ನಾನು ಯಾವುದೇ ಔತಣ ಕೂಟ ತಡೆದಿಲ್ಲ -ಸರ್ಕಾರ ಸುಭದ್ರ, ಸಿದ್ದು ನೇತೃತ್ವದಲ್ಲೇ ಕೆಲಸ : ಡಿಸಿಎಂ ಡಿಕೆಶಿ

Published : Jan 11, 2025, 07:50 AM IST
dk shivakumar

ಸಾರಾಂಶ

ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಯಾರೂ ಭವಿಷ್ಯ ನುಡಿಯುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಂಗಳೂರು : ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಯಾರೂ ಭವಿಷ್ಯ ನುಡಿಯುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಜೊತೆಗೆ ನಾನು ಯಾವುದೇ ಔತಣಕೂಟ ತಡೆಯುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿನಯ್‌ ಗುರೂಜಿ ಭವಿಷ್ಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಸ್ವಾಮೀಜಿ, ಗುರೂಜಿಗಳಿಗೂ ನಾನು ಮನವಿ ಮಾಡುತ್ತೇನೆ. ಯಾರೂ ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಕುರಿತಂತೆ ಯಾರೂ ಭವಿಷ್ಯ ನುಡಿಯುವ ಅವಶ್ಯಕತೆಯಿಲ್ಲ ಎಂದರು.

ಔತಣಕೂಡ ನಾನು ತಡೆದಿಲ್ಲ-ಡಿಕೆಶಿ: ಇದೇ ವೇಳೆ ದಲಿತರ ಔತಣಕೂಟಕ್ಕೆ ತಡೆಯೊಡ್ಡಿದ್ದಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಔತಣಕೂಟ ತಡೆಯಲು ಹೋಗಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ನಡೆಯುತ್ತದೆ. ಯಾವ ಪವರೂ ಇಲ್ಲ, ಯಾವ ಶೇರೂ ಇಲ್ಲ ಎಂದರು.

ಸಚಿವ ರಾಜಣ್ಣ ತಮ್ಮ ಬಗ್ಗೆ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಅದೇ ರೀತಿ ದೊಡ್ಡವರ ಬಗ್ಗೆ ಮಾತನಾಡುವುದೂ ಇಲ್ಲ ಎಂದರು.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸುವ ಕುರಿತು ಪ್ರತಿಕ್ರಿಯಿಸಿ, ಜಾತಿ ಗಣತಿ ವರದಿ ಕುರಿತು ನಾವು ಯಾವುದೇ ಪ್ರತ್ಯೇಕ ಸಭೆ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಗೆ ತರುತ್ತೇವೆ ಎಂದು ಹೇಳಿದ್ದಾರೆ. ಸಂಪುಟದಲ್ಲಿ ಮಂಡನೆ ಆದ ನಂತರ ಅದರ ಬಗ್ಗೆ ಚರ್ಚೆಯಾಗಲಿದೆ. ಅಲ್ಲಿಯವರೆಗೆ ಏನನ್ನೂ ಹೇಳುವುದಿಲ್ಲ ಮತ್ತು ಚರ್ಚೆ, ಸಭೆಯನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

13ರ ಪದಾಧಿಕಾರಿಗಳ ಸಭೆಗೆ ಸುರ್ಜೇವಾಲ

ಪಕ್ಷ ಸಂಘಟನೆ ಕುರಿತು ಚರ್ಚಿಸಲು ಜ.13ರಂದು ಬೆಳಗ್ಗೆ ಎಲ್ಲ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಭಾರತ್‌ ಜೋಡೋ ಭವನದಲ್ಲಿ ಸಭೆ ನಡೆಸಲಾಗುವುದು. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಕೂಡ ಇರಲಿದ್ದಾರೆ. ಸಂಜೆ 4 ಗಂಟೆಗೆ ನಾನು ಪ್ರತ್ಯೇಕವಾಗಿ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಲಿದ್ದೇನೆ. ಸಚಿವರಿಗೆ ಮತ್ತು ಶಾಸಕರಿಗೆ ಪಕ್ಷ ಸಂಘಟನೆ ಕುರಿತ ಜವಾಬ್ದಾರಿ ನೀಡಲು ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುವುದು. ಜ.14ಕ್ಕೆ ಕಾಂಗ್ರೆಸ್‌ ಪಕ್ಷದ ನೂತನ ಕಟ್ಟಡ ಉದ್ಘಾಟನೆಗಾಗಿ ನಾನು ಮತ್ತು ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು.

