ಮುಂದೆ ನಾನು ಮಂತ್ರಿ ಆಗಿ ಇರೋತ್ತೇನೋ ಇಲ್ಲವೋ ಗೊತ್ತಿಲ್ಲ: ವಸತಿ ಸಚಿವ ಜಮೀರ್‌ ಅಹಮದ್ ಖಾನ್!

Published : Jul 30, 2024, 12:13 PM IST
zameer

ಸಾರಾಂಶ

‘ಮುಂದೆ ನಾನು ಮಂತ್ರಿ ಆಗಿಯೇ ಇರ್ತೀನೋ ಗೊತ್ತಿಲ್ಲ. ಜೀವಂತವಾಗಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ಬೆಂಗಳೂರು : ‘ಮುಂದೆ ನಾನು ಮಂತ್ರಿ ಆಗಿಯೇ ಇರ್ತೀನೋ ಗೊತ್ತಿಲ್ಲ. ಜೀವಂತವಾಗಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ದೇವರು ಹಣೆಬರಹ ಬರೆದಿರುತ್ತಾರೆ. ಈಗ ನನ್ನನ್ನ ಅಲ್ಪಸಂಖ್ಯಾತ ಸಚಿವರಾಗಿ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಇರುತ್ತದೆ. ನಾನೇ ಅಲ್ಪಸಂಖ್ಯಾತ ಮಂತ್ರಿ ಆಗಿ ಇರುತ್ತೇನೆ ಎನ್ನುವ ವಿಶ್ವಾಸ ಇದೆ’ ಎಂದು ಮಾರ್ಮಿಕವಾಗಿ ನುಡಿದರು.

ಇದೇ ವೇಳೆ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಜಮೀರ್‌, ‘ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇರುವುದನ್ನು ಸಹಿಸಲು ಸಾಧ್ಯವಾಗದೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಯಾವತ್ತೂ ಸಿಎಂ ಆಗುವ ಅವಕಾಶ ತಮಗೆ ಸಿಗಲ್ಲ ಎನ್ನುವುದು ಬಿಜೆಪಿಗೂ, ಕುಮಾರಸ್ವಾಮಿಗೂ ಗೊತ್ತು. ಅದಕ್ಕಾಗಿ ಇಲ್ಲದ ವಿಚಾರವನ್ನು ಕೆಣಕುತ್ತಿದ್ದಾರೆ. ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನಿಲ್ಲ. ಜಮೀನಿನ ಬದಲಿಗೆ ಪರ್ಯಾಯ ನಿವೇಶನಗಳನ್ನು ಕೊಟ್ಟಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಇದರಲ್ಲಿ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ? ಈಗಲೂ ಅವರ ಮೇಲೆ ಕಪ್ಪುಚುಕ್ಕೆ ಇಲ್ಲ. ಯಾಕೆ ರಾಜೀನಾಮೆ ಕೊಡುತ್ತಾರೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ವಿರುದ್ಧ ಮಾತನಾಡಲು ಬಿಜೆಪಿಯವರಿಗೆ ಬೇರೆ ವಿಷಯಗಳಿಲ್ಲ. ಆದ್ದರಿಂದ ಮುಡಾ ವಿಚಾರದ ಹಿಂದೆ ಬಿದ್ದಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂಬುದನ್ನು ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಬೀಳುವಂಥದ್ದೇನೂ ಇಲ್ಲ’ ಎಂದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