3 ಹಿರಿಯ ಸಚಿವರ ಸರಣಿ ಸಭೆಗಳಿಗೆ ಹೈಕಮಾಂಡ್‌ ಗರಂ - ಬ್ರೇಕ್‌ ಹಾಕಲು ಸಿಎಂ, ಡಿಸಿಎಂಗೆ ತಾಕೀತು

Published : Oct 10, 2024, 06:38 AM IST
Siddaramaiah and DK Shivakumar

ಸಾರಾಂಶ

ದಲಿತ ಸಚಿವರ ಸರಣಿ ಸಭೆ ಸೇರಿದಂತೆ ಮುಖ್ಯಮಂತ್ರಿ ಬದಲಾವಣೆ ಗುಮಾನಿ ಹುಟ್ಟುವಂಥ ರಾಜಕೀಯ ಚಟುವಟಿಕೆಯಲ್ಲಿ ಹಿರಿಯ ಸಚಿವರೇ ತೊಡಗಿರುವ ಬಗ್ಗೆ ಹೈಕಮಾಂಡ್‌ ಅಸಮಾಧಾನ

ಬೆಂಗಳೂರು : ದಲಿತ ಸಚಿವರ ಸರಣಿ ಸಭೆ ಸೇರಿದಂತೆ ಮುಖ್ಯಮಂತ್ರಿ ಬದಲಾವಣೆ ಗುಮಾನಿ ಹುಟ್ಟುವಂಥ ರಾಜಕೀಯ ಚಟುವಟಿಕೆಯಲ್ಲಿ ಹಿರಿಯ ಸಚಿವರೇ ತೊಡಗಿರುವ ಬಗ್ಗೆ ಹೈಕಮಾಂಡ್‌ ಅಸಮಾಧಾನಗೊಂಡಿದ್ದು, ಇಂಥ ಬೆಳವಣಿಗೆಯನ್ನು ನಿಯಂತ್ರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸೂಚನೆ ನೀಡಿದೆ.

ಇದರ ಬೆನ್ನಲ್ಲೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ ಹಿರಿಯ ಸಚಿವರಿಗೆ ಕರೆ ಮಾಡಿ ಅನಗತ್ಯ ಗೊಂದಲ ಉಂಟಾಗುವಂತಹ ಯಾವುದೇ ಚಟುವಟಿಕೆ ನಡೆಸದಂತೆ ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮುಡಾ ಪ್ರಕರಣ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗ್ಗೆ ಗುಮಾನಿ ಹುಟ್ಟುವಂತಹ ರಾಜಕೀಯ ಚಟುವಟಿಕೆ ಶುರುವಾಗಿವೆ. ಡಾ.ಜಿ.ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ಹಾಗೂ ಡಾ.ಎಚ್.ಸಿ. ಮಹದೇವಪ್ಪ ಸೇರಿ ತ್ರಿಮೂರ್ತಿ ಸಚಿವರ ಸತತ ಸಭೆಗಳಿಂದ ಸರ್ಕಾರ ಹಾಗೂ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಕರೆ ಮಾಡಿದ್ದು, ಅಶಿಸ್ತು ವರ್ತನೆ, ದಲಿತ ಸಚಿವರ ಪ್ರತ್ಯೇಕ ಸಭೆ ಹಾಗೂ ಮುಖ್ಯಮಂತ್ರಿ ಬದಲಾವಣೆ, ರಾಜೀನಾಮೆ ಕುರಿತ ಬಹಿರಂಗ ಹೇಳಿಕೆಗಳನ್ನು ನಿಯಂತ್ರಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಮುಖ್ಯಮಂತ್ರಿ ಬುಧವಾರ ಕಾವೇರಿ ನಿವಾಸದಲ್ಲಿ ನಡೆದ ಸಭೆ ಸೇರಿ ಸತತ ಎರಡು ದಿನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಸೇರಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಳಿಕ ಮುಖ್ಯಮಂತ್ರಿಗಳು ಸಚಿವರಿಗೆ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಚಟುವಟಿಕೆ ಬಿಟ್ಟು ಇಲಾಖಾ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹದೇವಪ್ಪಗೆ ಸಿಎಂ ಸೂಚನೆ: ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಕರೆ ಮಾಡಿ ಎಲ್ಲೂ ಸಭೆ ಹಾಗೂ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಬಹಿರಂಗ ಹೇಳಿಕೆಗಳು ಹೊರ ಬೀಳದಂತೆ ಸೂಚಿಸಿದರು ಎನ್ನಲಾಗಿದೆ.

ಏಕೆ ಸೂಚನೆ?

- ಮುಡಾ ವಿವಾದದ ಬಳಿಕ ಸಿಎಂ ಬದಲಾವಣೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ

- ಇದಕ್ಕೆ ಇಂಬು ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿದ ಕಾಂಗ್ರೆಸ್ಸಿನ 3 ಸಚಿವರು

- ಡಾ। ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ, ಡಾ। ಮಹದೇವಪ್ಪ ಅವರಿಂದ ಸರಣಿ ಸಭೆ

- ಇದರಿಂದ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣ

- ವಿಷಯ ತಿಳಿದು ಸಿಎಂ, ಡಿಸಿಎಂಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಕರೆ

- ದಲಿತ ಸಚಿವರ ಪ್ರತ್ಯೇಕ ಸಭೆ, ಸಿಎಂ ಬದಲಾವಣೆ ಹೇಳಿಕೆ ನೀಡದಂತೆ ಸೂಚಿಸಲು ತಾಕೀತು

- ಇದರ ಬೆನ್ನಲ್ಲೇ ಸಿದ್ದು- ಡಿಕೆಶಿ ಸಭೆ. ಮೂವರೂ ಸಚಿವರಿಗೆ ಕರೆ ಮಾಡಿ ಕಟ್ಟುನಿಟ್ಟಿನ ಸೂಚನೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