ಬಣ ರಾಜಕೀಯಕ್ಕೆ ಬ್ರೇಕ್‌ ಹಾಕಿ: ಡಿಕೆಶಿಗೆ ಉಗ್ರಪ್ಪ ಟೀಂ ಮನವಿ

 ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಕ್ಕೆ ಅವಕಾಶ ನೀಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀವು ಒಟ್ಟಾಗಿ ಪಕ್ಷ ಮುನ್ನಡೆಸಬೇಕು. ಜ.21ರ ಬೆಳಗಾವಿ ಸಮಾವೇಶವನ್ನು ಒಗ್ಗಟ್ಟಿನಿಂದ ಯಶಸ್ವಿಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ನೇತೃತ್ವದಲ್ಲಿ ನಾಯಕರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಡಿನ್ನರ್‌ ಸಭೆಗಳು, ಬಹಿರಂಗ ಹೇಳಿಕೆಗಳಿಂದ ರಾಜ್ಯ ಕಾಂಗ್ರೆಸ್‌ ಬಣ ರಾಜಕೀಯ ಸೃಷ್ಟಿಯಾಗಿದೆ. ಇದರಿಂದ ಪಕ್ಷಕ್ಕೆ ಹಿನ್ನಡೆ ಉಂಟಾಗಲಿದ್ದು, ರಾಜ್ಯ ಬಿಜೆಪಿಗೆ ಬಂದಿರುವ ಸ್ಥಿತಿ ಬರಲಿದೆ. ಹೀಗಾಗಿ ಎರಡೂ ಕಡೆಯ ನಾಯಕರು ಸೇರಿ ಒಟ್ಟಾಗಿ ಪಕ್ಷ ಸಂಘಟನೆ ಹಾಗೂ ಜ.21ರ ಬೆಳಗಾವಿ ಸಮಾವೇಶ ಯಶಸ್ವಿಗೊಳಿಸುವ ಬಗ್ಗೆ ಚರ್ಚೆ ಮಾಡಬೇಕು ಎಂದಿರುವುದಾಗಿ ಮೂಲಗಳು ತಿಳಿಸಿವೆ.

ಶುಕ್ರವಾರ ಸಂಜೆ ಡಿ.ಕೆ.ಶಿವಕುಮಾರ್‌ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ರಾಣಿ ಸತೀಶ್, ಸಂಸದ ವಿ.ಎಸ್‌. ಉಗ್ರಪ್ಪ, ಪರಿಷತ್‌ ಮಾಜಿ ಸದಸ್ಯ ಪ್ರಕಾಶ್ ರಾಥೋಡ್‌ ತಂಡವು ಚರ್ಚೆ ಮಾಡಿತು.

ಬೆಳಗಾವಿಯಲ್ಲಿ ಜ.21ರಂದು ನಡೆಯಲಿರುವ ಜೈ ಬಾಪು, ಜೈಭೀಮ್, ಜೈ ಸಂವಿಧಾನ ಸಮಾವೇಶ ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಜ.13ರಂದು ನಡೆಯಲಿರುವ ಪದಾಧಿಕಾರಿಗಳ ಸಭೆ, ಶಾಸಕಾಂಗ ಪಕ್ಷದ ಸಭೆ ಹೊರತಾಗಿ ಪ್ರಮುಖ ನಾಯಕರನ್ನು ಸೇರಿಸಿ ಪ್ರತ್ಯೇಕ ಸಭೆ ನಡೆಸಬೇಕು. ಈ ವೇಳೆ ಯಾರೂ ಪಕ್ಷ ವಿರೋಧಿ ಹೇಳಿಕೆ, ಅಧಿಕಾರ ಹಂಚಿಕೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿದುಬಂದಿದು.

PREV

Recommended Stories

ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
ವೀಪಿ ಚುನಾವಣೆ ಅಡ್ಡ ಮತದಾನ : ಇಂಡಿಯಾ ಕೂಟದಲ್ಲಿ ಒಡಕು