ರಾಜ್ಯಕ್ಕೆ ಅಮಿತ್‌ ಶಾ : ಚುನಾವಣಾ ಪ್ರಚಾರಕ್ಕೆ ಚಾಣಾಕ್ಯ

KannadaprabhaNewsNetwork |  
Published : Mar 31, 2024, 02:02 AM ISTUpdated : Mar 31, 2024, 04:31 AM IST
ಅಮಿತ್‌ ಶಾ | Kannada Prabha

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಏ.2ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು :  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಏ.2ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಏ.2ರಂದು ಚನ್ನಪಟ್ಟಣದಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ದೇಶ ಒಡೆಯುವವರು ಬೇಕೇ ಅಥವಾ ದೇಶ ಒಂದು ಮಾಡುವವರು ಬೇಕೇ ಎಂಬ ಪ್ರಶ್ನೆಯ ಅಡಿಯಲ್ಲೇ ಈ ಚುನಾವಣೆ ನಡೆಯಲಿದೆ. ದೇಶ ಒಡೆಯುವ ಮಾನಸಿಕತೆಯನ್ನೇ ಸಮರ್ಥಿಸುವ ಕಾಂಗ್ರೆಸ್, ದೇಶ ಒಂದು ಮಾಡುವುದಾಗಿ ಸಂದೇಶ ನೀಡುವ ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ ಎಂದರು.

ಅಂದು ಅಮಿತ್ ಶಾ ಅವರು ಬೆಳಿಗ್ಗೆ 9 ಗಂಟೆಗೆ ಎರಡೂ ಪಕ್ಷಗಳ ಪ್ರಮುಖ ನಾಯಕರ ಜೊತೆ ಉಪಾಹಾರ ಸೇವಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಮಧ್ಯಾಹ್ನ 2 ಗಂಟೆಯಿಂದ 5ರವರೆಗೆ ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಕ್ಷೇತ್ರಗಳ ಪ್ರಮುಖರ ಜೊತೆ ಪ್ರತ್ಯೇಕವಾದ ಸಭೆ ನಡೆಯಲಿದೆ. ಸಂಜೆ 6ಕ್ಕೆ ಚನ್ನಪಟ್ಟಣದಲ್ಲಿ ರೋಡ್ ಶೋ ಇರುತ್ತದೆ. ಚುನಾವಣಾ ಪ್ರಚಾರಕ್ಕೆ ಇದು ಹೆಚ್ಚಿನ ವೇಗ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮಿತ್‌ ಶಾ ಅವರು 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ದೇಶ ಒಂದು ಎಂಬ ಸಂದೇಶ ನೀಡುವ ಗಟ್ಟಿತನದ ನಿರ್ಧಾರ ಪ್ರಕಟಿಸಿದವರು. ಅವರ ರಾಜ್ಯ ಭೇಟಿ ನಮ್ಮಲ್ಲಿ ಉತ್ಸಾಹ ಮೂಡಿಸುತ್ತಿದೆ. ದೇಶ ಒಡೆಯುವ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ನಮ್ಮ ಕಣ್ಮುಂದೆ ಇದ್ದಾರೆ. ದೇಶ ವಿಭಜನೆಯು ಕಾಂಗ್ರೆಸ್ ಮಾನಸಿಕತೆ. ಆದರೆ, ನಮ್ಮ ಮಾನಸಿಕತೆ ದೇಶ ಜೋಡಿಸುವುದು ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್ ಮಾಕನೂರು, ರಾಜ್ಯ ವಕ್ತಾರ ಮೋಹನ್ ವಿಶ್ವ ಮತ್ತಿತರರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''
ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!