ಬೆಂಗಳೂರು : ದೇಶಾದ್ಯಂತ ಸದ್ದು ಮಾಡಿರುವ ಹನಿಟ್ರಾಪ್ ವಿಚಾರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಪಡೆದಿದೆ.
ಸಹಕಾರ ಸಚಿವ ರಾಜಣ್ಣ ಹನಿಟ್ರ್ಯಾಪ್ ವಿಚಾರ ಸದನದಲ್ಲಿ ಚರ್ಚೆಯಾಗಿರುವ ಕುರಿತು ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಕ್ರವಾರ ಕರೆ ಮಾಡಿ ನಡೆದಿರುವ ಘಟನೆಗಳ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.
ಜತೆಗೆ, ಇಂತಹ ಗಂಭೀರ ವಿಚಾರ ಸದನದಲ್ಲಿ ಚರ್ಚೆ ಬದಲಾಗಿ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಿತ್ತಲ್ಲ ಎಂದು ಉಭಯ ನಾಯಕರಿಗೂ ತಿಳಿಸಿದ್ದಾರೆ ಎನ್ನಲಾಗಿದೆ.
ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ರಾಜಣ್ಣ ಸದನದಲ್ಲಿ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ಈ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ಶಾಸಕರು ಶುಕ್ರವಾರ ಸದನದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಲ್ಲದೆ, ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸುವಂತೆ ಹೈಡ್ರಾಮಾ ಸೃಷ್ಟಿಸಿದ್ದರು. ಈ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಶುಕ್ರವಾರ ಸಂಜೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಈ ವೇಳೆ, ಸಚಿವ ರಾಜಣ್ಣ ಸದನದಲ್ಲಿ ಹನಿಟ್ರ್ಯಾಪ್ ವಿಷಯ ನೇರವಾಗಿ ಸದನದಲ್ಲಿ ಪ್ರಸ್ತಾಪಿಸುವುದಕ್ಕಿಂತ ಪಕ್ಷದ ವೇದಿಕೆಯಲ್ಲಿ ಮೊದಲು ಚರ್ಚೆಯಾಗಬೇಕಿತ್ತು. ಇಲ್ಲವೇ, ಹೈಕಮಾಂಡ್ ಗಮನಕ್ಕಾದರೂ ಈ ವಿಚಾರ ತರಬಹುದಿತ್ತಲ್ಲ ಎಂದು ಪ್ರಶ್ನಿಸಿದರು ಎನ್ನಲಾಗಿದೆ.
- ಸಿದ್ದು, ಡಿಕೆಶಿಗೆ ದೆಹಲಿ ವರಿಷ್ಠರಿಂದ ಫೋನ್ ಕರೆ
- ನಮಗೆ ವಿಚಾರ ತಿಳಿಸಬಹುದಿತ್ತಲ್ಲ ಎಂದು ಪ್ರಶ್ನೆ
- ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ವಿಧಾನಸಭೆಯಲ್ಲಿ ಹೇಳಿ ಸಂಚಲನ ಸೃಷ್ಟಿಸಿದ್ದ ರಾಜಣ್ಣ
- ಈ ವಿಚಾರ ಮುಂದಿಟ್ಟುಕೊಂಡು ಶುಕ್ರವಾರ ಸದನದಲ್ಲಿ ಪ್ರತಿಭಟನೆ ಕೋಲಾಹಲ ಸೃಷ್ಟಿಸಿದ್ದ ಬಿಜೆಪಿಗರು
- ಮಾಹಿತಿ ಗೊತ್ತಾಗಿ ಶುಕ್ರವಾರ ಸಂಜೆ ಸಿದ್ದರಾಮಯ್ಯ, ಡಿಕೆಶಿಗೆ ದೆಹಲಿಯಿಂದ ಕರೆ ಮಾಡಿದ್ದ ವರಿಷ್ಠರು
- ಸದನದಲ್ಲಿ ನೇರವಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡುವ ಮುನ್ನ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಿತ್ತು
- ಅದಾಗದಿದ್ದರೆ ಹೈಕಮಾಂಡ್ ಗಮನಕ್ಕಾದರೂ ವಿಚಾರವನ್ನು ತರಬಹುದಿತ್ತಲ್ಲ ಎಂದು ಇಬ್ಬರಿಗೂ ಪ್ರಶ್ನೆ