;Resize=(412,232))
ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಬಹುತೇಕ ಕೂಡಿ ಬಂದಿದೆ. ಸೋಮವಾರ ಬೆಳಗ್ಗೆ ಹೈಕಮಾಂಡ್ ನಾಯಕರು ಮತ್ತೊಮ್ಮೆ ಸಭೆ ಸೇರಲಿದ್ದು, ಬೆಳಗ್ಗೆ 10.30ರ ಹೊತ್ತಿಗೆ ನೂತನ ಸಚಿವರ ಪಟ್ಟಿ ರಾಜ್ಯ ನಾಯಕರ ಕೈ ಸೇರಲಿದೆ. ಸಂಜೆ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಲ್ಲಿಸಿರುವ ಪ್ರತ್ಯೇಕ ಸಚಿವರ ಪಟ್ಟಿ ಬಗ್ಗೆ ಹೈಕಮಾಂಡ್ ಸೋಮವಾರ ಬೆಳಗ್ಗೆ 8.30ಕ್ಕೆ ಸಭೆ ನಡೆಸಿ ಮತ್ತೊಮ್ಮೆ ವಿವರವಾಗಿ ಚರ್ಚಿಸಿ ಪಟ್ಟಿಗೆ ಅಂತಿಮ ಒಪ್ಪಿಗೆ ನೀಡುವ ಸಂಭವವಿದೆ.
ಒಂದು ವೇಳೆ ಗೊಂದಲ ಮುಂದುವರೆದರೆ ಮಾತ್ರ ಸಂಪುಟ ವಿಸ್ತರಣೆ ಕಾರ್ಯಕ್ರಮ ಮುಂದೂಡಬಹುದು. ಆದರೆ ಮೂಲಗಳ ಪ್ರಕಾರ, ಈ ಸಂದರ್ಭ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ವಿಸ್ತರಣೆಯ ಕುರಿತು ದೆಹಲಿಯ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಭಾನುವಾರ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆ ಮೂಲಕ ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆ, ಸಚಿವಾಕಾಂಕ್ಷಿಗಳ ಲಾಬಿ, ರಾಜ್ಯ ನಾಯಕರ ದೆಹಲಿ ಪರೇಡ್‌ಗಳಿಗೆ ಪೂರ್ಣ ವಿರಾಮ ಬೀಳುವ ನಿರೀಕ್ಷೆಯಿದೆ.
ಜೂ.3ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ 13 ಮಂದಿ ಸಚಿವರ ಜತೆ ಪ್ರಮಾಣವಚನ ಸ್ವೀಕರಿಸಿದ್ದರು. ಅಂದಿನಿಂದ ಖಾಲಿ ಇರುವ 20 ಸಚಿವ ಸ್ಥಾನಗಳ ಭರ್ತಿ ಕುರಿತು ಎರಡು ತಿಂಗಳಿಂದ ಚರ್ಚೆ ನಡೆಯುತ್ತಿತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ರಾಜ್ಯ ನಾಯಕರು ಮೂರು ಬಾರಿ ದೆಹಲಿಗೆ ತೆರಳಿದ್ದರೂ ಪಟ್ಟಿ ಕುರಿತು ಒಮ್ಮತ ಮೂಡಿರಲಿಲ್ಲ.
ಸೋಮವಾರ ಬೆಳಗ್ಗೆ ಪಟ್ಟಿ ಕೈಸೇರುವ ನಿರೀಕ್ಷೆ ಇದ್ದು, ಸಂಜೆ ಲೋಕಭವನದಲ್ಲಿ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಗೋಪ್ಯತಾ ವಿಧಿ ಬೋಧಿಸಲಿದ್ದಾರೆ. ಹೀಗಾಗಿ ಲೋಕಭವನದಲ್ಲಿ ಎಲ್ಲಾ ರೀತಿಯ ಸಿದ್ಧತೆ ಪೂರ್ಣಗೊಂಡಿದೆ.
