;Resize=(412,232))
ಚನ್ನಗಿರಿ/ದಾವಣಗೆರೆ : ಸಿಎಂ ಬದಲಾವಣೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ಶೀಘ್ರ ಇತ್ಯರ್ಥ ಆಗಬೇಕೆಂಬ ಆಸೆ ಎಲ್ಲರದ್ದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯ ವಿರಕ್ತ ಮಠದಲ್ಲಿ ಭಾನುವಾರ ಬಸವತತ್ವ ಸಮ್ಮೇಳನಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಸಿಎಂ ಬದಲಾವಣೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ಇತ್ಯರ್ಥವಾಗಬೇಕು’ ಎಂಬ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಹೇಳಿಕೆಗೆ ಧ್ವನಿಗೂಡಿಸಿದ ಸಚಿವರು, ಸಿಎಂ ಕುರ್ಚಿ ಗೊಂದಲ ಬಗೆಹರಿಯಬೇಕೆಂಬುದು ಕೇವಲ ಯಾರೋ ಒಬ್ಬ ಶಾಸಕರ ಅಭಿಪ್ರಾಯವಲ್ಲ. ಎಲ್ಲ 140 ಶಾಸಕರ ಅಭಿಪ್ರಾಯವೂ ಆಗಿದೆ. ಇದರಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.
ಸತೀಶ್ ಹೆಲಿಕಾಪ್ಟರ್‌ನಿಂದ ಇಳಿದು ಬರುತ್ತಿದ್ದಂತೆ ‘ಮುಂದಿನ ಸಿಎಂ ಸತೀಶ ಜಾರಕಿಹೊಳಿ’ ಎಂದು ಕೈಯಲ್ಲಿ ಪೋಸ್ಟರ್ ಹಿಡಿದು, ‘ನಮ್ಮ ಸಾಹುಕಾರ್-ನಮ್ಮ ಸಿಎಂ’ ಬರಹದ ಟೀ ಶರ್ಟ್ ಧರಿಸಿದ್ದ ಅಭಿಮಾನಿಗಳು ಅವರ ಪರ ಘೋಷಣೆಗಳನ್ನು ಮೊಳಗಿಸಿದರು. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ಅಭಿಮಾನಿಗಳು ನಾವು ಹೋದಲ್ಲೆಲ್ಲಾ ಘೋಷಣೆ ಮಾಡಿಯೇ ಮಾಡುತ್ತಾರೆ. ನಮ್ಮ ಮೇಲಿನ ಅಭಿಮಾನಕ್ಕಾಗಿ ಹೀಗೆಲ್ಲಾ ಮಾಡುತ್ತಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿ, ದೆಹಲಿಗೆ ಹೋಗುವುದು, ಬರುವುದು ಇದ್ದೇ ಇರುತ್ತದೆ. ಪ್ರತಿ ಸಲವೂ ಹೋಗುತ್ತಿರುತ್ತಾರೆ. ಈಗ ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ಹೋಗಿರಬಹುದು ಎಂದರು.
ನಮ್ಮದು ಈ ಅವಧಿಗೆ ಅಲ್ಲ. 2028ರ ಚುನಾವಣೆಗೆ ಬೇಡಿಕೆ ಇರುವುದು. ನಮ್ಮ ಅಭಿಮಾನಿಗಳು ಮುಂಗಡವಾಗಿ ಕ್ಲೇಮ್ ಮಾಡುತ್ತಿದ್ದಾರೆ. ಈಗ ಯಾರೂ ಸಹ ಯಾರಿಗೂ ಕನ್ಫ್ಯೂಸ್ ಮಾಡಬೇಡಿ. ಈಗ ಯಾರು ಆಗುವರೋ ಆಗಲಿ, ನಮ್ಮದು ಸಪೋರ್ಟ್ ಇದ್ದೇ ಇರುತ್ತದೆ ಎಂದು ಹೇಳಿದರು.
- ಅಭಿಮಾನಿಗಳು ಈಗಲೇ ಅಭಿಮಾನಕ್ಕೆ ಘೋಷಣೆ ಕೂಗುತ್ತಿದ್ದಾರೆ