ಅಕ್ರಮ ಆಸ್ತಿ: ಈಶ್ವರಪ್ಪ, ಕುಟುಂಬದ ವಿರುದ್ಧದ ಕೇಸಿಗೆ ಹೈಕೋರ್ಟ್‌ ತಡೆ

KannadaprabhaNewsNetwork |  
Published : Jul 12, 2025, 01:48 AM ISTUpdated : Jul 12, 2025, 06:01 AM IST
KS Eshwarappa

ಸಾರಾಂಶ

ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕುಟುಂಬ ಸದಸ್ಯರ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ.

 ಬೆಂಗಳೂರು :  ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕುಟುಂಬ ಸದಸ್ಯರ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಶಿವಮೊಗ್ಗ ಜಿಲ್ಲೆಯ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಮತ್ತು ಪ್ರಕರಣ ಕುರಿತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಪುತ್ರ ಕೆ.ಇ.ಕಾಂತೇಶ್‌ ಮತ್ತು ಸೊಸೆ ಶಾಲಿನಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರ ಪೀಠ ಆದೇಶ ಮಾಡಿದೆ.

ಕೆ.ಎಸ್‌.ಈಶ್ವರಪ್ಪ 2006ರಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರಾದ ನಂತರ ಶಿವಮೊಗ್ಗದಲ್ಲಿ ತಮ್ಮ ಪುತ್ರ ಕೆ.ಇ.ಕಾಂತೇಶ್‌ ಮತ್ತು ಸೊಸೆ ಶಾಲಿನಿ ಹೆಸರಿನಲ್ಲಿ ಕೋಟ್ಯಂತರ ಬೆಲೆ ಬಾಳುವ ಚರ ಮತ್ತು ಸ್ಥಿರಾಸ್ತಿ ಖರೀದಿಸಿದ್ದಾರೆ. ಅಲ್ಲದೆ, ಈ ಮೂವರೂ ಜಂಟಿಯಾಗಿ ಹಲವು ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳು, ಆಟೋಮೊಬೈಲ್‌ ಶೋರೂಂಗಳನ್ನು ನಡೆಸುತ್ತಿದ್ದಾರೆ. ಈಶ್ವರಪ್ಪ ಶಾಸಕರಾಗುವ ಮುನ್ನ ಹಾಗೂ 2006ರಲ್ಲಿ ಸಚಿವರಾದ ನಂತರ ಕೇವಲ ಮೂರೂವರೆ ವರ್ಷದಲ್ಲಿ ಶೇ.100 ಪಟ್ಟು ಅಧಿಕ ಆಸ್ತಿ ಸಂಪಾದನೆ ಮಾಡಿದ್ದಾರೆ. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988 ಅಡಿ ಭ್ರಷ್ಟಾಚಾರ, ಅಕ್ರಮ ಆಸ್ತಿ ಸಂಪಾದನೆ ಮತ್ತು ಅಧಿಕಾರ ದುರುಪಯೋಗ ಆರೋಪದ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸುವಂತೆ ಕೋರಿ ವಕೀಲ ಬಿ.ವಿನೋದ್‌ 2021ರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿ.ವಿನೋದ್‌ ಅವರ ದೂರು ಆಧರಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಸೆಕ್ಷನ್‌ 13(1)(ಡಿ) (ಅಕ್ರಮ ಸಂಪಾದನೆಗೆ ಅಧಿಕಾರ ದುರ್ಬಳಕೆ ) ಹಾಗೂ 13(1)(ಇ) ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 420ರ (ವಂಚನೆ), ಸೆಕ್ಷನ್‌ 120-ಬಿ (ಅಪರಾಧಿಕ ಒಳಸಂಚು) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ 2025ರ ಏ.5ರಂದು ಆದೇಶಿಸಿತ್ತು.

ಲೋಕಾಯುಕ್ತ ಪೊಲೀಸರು 2025ರ ಜು.2ರಂದು ಈಶ್ವರಪ್ಪ, ಕಾಂತೇಶ್‌ ಮತ್ತು ಶಾಲಿನಿ ಅವರ ವಿರುದ್ಧದ ಎಫ್‌ಐಆರ್‌ ದಾಖಲಿಸಿದ್ದರು. ಇದರಿಂದ ತಮ್ಮ ವಿರುದ್ಧದ ಎಫ್ಐಆರ್‌ ಮತ್ತು ವಿಶೇಷ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಈಶ್ವರಪ್ಪ ಮತ್ತವರ ಕುಟುಂಬ ಸದಸ್ಯರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಿವಿ ಎಡವಟ್ಟಿಂದ ಫೇಲಾಗಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ: ಸರ್ಕಾರಕ್ಕೆ ಸಿ.ಟಿ. ರವಿ ಆಗ್ರಹ
ಏರ್ಪೋರ್ಟ್‌ಲ್ಲಿ ಪಾರ್ಕಿಂಗ್‌ಗೆ 8 ನಿಮಿಷ ನಿಗದಿ ವಿರೋಧಿಸಿ ಕ್ಯಾಬ್ ಚಾಲಕರ ಪ್ರತಿಭಟನೆ