ನಾನು ಹಾದೀಬೀದಿ ವ್ಯಕ್ತಿಯಲ್ಲ, ರೆಡ್ಡಿಯಿಂದ ನನಗೇನೂ ಲಾಭವಾಗಿಲ್ಲ : ಶ್ರೀರಾಮುಲು

Published : Jan 24, 2025, 07:40 AM IST
Sriramulu

ಸಾರಾಂಶ

ನಾನು ಹಾದಿ ಬೀದಿಯಿಂದ ಬಂದ ವ್ಯಕ್ತಿಯಲ್ಲ. ರಾಜಕೀಯ ಹಿನ್ನೆಲೆ ಇರುವ ಕುಟುಂಬ ನಮ್ಮದು. ಜನಾರ್ದನ ರೆಡ್ಡಿಯಿಂದ ನನಗೆ ಯಾವುದೇ ರೀತಿಯ ಲಾಭ ಆಗಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒಂದು ಕಾಲದ ತಮ್ಮ ಆತ್ಮೀಯ ಮಿತ್ರ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಬಳ್ಳಾರಿ : ನಾನು ಹಾದಿ ಬೀದಿಯಿಂದ ಬಂದ ವ್ಯಕ್ತಿಯಲ್ಲ. ರಾಜಕೀಯ ಹಿನ್ನೆಲೆ ಇರುವ ಕುಟುಂಬ ನಮ್ಮದು. ಜನಾರ್ದನ ರೆಡ್ಡಿಯಿಂದ ನನಗೆ ಯಾವುದೇ ರೀತಿಯ ಲಾಭ ಆಗಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒಂದು ಕಾಲದ ತಮ್ಮ ಆತ್ಮೀಯ ಮಿತ್ರ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಂಡೂರು ಉಪಚುನಾವಣೆಯಲ್ಲಿ ಸೋಲಿನ ಗದ್ದಲ, ಆ ಬಗ್ಗೆ ತಾವು ಮಾಡಿದ ಆರೋಪಗಳಿಗೆ ಜನಾರ್ದನ ರೆಡ್ಡಿ ಗುರುವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು ತಮ್ಮ ಮೇಲಿನ ಆರೋಪಗಳಿಗೆ ಪಟಾಫಟ್‌ ತಿರುಗೇಟು ನೀಡುವ ಯತ್ನ ಮಾಡಿದರು.

ಸೋಮವಾರ ನಡೆದ ಕೋರ್‌ಕಮಿಟಿ ಸಭೆಯಲ್ಲಿ ತಮಗಾದ ಅವಮಾನದಿಂದ ಇನ್ನೂ ಹೊರಬದಂತೆ ಕಾಣದ ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ಜನಾರ್ದನ ರೆಡ್ಡಿ ಜತೆ ನನ್ನ ಮನಸ್ಸು ಮುರಿದಿದೆ. ಮತ್ತೆ ಕೂಡೋದು ಕಷ್ಟ. ಆತ ನನ್ನ ರಾಜಕೀಯ ಜೀವನಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಆತನ ಎಲ್ಲ ಕುಕೃತ್ಯವನ್ನು ದಾಖಲೆ ಸಮೇತ ಬಿಚ್ಚಿಡುವೆ ಎಂದು ಎಚ್ಚರಿಕೆಯ ಜೊತೆಗೆ ಆರೋಪಗಳ ಸುರಿಮಳೆಗೈದರು.

ಒಂದು ಕಾಲದ ಆಪ್ತಮಿತ್ರ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶ್ರೀರಾಮುಲು, ನಾನು ಬೀದಿಯಿಂದ ಮೇಲೆ ಬಂದಿದ್ದೇನೆಯೇ ಹೊರತು ಹೆಲಿಕಾಪ್ಟರ್‌ನಿಂದ ಬಂದಿಲ್ಲ. ನನ್ನ ಸ್ವಾಭಿಮಾನಕ್ಕೆ ಚ್ಯುತಿಯಾದರೆ ರೆಬೆಲ್ ಆಗುತ್ತೇನೆ. ಯಾವ ಅನುಮಾನವೂ ಬೇಡ. ಜನಾರ್ದನ ರೆಡ್ಡಿ ಕೃಪಾಕಟಾಕ್ಷ ನನಗೆ ಅಗತ್ಯವಿಲ್ಲ ಎಂದು ಹೇಳಿದರು.

ಕೂಡ್ಲಿಗಿಯಿಂದಲೇ ಸ್ಪರ್ಧಿಸುವೆ:

‘ಬರುವ ಚುನಾವಣೆಯಲ್ಲಿ ಕೂಡ್ಲಿಗಿಯಿಂದಲೇ ಸ್ಪರ್ಧೆ ಮಾಡುವೆ. ರಾಜ್ಯದ ನಾನಾ ಕಡೆಗಳಿಂದ ನನಗೆ ಸ್ಪರ್ಧಿಸಲು ಆಹ್ವಾನವಿದೆ. ಆದರೆ, ಹನುಮಂತ (ಬಂಗಾರು ಹನುಮಂತು) ಬೇಡ ಎನ್ನುತ್ತಿದ್ದಾನೆ. ಜನಾರ್ದನ ರೆಡ್ಡಿ ಜತೆ ಸೇರಿಕೊಂಡು ಹನುಮಂತ ಹೀಗಾಗಿದ್ದಾನೆ. ಹನುಮಂತ ಬೆಳೀಬೇಕು, ಆದರೆ ಆತ ಬಹಳ ಸ್ಪೀಡ್ ಇದ್ದಾನೆ. ಸ್ಪೀಡ್ ಇದ್ದಾಗ ಅಪಘಾತಗಳು ಸಂಭವಿಸುತ್ತವೆ’ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ಗೆ ಹೋಗಲ್ಲ:

