ಹೈಡ್ರಾಮಾ ನಡುವೆ ಡಿಕೆ ಸಂಪುಟ ವಿಸ್ತರಣೆ - ಖಾಲಿ ಇದ್ದ 20 ಸ್ಥಾನಗಳ ಪೈಕಿ 19 ಭರ್ತಿ

Published : Aug 04, 2026, 04:38 AM IST
cm dk shivakumar

ಸಾರಾಂಶ

ಕಳೆದ ಒಂದೂವರೆ ತಿಂಗಳ ಹರಸಾಹಸ ಹಾಗೂ ಅಧಿಕೃತ ಪಟ್ಟಿ ಪ್ರಕಟಣೆ ನಂತರವೂ ಪದಗ್ರಹಣದ ಕಟ್ಟಕಡೆ ಕ್ಷಣದವರೆಗೂ ನಡೆದ ಹಲವು ಹಂತದ ಪರಿಷ್ಕರಣೆ ಹೈಡ್ರಾಮಾ ನಡುವೆ ಕಡೆಗೂ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ 2.0 ಸೋಮವಾರ ರಚನೆ

ಬೆಂಗಳೂರು :  ಕಳೆದ ಒಂದೂವರೆ ತಿಂಗಳ ಹರಸಾಹಸ ಹಾಗೂ ಅಧಿಕೃತ ಪಟ್ಟಿ ಪ್ರಕಟಣೆ ನಂತರವೂ ಪದಗ್ರಹಣದ ಕಟ್ಟಕಡೆ ಕ್ಷಣದವರೆಗೂ ನಡೆದ ಹಲವು ಹಂತದ ಪರಿಷ್ಕರಣೆ ಹೈಡ್ರಾಮಾ ನಡುವೆ ಕಡೆಗೂ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟ 2.0 ಸೋಮವಾರ ರಚನೆಯಾಗಿದ್ದು, 19 ಶಾಸಕರು ನೂತನ ಸಚಿವರಾಗಿ ಪದಗ್ರಹಣ ಮಾಡಿದರು.

ತನ್ಮೂಲಕ ಎರಡು ತಿಂಗಳ ಹಿಂದೆ (ಆ.3)ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್‌ ಅವರ ಸಂಪುಟಕ್ಕೆ ಎರಡು ಹಂತದ ಪುನರ್ ರಚನೆ ಸೇರಿ 33 ಮಂದಿ ಸಚಿವರು ಸೇರ್ಪಡೆಯಾದಂತಾಗಿದ್ದು, ಒಂದು ಸ್ಥಾನ ಖಾಲಿ ಉಳಿದಿದೆ.

ಜಾತಿ-ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ತೀವ್ರ ಪ್ರಯತ್ನ ನಡೆಸಿದ ಹೊರತಾಗಿಯೂ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳು ಸಿದ್ದರಾಮಯ್ಯ ಸಂಪುಟದಲ್ಲಿ ದೊರಕಿದ್ದ ತಮ್ಮ ಪ್ರಾತಿನಿಧ್ಯವನ್ನು ಉಳಿಸಿಕೊಂಡಿದ್ದರೆ, ಪರಿಶಿಷ್ಟ, ಹಿಂದುಳಿದ ಜಾತಿಗಳು ಸರಿಸುಮಾರು ತಮ್ಮ ಹಳೆ ಪ್ರಾತಿನಿಧ್ಯವನ್ನೇ ಗಳಿಸಿವೆ. ಆದರೆ, ಅಲ್ಪಸಂಖ್ಯಾತ ಸಮುದಾಯ ಒಂದು ಹೆಚ್ಚುವರಿ ಸ್ಥಾನ ಪಡೆದಿದೆ.