ಯುವಕರು ಹಾಗೂ ಹಿರಿಯರ ಅನುಪಾತ, ಜಾತಿ, ಪ್ರಾದೇಶಿಕತೆ, ಚುನಾವಣೆ ಲೆಕ್ಕಾಚಾರಗಳ ಆದ್ಯತೆ, ಪ್ರಾಧಾನ್ಯತೆಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಅಳೆದು ತೂಗಿ ಪಟ್ಟಿ ಅಂತಿಮಗೊಳಿಸಲಿದೆ. ಹೀಗಾಗಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಚಿವರು ಯಾರೆಂಬ ಬಗ್ಗೆ ಕುತೂಹಲ ತೀವ್ರಗೊಂಡಿದ್ದು, ಊಹಾಪೋಹಗಳ ಪಟ್ಟಿ ಹರಿದಾಡುವುದು ಮುಂದುವರೆದಿದೆ.
ಭಾನುವಾರ ಸಂಜೆಯವರೆಗೆ ಲೋಕಭವನ ಕಚೇರಿಗೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ (ಶಿಷ್ಟಾಚಾರ) ಪ್ರಮಾಣವಚನ ಸ್ವೀಕಾರದ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜು.29 ರಂದೇ ಆ.3 ರಂದು ಸಂಪುಟ ವಿಸ್ತರಣೆ ಶೇ.99 ಗ್ಯಾರಂಟಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಲೋಕಭವನದ ಗಾಜಿನ ಮನೆಯಲ್ಲಿ ಜರ್ಮನ್ ಟೆಂಟ್ ಸೇರಿದಂತೆ ಎಲ್ಲ ವ್ಯವಸ್ಥೆ ಪೂರ್ಣಗೊಳಿಸಲಾಗಿದೆ.
ಭಾನುವಾರ ತಡರಾತ್ರಿವರೆಗೆ ಸಚಿವರ ಪ್ರಮಾಣವಚನ ಸ್ವೀಕಾರದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೂ ಎಲ್ಲ ಸಿದ್ಧತೆ ಪೂರ್ಣಗೊಳಿಸಿದ್ದೇವೆ. ಎರಡು ಸಾವಿರ ಪೊಲೀಸರ ನಿಯೋಜನೆ ಸೇರಿ ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ ಡಿಪಿಎಆರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಕೇರಳದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಭಾನುವಾರ ಖುದ್ದು ಪಟ್ಟಿ ತರಲಿದ್ದಾರೆ ಎಂದು ಹೇಳಲಾಗಿತ್ತಾದರೂ ಅವರು ಬಂದಿಲ್ಲ. ಸೋಮವಾರ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಅವರು ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
- ಬೆಳಗ್ಗೆ 8.30ಕ್ಕೆ ಸಚಿವರ ಪಟ್ಟಿ ಬಗ್ಗೆ ಹೈಕಮಾಂಡ್‌ನಿಂದ ಅಂತಿಮ ಸುತ್ತಿನ ಸಭೆ
- ಬಳಿಕ ರಾಜ್ಯಕ್ಕೆ ಪಟ್ಟಿ ರವಾನೆ । ಬೆನ್ನಲ್ಲೇ ಗೌರ್‍ನರ್‌ಗೆ ಮಂತ್ರಿಗಳ ಲಿಸ್ಟ್ ರವಾನೆ
- ಎಲ್ಲವೂ ಸುಸೂತ್ರವಾದರೆ ಇಂದೇ ಶಪಥ । ಗೊಂದಲವಾದರಷ್ಟೇ ಮುಂದೂಡಿಕೆ
