಸ ನಿವಾರಿಸಿ: ಒತ್ತಾಯ

ಕೇಂದ್ರ ಕೃಷಿ ಸಚಿವರಿಗೆ ಬರೆದಿರುವ ಪತ್ರದಲ್ಲಿ, ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮತ್ತು ಬರ ಕೈಪಿಡಿ–2020ರ ಬೆಳೆ ನಷ್ಟ ಪರಿಹಾರ ಮಾನದಂಡಗಳಲ್ಲಿರುವ ವ್ಯತ್ಯಾಸಗಳನ್ನು ನಿವಾರಿಸಬೇಕು. ರೈತರಿಗೆ ತ್ವರಿತ ಮತ್ತು ಸಮಾನ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಕರ್ನಾಟಕಕ್ಕೆ ಅಗತ್ಯವಾದ ಹೆಚ್ಚುವರಿ ಕೇಂದ್ರ ನೆರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪರಮೇಶ್ವರ್‌ ಮನವಿ ಮಾಡಿದ್ದಾರೆ.

ಜತೆಗೆ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಗೆ ಗೌರವ ಕೊಟ್ಟು ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸಬೇಕು. 2023ರಲ್ಲೂ ರಾಜ್ಯದಲ್ಲಿ ತೀವ್ರ ಬರ ಉಂಟಾಗಿದ್ದು, ಆಗ ಎನ್‌ಡಿಆರ್‌ಎಫ್‌ ನಿಯಮಗಳ ನೆಪ ನೀಡಿ ಬೇಗ ಬರ ಘೋಷಣೆ ಮಾಡಿ ಅಗತ್ಯ ಪರಿಹಾರ ಒದಗಿಸಿರಲಿಲ್ಲ. ಈ ಬಾರಿ ಆ ರೀತಿ ಆಗಬಾರದು ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರಿ ಕಚೇರೀಲಿ ನೀರು, ವಿದ್ಯುತ್‌ ಮಿತವ್ಯಯ ಮಂತ್ರ

ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್‌ ಅನ್ನು ಕಟ್ಟುನಿಟ್ಟಾಗಿ ಮಿತಬಳಕೆ ಮಾಡಲು ಹಾಗೂ ಅನಗತ್ಯ ಪೋಲು ತಡೆಗಟ್ಟಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಎಲ್‌ ನಿನೊದಿಂದ ಮಳೆಯ ಕೊರತೆ ಉಂಟಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಮತ್ತು ನೀರಿನಂತಹ ಅತ್ಯಮೂಲ್ಯ ಸಂಪನ್ಮೂಲ ಅಪವ್ಯಯ ಮಾಡಬಾರದು ಎಂದು ಹೇಳಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಚಿವ ಸಂಪುಟ ಸಸ್ಪೆನ್ಸ್‌ - ಖರ್ಗೆ ದಿಢೀರ್‌ ಬೆಂಗಳೂರಿಗೆ । ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಚರ್ಚೆ
ಅಮೆರಿಕ, ಇರಾನ್‌ನಿಂದ ಮತ್ತೆ ಹೋರ್ಮುಜ್‌ ಮಾರ್ಗ ಬಂದ್‌