ಇನ್ನು ಏಳು ಜಿಲ್ಲೆಗಳಿಗೆ ಒಂದೇ ಒಂದು ಸಚಿವ ಸ್ಥಾನ ದೊರಕದೆ ಇದ್ದರೂ ಬೆಂಗಳೂರು ಆರು ಸಚಿವ ಸ್ಥಾನ ಕಬಳಿಸಿದೆ. ನಂತರದ ಸ್ಥಾನದಲ್ಲಿರುವ ಎಐಸಿಸಿ ಅಧ್ಯಕ್ಷರ ತವರು ಜಿಲ್ಲೆ ಕಲಬುರಗಿ ಮೂರು ಸ್ಥಾನ ಪಡೆದಿದೆ.

ಎರಡನೇ ಹಂತದ ಸಚಿವ ಸಂಪುಟ ರಚನೆಯೊಂದಿಗೆ ಬಂಡಾಯ ಕೂಡ ಭುಗಿಲೆದ್ದಿದ್ದು, ಹಲವು ಶಾಸಕರು ರಾಜೀನಾಮೆ ಬೆದರಿಕೆ ಒಡ್ಡಿದ್ದಾರೆ. ಇನ್ನೂ ಹಲವು ಶಾಸಕರ ಬೆಂಬಲಿಗರು ರಸ್ತೆಗಿಳಿದು ಹೋರಾಟ ಆರಂಭಿಸಿದ್ದಾರೆ.

ಕಡೆಕ್ಷಣದವರೆಗೂ ಹೈಡ್ರಾಮಾ!

ಕಾಂಗ್ರೆಸ್‌ ಹೈಕಮಾಂಡ್ ಪಾಲಿಗೆ ಡಿ.ಕೆ. ಶಿವಕುಮಾರ್‌ ಅವರ ಸಚಿವ ಸಂಪುಟ ರಚನೆ ಎಂಬುದು ಅಕ್ಷರಶಃ ಕಬ್ಬಿಣದ ಕಡಲೆಯಾಗಿತ್ತು ಎಂಬುದು ಹೈಕಮಾಂಡ್‌ ಸೋಮವಾರ ಅಧಿಕೃತ ಪಟ್ಟಿ ಪ್ರಕಟಣೆ ನಂತರದ ಬೆಳವಣಿಗೆಗಳು ಸಾಬೀತುಪಡಿಸಿವೆ.

ಸೋಮವಾರ ಬೆಳಗ್ಗೆಯೇ ದೆಹಲಿಯಲ್ಲಿ ವರಿಷ್ಠ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸುದೀರ್ಘ ಚರ್ಚೆಯ ನಂತರ ಖಾಲಿ ಇದ್ದ ಎಲ್ಲ 20 ಸಚಿವ ಸ್ಥಾನಗಳು, ವಿಧಾನಸಭೆ ಸಭಾಧ್ಯಕ್ಷ, ಉಪ ಸಭಾಧ್ಯಕ್ಷ, ವಿಧಾನಪರಿಷತ್ ಸಭಾಪತಿ ಹಾಗೂ ಉಪ ಸಭಾಪತಿ ಸ್ಥಾನಗಳಿಗೆ ಹೆಸರು ಅಂತಿಮಗೊಳಿಸಿ ಎಐಸಿಸಿ ಲೆಟರ್ ಹೆಡ್‌ನಲ್ಲಿ ಪಟ್ಟಿಯನ್ನು ಸಿದ್ಧಪಡಿಸಿ ಅಧಿಕೃತವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರವಾನಿಸಿತು.

ಈ ಪಟ್ಟಿ ರಾಜ್ಯ ನಾಯಕರ ಕೈ ಸೇರುತ್ತಿದ್ದಂತೆಯೇ ಹೈಡ್ರಾಮಾ ಆರಂಭಗೊಂಡಿದೆ. ಮೊದಲಿಗೆ ತಮ್ಮ ಆಪ್ತ ಎಚ್‌.ಸಿ. ಬಾಲಕೃಷ್ಣ ಅವರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದರಿಂದ ಖುದ್ದು ಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೈಕಮಾಂಡ್‌ನೊಂದಿಗೆ ಆಕ್ಷೇಪವೆತ್ತಿದ್ದರು ಎನ್ನುತ್ತವೆ ಮೂಲಗಳು.