ಬಿಜೆಪಿಯಲ್ಲಿ ನಾನು ಶಕ್ತಿವಂತನಾಗಿದ್ದೇನೆ. ಕಾಂಗ್ರೆಸ್‌ಗೆ ಹೋದರೆ ಶೂನ್ಯವಾಗುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಸತೀಶ್ ಜಾರಕಿಹೊಳಿಗೆ ಪರ್ಯಾಯವಾಗಿ ಬೆಳೆಸಲು ಡಿ.ಕೆ. ಶಿವಕುಮಾರ್ ನನ್ನನ್ನು ಕರೆದಿದ್ದಾರೆ ಎಂಬುದು ಸುಳ್ಳು. ನಾನು ಅಶಕ್ತ ನಾಯಕನಲ್ಲ. ಪರಿಶಿಷ್ಟ ಜಾತಿ ಪ್ರಬಲ ನಾಯಕನಾಗಿದ್ದೇನೆ. ಇದನ್ನು ಜನಾರ್ದನ ರೆಡ್ಡಿ ಮರೆಯಬಾರದು. ರಮೇಶ ಜಾರಕಿಹೊಳಿ, ಯತ್ನಾಳ ನನ್ನ ಸ್ನೇಹಿತರು. ಆದರೆ, ನಾನು ಅವರು ಕರೆದ ಸಭೆಗೆ ಹೋಗಿಲ್ಲ ಎಂದು ಶ್ರೀರಾಮುಲು ವಿವರಿಸಿದರು.

‍ವಿಜಯೇಂದ್ರ ರಕ್ಷಣೆಗೆ ಬರಲಿಲ್ಲ:

ಕೋರ್‌ ಕಮಿಟಿ ಸಭೆಯಲ್ಲಿ ರಾಧಾಮೋಹನ ದಾಸ್‌ ನನ್ನನ್ನು ಅಸಹ್ಯವಾಗಿ ನೋಡಿದರು. ಸಂಡೂರು ಸೋಲಿಗೆ ನೀನೇ ಕಾರಣ ಎಂದು ನೇರವಾಗಿ ಆರೋಪ ಮಾಡಿದರು. ಡಬಲ್‌ ಗೇಮ್‌ ಮಾಡ್ತೀರ ಎಂದ್ರು. ಆರಂಭದಿಂದಲೂ ಚುನಾವಣಾ ಪ್ರಚಾರ ಮಾಡಿದ್ದೇನೆ. ಪಕ್ಷದ ಪರ ಪ್ರಾಮಾಣಿಕವಾಗಿ ಇದ್ದೇನೆ ಎಂದು ಹೇಳಿದರೂ ಕೇಳಿಸಿಕೊಳ್ಳಲಿಲ್ಲ. ಆಗ ನೀವು ಅವಮಾನ ಮಾಡಿ ನೋವು ಕೊಡ್ತಿದ್ದೀರಾ, ಗಾಯದ ಮೇಲೆ ಬರೆ ಎಳೆಯಬೇಡಿ ಎಂದು ಹೇಳಿ ಎದ್ದು ಬಂದೆ. ಪಕ್ಷದ ಅಧ್ಯಕ್ಷರು ನನ್ನ ರಕ್ಷಣೆಗೆ ಬರಲಿಲ್ಲ, ವಿಜಯೇಂದ್ರ ಬಳಿಯೇ ನೇರವಾಗಿ ಹೇಳಿದೆ, ನಾನೇನೂ ಮಾಡೋಕೆ ಆಗೋಲ್ಲ ಎಂದರು ಎಂದು ತಿಳಿಸಿದರು.

ಆಗಲೇ ಮಾಧ್ಯಮದ ಮುಂದೆ ಹೇಳಲು ಹೋದಾಗ ಸಿ.ಟಿ.ರವಿ ಕೋರ್‌ ಕಮಿಟಿ ವಿಷಯ ಮಾಧ್ಯಮದ ಮುಂದೆ ಹೇಳಬಾರದು ಎಂದರು. ಆದರೆ ಏನೂ ಮಾತನಾಡದೇ ಇದ್ದರೆ ನಾನೇ ತಪ್ಪಿತಸ್ಥನಾಗುತ್ತೇನೆ ಎಂದು ಇಂದು ಸ್ಪಷ್ಟನೆ

ಕೊಡುತ್ತಿದ್ದೇನೆ ಎಂದರು.

ಪಕ್ಷ ಬಿಡುವ ಸಂದರ್ಭ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ಪಕ್ಷದ ವರಿಷ್ಠರು, ಸಂಘದ ಪ್ರಮುಖರನ್ನೂ ಭೇಟಿಯಾಗಿ ಎಲ್ಲವನ್ನೂ ವಿವರಿಸುವುದಾಗಿ ಅವರು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು