ಬೆಂಗಳೂರು ದಕ್ಷಿಣ : ಮತಯಾಚನೆ ವೇಳೆಯಲ್ಲಿ ಕಾರ್ಯಕರ್ತರ ಹುಮ್ಮಸ್ಸು ಹಾಗೂ ಮತದಾರರು ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ರಾಜಕೀಯ ಮಾಡಲು ಈ ಕ್ಷೇತ್ರ ಆರಿಸಿಕೊಂಡಿಲ್ಲ. ಬದಲಾಗಿ ಸೇವೆ ಮಾಡಲು ಬಂದಿದ್ದೇನೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ। ಸಿ.ಎನ್.ಮಂಜುನಾಥ್ ಹೇಳಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ವಾರ್ಡ್‌ನ ಬಿಬಿಎಂಪಿ ಆಟದ ಮೈದಾನದಲ್ಲಿ ಬೆಳ್ಳಂಬೆಳಗ್ಗೆ ನಡಿಗೆದಾರರ ಜೊತೆ ಮತಯಾಚನೆ ವೇಳೆಯಲ್ಲಿ ಮಾತನಾಡಿದ ಅವರು, ಯಾರನ್ನು ಟೀಕಿಸಲು ಹೋಗುವುದಿಲ್ಲ, ಜಯದೇವ ಆಸ್ಪತ್ರೆಯ ನಿರ್ದೇಶಕನಾಗಿ ರೈತರು, ಬಡವರು ಹಾಗೂ ಕೂಲಿ ಕಾರ್ಮಿಕರ ಕಷ್ಟಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ, ಚಿಕಿತ್ಸೆ ಮೊದಲು ಹಣ ಪಾವತಿ ನಂತರ ಎಂಬ ಧ್ಯೇಯದಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದೇನೆ, ರಾಜಕೀಯಕ್ಕೆ ಹೊಸಬನಾದರೂ ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡಿದ್ದೇನೆ ಎಂದರು.
ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕೆಂಬ ಸಂಕಲ್ಪ ಹಾಗೂ ನಿರಂತರ ಸೇವೆಗೈಯಲು ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ನನ್ನನ್ನು ಅತಿ ಹೆಚ್ಚಿನ ಮತಗಳು ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಡಾ। ಮಂಜುನಾಥ್ ಅವರು ಜಯದೇವ ಆಸ್ಪತ್ತೆಯಲ್ಲಿ ವೈದ್ಯರಾಗಿ ಲಕ್ಷಾಂತರ ಜನರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಇಂತಹ ಜನಪರ ವ್ಯಕ್ತಿ ಉತ್ತಮ ಅಭ್ಯರ್ಥಿ ನಮಗೆ ಸಿಕ್ಕಿರುವುದೇ ಪುಣ್ಯ. ಲೋಕಸಭೆಗೆ ಕಳುಹಿಸಿ ಆರೋಗ್ಯ ಮಂತ್ರಿಯನ್ನಾಗಿಸಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಮತದಾರರು ಅತಿ ಹೆಚ್ಚಿನ ಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಹುಲ್ಲಹಳ್ಳಿ ಶ್ರೀನಿವಾಸ್, ಲೋಕೇಶ್, ಹರೀಶ್, ಪ್ರಶಾಂತ್, ರಮೇಶ್ ಆರಾಧ್ಯ, ಶಶಿಧರ್, ಅಂತೋಣಿ, ಜಯಸಿಂಹ, ಮಧು, ನವೀನ್, ಪದ್ಮಾ ಸತೀಶ್, ಸಾಕ್ಷಿ ಮಧು, ಶಿಲ್ಪಾ, ಅರ್ಚನಾ ಇದ್ದರು.