ಶಿವಕುಮಾರ್‌ ಅವರ ತೀವ್ರ ಒತ್ತಡದ ನಂತರ ಬಾಲಕೃಷ್ಣ ಅವರ ಹೆಸರನ್ನು ಸೇರ್ಪಡೆ ಮಾಡಿ ಈ ಮೊದಲು ಸ್ಥಾನ ಪಡೆದಿದ್ದ ಬೆಂಗಳೂರು ನಗರದ ಒಕ್ಕಲಿಗ ಶಾಸಕರ ಹೆಸರನ್ನು ತೆಗೆದು ಪರಿಷ್ಕೃತ ಪಟ್ಟಿಯನ್ನು ಹೈಕಮಾಂಡ್‌ ಮತ್ತೆ ರವಾನಿಸಿದೆ.

ಈ ಪಟ್ಟಿ ಮಾಧ್ಯಮಗಳಿಗೂ ಬಿಡುಗಡೆಯಾಗಿದ್ದು ಬಹುತೇಕ ಇದೇ ಅಂತಿಮ ಎಂದೇ ಭಾವಿಸಲಾಗಿತ್ತು. ಆದರೆ ಈ ಪಟ್ಟಿಯೂ ರಾಜ್ಯ ನಾಯಕರಿಗೆ ಸಮಾಧಾನವಾಗಿಲ್ಲ. ದಾವಣಗೆರೆಯ ಹಿರಿಯ ಶಾಸಕ ಹಾಗೂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಹೆಸರು ಈ ಪಟ್ಟಿಯಲ್ಲಿ ಇರಲಿಲ್ಲ. ಇದಕ್ಕೆ ರಾಜ್ಯ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಹೈಕಮಾಂಡ್‌ ಈ ಒತ್ತಡಕ್ಕೂ ಮಣಿಯಬೇಕಾಯಿತು.

ಇದರ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಪ್ರಾತಿನಿಧ್ಯ ಹಾಗೂ ಹಿಂದುಳಿದ ಮೊಗವೀರ ಸಮುದಾಯಕ್ಕೆ ಸೇರಿದ್ದ, ಸಿದ್ದರಾಮಯ್ಯ ಸಂಪುಟದಲ್ಲೂ ಸಚಿವರಾಗಿದ್ದ ಮಂಕಾಳು ವೈದ್ಯ ಅವರಿಗೆ ಅನಿವಾರ್ಯವಾಗಿ ಹೈಕಮಾಂಡ್‌ ಕೊಕ್ ನೀಡಿ, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಹೆಸರು ಸೇರಿಸಿ ಮತ್ತೊಂದು ಪಟ್ಟಿಯನ್ನು ಅಧಿಕೃತ ಲೆಟರ್ ಹೆಡ್‌ನಲ್ಲಿ ರಾಜ್ಯ ನಾಯಕತ್ವಕ್ಕೆ ಹೈಕಮಾಂಡ್‌ ರವಾನಿಸಿದೆ.

ಆದರೆ, ಹೈಡ್ರಾಮಾ ಇಷ್ಟಕ್ಕೆ ಮುಗಿಯಲಿಲ್ಲ. ಈ ಪರಿಷ್ಕೃತ ಪಟ್ಟಿಯಲ್ಲಿ ಮಹಿಳೆ, ಕುರುಬ ಜಾತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಪ್ರಾತಿನಿಧ್ಯದ ಅಡಿಯಲ್ಲಿ ಗಾಯತ್ರಿ ಶಾಂತೇಗೌಡ ಅವರು ಹೆಸರು ಸ್ಥಾನ ಪಡೆದಿದ್ದರು.

ಸಿದ್ದರಾಮಯ್ಯ ಅವರಿಂದ ತೀವ್ರ ಆಕ್ಷೇಪ

ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಎಲ್ಲಿಯವರೆಗೂ ಎಂದರೆ ತಮ್ಮನ್ನು ಕಾಣಲು ಬಂದ ಗಾಯತ್ರಿ ಶಾಂತೇಗೌಡ ಅವರಿಗೆ ಖುದ್ದು ಸಿದ್ದರಾಮಯ್ಯ ಅವರೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸದಂತೆ ಸೂಚನೆ ನೀಡಿದ್ದಾರೆ.

ಅಲ್ಲದೆ, ಹೈಕಮಾಂಡ್‌ ನಾಯಕರಿಗೆ ದೂರವಾಣಿ ಕರೆ ಮಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಆಕ್ಷೇಪಕ್ಕೆ ಮೂಲ ಕಾರಣ ಕುರುಬ ಸಮುದಾಯದಿಂದ ಬ್ಯಾಡಗಿಯ ಬಸವರಾಜ ಶಿವಣ್ಣವರ್ ಹೆಸರು ಸೂಚಿಸಿದ್ದ ಸಿದ್ದರಾಮಯ್ಯ ಅವರಿಗೆ ಗಾಯತ್ರಿ ಶಾಂತೇಗೌಡ ಅವರನ್ನು ಹೈಕಮಾಡ್‌ ಪರಿಗಣಿಸಿದ್ದು, ರುಚಿಸಿಲ್ಲ.

ಸಿದ್ದರಾಮಯ್ಯ ತೀವ್ರ ಆಕ್ಷೇಪದ ಪರಿಣಾಮವಾಗಿ ಗಾಯತ್ರಿ ಅವರ ಹೆಸರಿಗೆ ಹೈಕಮಾಂಡ್‌ ತಡೆ ನೀಡಿದ್ದು, ಸದ್ಯಕ್ಕೆ ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲು ಸೂಚಿಸಿದೆ.

- ಸಿಎಂ ಒತ್ತಡದಿಂದಾಗಿ ಕೊನೆ ಕ್ಷಣದಲ್ಲಿ ಬಾಲಕೃಷ್ಣ ಸೇರ್ಪಡೆ । ಪಟ್ಟಿ ಬಿಡುಗಡೆ ಬಳಿಕವೂ ಹೆಸರು ಬದಲಾವಣೆ ಆಟ

- ಮಂತ್ರಿ ಪಟ್ಟಿಯಲ್ಲಿದ್ದ ಮಂಕಾಳ ವೈದ್ಯ ಕೈಬಿಟ್ಟು ಮಲ್ಲಿಕಾರ್ಜುನಗೆ ಸ್ಥಾನ । ಗಾಯತ್ರಿ ಶಾಂತೇಗೌಡ ಹೆಸರಿದ್ರೂ ತಡೆ

- ಸಚಿವ ಸ್ಥಾನ ವಂಚಿತರಿಂದ ಬಂಡಾಯ: ಇಂಡಿ ಶಾಸಕ ರಾಜೀನಾಮೆ । ಮತ್ತಷ್ಟು ಶಾಸಕರ ಆಕ್ರೋಶ, ಪ್ರತಿಭಟನೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಾರ್... ನಾನ್ ನಿಮ್ ಅಭಿಮಾನಿ! - ಕುಡಿದ ಮತ್ತಲ್ಲಿ ಡಿಕೆಶಿ ಭೇಟಿಗೆ ಬಂದಿದ್ದ ವ್ಯಕ್ತಿಯಿಂದ ಪೊಲೀಸರಿಗೆ ಪೀಕಲಾಟ
ಇಂದು ಸಂಜೆ ಡಿಕೆಶಿ ಸಂಪುಟದ ಹೊಸ ಸಚಿವರ ಪ್ರಮಾಣ ವಚನ?