ಬೆಂಗಳೂರು : ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ ಹುಟ್ಟುಹಾಕಿದ್ದರೂ ಹೈಕಮಾಂಡ್ ಮಾತ್ರ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡದೆ ದಿವ್ಯ ಮೌನ ವಹಿಸಿದೆ.
ಅಷ್ಟೇ ಅಲ್ಲ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೂ ನಿರ್ದೇಶಿಸಿದೆ ಎನ್ನುತ್ತವೆ ಉನ್ನತ ಮೂಲಗಳು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ದಾಢಸಿ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರೂ ಹೈಕಮಾಂಡ್ ಈ ರೀತಿ ಮೌನ ವಹಿಸಿರುವುದರ ಹಿಂದೆ ಬಿಹಾರ ಚುನಾವಣೆಯ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ.
ಅದು ಸಿದ್ದರಾಮಯ್ಯ ಅವರ ಹೇಳಿಕೆ. ಉಪ ಮುಖ್ಯಮಂತ್ರಿಯಾಗಲಿ ಅಥವಾ ಹೈಕಮಾಂಡ್ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದರೆ ಅದು ರಾಷ್ಟ್ರಮಟ್ಟದಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ. ಅಕ್ಟೋಬರ್‌ನಲ್ಲಿ ಬಿಹಾರ ಚುನಾವಣೆಯಿದ್ದು, ಈ ಹಂತದಲ್ಲಿ ಒಬಿಸಿ ಸಮುದಾಯದ ನಾಯಕರೊಬ್ಬರ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿಕೊಳ್ಳುವ ಮನಸ್ಸು ಹೈಕಮಾಂಡ್‌ಗೆ ಇಲ್ಲ.ಹೀಗಾಗಿ, ಅಕ್ಟೋಬರ್‌ವರೆಗೆ ಈ ಬಗ್ಗೆ ಹೈಕಮಾಂಡ್ ಮೌನ ಮುಂದುವರೆಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ ಮೂಲಗಳು.