- ಸಿದ್ದರಾಮಯ್ಯ ರಾಜೀನಾಮೆ ಬಳಿಕ ಜೂ.3ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್
- ಲೋಕಭವನದಲ್ಲಿ ಉಪಮುಖ್ಯಮಂತ್ರಿಯಾಗಿ ಡಾ। ಜಿ. ಪರಮೇಶ್ವರ್ ಸೇರಿದಂತೆ 12 ಮಂದಿಯಿಂದ ಸಚಿವರಾಗಿ ಶಪಥಗ್ರಹಣ
- ಸಂಪುಟದಲ್ಲಿ ಖಾಲಿ ಉಳಿದಿದ್ದ 20 ಹುದ್ದೆಗಳಲ್ಲಿ ಸ್ಥಾನ ಪಡೆಯಲು ಶಾಸಕರಿಂದ ತೀವ್ರ ಲಾಬಿ. ದೆಹಲಿಗೂ ಹಲವು ಸಲ ಯಾತ್ರೆ
- ಸಂಪುಟ ವಿಸ್ತರಣೆಗಾಗಿ ಡಿಕೆ, ಬಿಕೆ, ಸಿದ್ದರಾಮಯ್ಯ ಅವರಿಂದಲೂ ದೆಹಲಿ ಪ್ರವಾಸ. ರಾಹುಲ್ ಅಲಭ್ಯರಾದ ಹಿನ್ನೆಲೆಯಲ್ಲಿ ಕಗ್ಗಂಟು
- ವರಿಷ್ಠರಿಗೆ ತಮ್ಮ ಕಡೆಯಿಂದ ಹೆಸರುಗಳನ್ನು ಕೊಟ್ಟು ರಾಜ್ಯಕ್ಕೆ ಮರಳಿದ್ದ ನಾಯಕರು. ಹೈಕಮಾಂಡ್ ಮಟ್ಟದಲ್ಲಿ ಪಟ್ಟಿ ಬಗ್ಗೆ ಚರ್ಚೆ
- ವೇಣುಗೋಪಾಲ್ ಮೂಲಕ ಸಚಿವರ ಪಟ್ಟಿ ಕಳುಹಿಸುವುದಾಗಿ ಹೇಳಿದ್ದ ಹೈಕಮಾಂಡ್. ಆದರೆ ವೇಣುಗೋಪಾಲ್ ಬರೋದು ಡೌಟು
ಯಾರಿಗೆ ಹುದ್ದೆ? ಎಲ್ಲವೂ ಸೀಕ್ರೆಟ್
ರಾಜ್ಯ ನಾಯಕರು ತಮ್ಮ ಆಯ್ಕೆಗಳ ಕುರಿತು ಪ್ರತ್ಯೇಕ ಪಟ್ಟಿಗಳನ್ನು ವರಿಷ್ಠರಿಗೆ ನೀಡಿ ಬಂದಿದ್ದಾರೆ. ಆ ಪೈಕಿ ಯಾರ ಹೆಸರುಗಳು ಅಂತಿಮವಾಗಿದೆ? ಅಂತಿಮ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಗಿಟ್ಟಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಭಾನುವಾರದವರೆಗೆ ರಾಜ್ಯದ ಘಟಾನುಘಟಿ ನಾಯಕರಿಗೂ ಸಂಪುಟಕ್ಕೆ ಸೇರ್ಪಡೆಯಾಗಲಿರುವವರ ಹೆಸರುಗಳ ಖಚಿತ ಮಾಹಿತಿ ಇಲ್ಲ. ಸಂಭಾವ್ಯರ ಬಗ್ಗೆಯೂ ಸುಳಿವಿಲ್ಲ ಎನ್ನಲಾಗಿದೆ. ಹೀಗಾಗಿ ಪಟ್ಟಿಯಲ್ಲಿ ಯಾರ ಹೆಸರುಗಳು ಇರಲಿವೆ ಎಂಬ ಬಗ್ಗೆ ಕುತೂಹಲ ತೀವ್ರಗೊಂಡಿದೆ.
ಶಪಥಗ್ರಹಣಕ್ಕೆ ಸಿದ್ಧತೆ ಪೂರ್ಣ
ಭಾನುವಾರ ಸಂಜೆಯವರೆಗೆ ಲೋಕಭವನ ಕಚೇರಿಗೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ (ಶಿಷ್ಟಾಚಾರ) ಪ್ರಮಾಣವಚನ ಸ್ವೀಕಾರದ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜು.29 ರಂದೇ ಆ.3 ರಂದು ಸಂಪುಟ ವಿಸ್ತರಣೆ ಶೇ.99 ಗ್ಯಾರಂಟಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಲೋಕಭವನದ ಗಾಜಿನ ಮನೆಯಲ್ಲಿ ಜರ್ಮನ್ ಟೆಂಟ್ ಸೇರಿದಂತೆ ಎಲ್ಲ ವ್ಯವಸ್ಥೆ ಪೂರ್ಣಗೊಳಿಸಲಾಗಿದೆ.