ನಮ್ಮಲ್ಲಿ ಎಷ್ಟು ಮಂದಿ ಸಿಎಂಗಳಿದ್ದರೆ ಇವರಿಗೇನು?

KannadaprabhaNewsNetwork |  
Published : Mar 20, 2024, 01:21 AM IST
೧೯ಕೆಜಿಎಫ್೧ಕೆಜಿಎಫ್ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ೮೦ನೇ ವರ್ಷದ ಶಿಭಿಕವಾಹನೋತ್ಸವ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿಯೂ ಮೋದಿ ಷಾ ಅವರನ್ನು ನೋಡಿ ರಾಜ್ಯದ ಜನತೆ ಓಟುಗಳನ್ನು ಹಾಕುವುದಿಲ್ಲ, ರಾಜ್ಯದಲ್ಲಿ ನರೇಂದ್ರ ಮೋದಿಯಾಗಲೀ, ಅಮಿತ್‌ ಷಾ ಅವರಾಗಲೀ ಏನು ಕೆಲಸ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ನಮ್ಮಲ್ಲಿ ಎಷ್ಟು ಮಂದಿ ಸಿಎಂಗಳಿದ್ದರೆ ಇವರಿಗೇನು, ಮೊದಲು ಅವರದ್ದು ಅವರು ನೋಡಿಕೊಳ್ಳಲಿ ಎಂದು ಪ್ರಧಾನಿ ಮೋದಿ ಹೇಳಿಕೆಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.

ನಗರದ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ೮೦ನೇ ವರ್ಷದ ಶಿಬಿಕವಾಹನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ ಟೀಕಿಸಲು ನೈತಿಕ ಹಕ್ಕಿಲ್ಲ

ಶಿವಮೊಗ್ಗದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ರಾಜ್ಯದಲ್ಲಿ ಸೂಪರ್ ಸಿಎಂ, ಫ್ಯೂಚರ್ ಸಿಎಂ, ಶ್ಯಾಡೋ ಸಿಎಂ, ಸಿಎಂ ಇನ್ ವೆಯ್ಟಿಂಗ್ ಇವರ ಜೊತೆಗೆ ದೆಹಲಿಯಲ್ಲಿ ಒಬ್ಬ ಕಲೆಕ್ಷನ್ ಮಿನಿಸ್ಟರ್ ಸೇರಿ ಒಟ್ಟು ೫ ಮಂದಿ ಸಿಎಂಗಳಿದ್ದಾರೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರೈತರು ಕಷ್ಟದಲ್ಲಿದ್ದಾರೆ, ನೀರಿಗೆ ಹಾಹಾಕಾರ ಉಂಟಾಗಿ ಜನತೆ ತತ್ತರಿಸುತ್ತಿದ್ದರೂ ನೆರವಿಗೆ ಬಾರದೇ ಇದ್ದಂತಹ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಮತ್ತು ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಖಾರವಾಗಿ ನುಡಿದರು.

ರಾಜ್ಯಕ್ಕೆ ಮೋದಿ ಏನು ಕೊಟ್ಟಿದ್ದಾರೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ನರೇಂದ್ರ ಮೋದಿ ರಾಜ್ಯಕ್ಕೆ ೨೯ ಬಾರಿ ಮತ್ತು ಅಮಿತ್‌ ಷಾ ೨೧ ಬಾರಿ ಬಂದಿದ್ದರು. ಆದರೆ ಇವರ ಮುಖಗಳನ್ನು ನೋಡಿ ರಾಜ್ಯದ ಜನತೆ ಓಟು ಹಾಕಿದರೆ ಎಂದು ಪ್ರಶ್ನಿಸಿದ ಸಚಿವರು, ಬಿಜೆಪಿಗೆ ಕೇವಲ ೬೫ ಸ್ಥಾನಗಳು ದೊರೆತವು. ಈಗ ನಡೆಯುವ ಲೋಕಸಭಾ ಚುನಾವಣೆಯಲ್ಲಿಯೂ ಇವರನ್ನು ನೋಡಿ ರಾಜ್ಯದ ಜನತೆ ಓಟುಗಳನ್ನು ಹಾಕುವುದಿಲ್ಲ, ರಾಜ್ಯದಲ್ಲಿ ನರೇಂದ್ರ ಮೋದಿಯವರಾಗಲೀ, ಅಮಿತ್‌ಷಾ ಅವರಾಗಲೀ ಏನು ಕೆಲಸ ಮಾಡಿದ್ದಾರೆ ಎಂದು ಮತ ಕೇಳಲು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇಶದ ಸಾಲದ ಪ್ರಮಾಣ ಸುಮಾರು ೧೮೫ ಲಕ್ಷ ಕೋಟಿಯಷ್ಟಾಗಿದ್ದು, ಕಳೆದ ೧೦ ವರ್ಷಗಳಲ್ಲಿ ಮೋದಿ ಒಬ್ಬರೇ ೧೩೦ ಲಕ್ಷ ಕೋಟಿಗೂ ಮಿಗಿಲಾಗಿ ಸಾಲ ಮಾಡಿರುವುದೇ ಇವರ ದೊಡ್ಡ ಸಾಧನೆ. ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ೧.೫ ಲಕ್ಷ ಸಾಲವನ್ನಿಡುವ ಮೂಲಕ ಸಾಲದ ಸುಳಿಗೆ ದೇಶವನ್ನು ದೂಡಿದ್ದಾರೆ ಎಂದರು.

ಕೋಲಾರದಲ್ಲಿ ಕಾಂಗ್ರೆಸ್‌

ಈ ಬಾರಿ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೂರಕ್ಕೆ ನೂರರಷ್ಟು ಭಾಗ ಪ್ರತಿನಿಧಿಸುವುದು ಮತ್ತು ಗೆಲ್ಲುವುದು ಗ್ಯಾರಂಟಿಯಾಗಿದೆ. ಕಳೆದ ೫ ವರ್ಷದಿಂದ ಕೋಲಾರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿ ಸಂಸದರು ನಡೆದುಕೊಂಡಿರುವ ರೀತಿಯನ್ನು ಜನತೆ ಹತ್ತಿರದಿಂದ ಕಂಡಿದ್ದಾರೆ. ೨೦೧೯ರ ಚುನಾವಣೆಯಲ್ಲಿ ನಮ್ಮಲ್ಲಿ ಒಳಗುಂಪು, ಸ್ವಲ್ಪ ಜಗಳ ಇದ್ದಿದ್ದು ನಿಜ. ಆದರೆ ಕೆಲಸ ಮಾಡುವುದರಲ್ಲಿ ಕೆ.ಎಚ್.ಮುನಿಯಪ್ಪ ಯಾವತ್ತೂ ಹಿಂದೆ ಬಿದ್ದಿಲ್ಲ, ಕೆಲಸ ಮಾಡುವುದರಲ್ಲಿ ಅವರು ನಂ.೧ ಆಗಿದ್ದಾರೆ ಎಂದರು.

ಅಧಿಕಾರವಿಲ್ಲದೆ ಬಿಜೆಪಿ ಒದ್ದಾಡುತ್ತಿದೆ

ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜ್ಯ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿರುವುದಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿಯವರಾಗಲೀ ಅಥವಾ ಆ ರೀತಿ ಹೇಳಿಕೆಗಳನ್ನು ನೀಡುವವರಾಗಲೀ ಸ್ವಲ್ಪ ಯೋಚಿಸಿ ಮಾತನಾಡಬೇಕು. ಕಾಂಗ್ರೆಸ್‌ ಬಲ ೮೩ ಸ್ಥಾನಗಳಿಗೆ ಇಳಿದಲ್ಲಿ ಮಾತ್ರ ಸರ್ಕಾರ ಪತನವಾಗುತ್ತದೆ. ಹೀಗೆ ಆಗಬೇಕಾದಲ್ಲಿ ಕಾಂಗ್ರೆಸ್‌ನ ೫೫ ಮಂದಿ ರಾಜೀನಾಮೆ ನೀಡಬೇಕು, ಇದು ಸಾಧ್ಯವೇ? ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಬಿಜೆಪಿಯವರು ನೀರಿನಿಂದ ಹೊರಹಾಕಿದ ಮೀನಿನಂತಾಗಿದ್ದು, ವಿಲವಿಲನೆ ಒದ್ದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ರೆಡ್ಡಿ ಜನಸಂಘದ ಅಧ್ಯಕ್ಷ ಜಯರಾಮರೆಡ್ಡಿ, ಉಪಾಧ್ಯಕ್ಷ ಲಕ್ಷ್ಮಣ್‌ರೆಡ್ಡಿ, ರೆಡ್ಡಿ ಚಾರಿಟಬಲ್ ಟ್ರಸ್ಟ್ ತಾಲೂಕು ಅಧ್ಯಕ್ಷ ಶೇಖರ್ ರೆಡ್ಡಿ, ಕಿರಣ್‌ಕುಮಾರ್ ರೆಡ್ಡಿ, ಕೆ.ಚಂದ್ರಾರೆಡ್ಡಿ, ಪ್ರಸನ್ನರೆಡ್ಡಿ, ರವಿರೆಡ್ಡಿ ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