ಹಾಸನಾಂಬೆಯ ಮೇಲಾಣೆ-ಡೀಸಿ ವರ್ಗ ತಡೆಗೆ ನಯಾಪೈಸೆ ಹಣ ಪಡೆದಿಲ್ಲ: ಶಿವಲಿಂಗೇಗೌಡ

Published : Nov 10, 2026, 06:16 AM IST
Shivalingegowda

ಸಾರಾಂಶ

ಕೆ.ಎಂ.ಶಿವಲಿಂಗೇಗೌಡ ಅವರು, ‘ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ನಾನು ನಯಾಪೈಸೆ ಹಣ ಪಡೆದಿಲ್ಲ, ಬೇಕಿದ್ದರೆ, ಈ ಬಗ್ಗೆ ಹಾಸನಾಂಬ ದೇವಿಯ ಎದುರು ಆಣೆ ಪ್ರಮಾಣ ಮಾಡಲು ಸಿದ್ಧ’ ಎಂದು ಹೇಳಿದ್ದಾರೆ.

ಹಾಸನ : ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ವರ್ಗಾವಣೆ ತಡೆಗೆ 75 ಲಕ್ಷ ರು. ಲಂಚ ಪಡೆದಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು, ‘ಜಿಲ್ಲಾಧಿಕಾರಿ ವರ್ಗಾವಣೆ ವಿಚಾರದಲ್ಲಿ ನಾನು ನಯಾಪೈಸೆ ಹಣ ಪಡೆದಿಲ್ಲ, ಬೇಕಿದ್ದರೆ, ಈ ಬಗ್ಗೆ ಹಾಸನಾಂಬ ದೇವಿಯ ಎದುರು ಆಣೆ ಪ್ರಮಾಣ ಮಾಡಲು ಸಿದ್ಧ’ ಎಂದು ಹೇಳಿದ್ದಾರೆ.

ಜೊತೆಗೆ, ‘ನನ್ನ ವಿರುದ್ಧದ ಲಂಚದ ಆರೋಪಗಳನ್ನು ದಾಖಲೆ ಸಮೇತ ಸಾಬೀತುಪಡಿಸಿ. ಇಲ್ಲದಿದ್ದರೆ, ನಾನು ಸುಮ್ಮನೆ ಕೂರುವುದಿಲ್ಲ. ನಿಮಗೆ ಮಾಹಿತಿ ನೀಡಿದ ವ್ಯಕ್ತಿಯನ್ನು ಎದುರಿಗೆ ಕರೆ ತನ್ನಿ. ಅವರ ಸಮ್ಮುಖದಲ್ಲೇ ಎಲ್ಲ ವಿಚಾರಗಳನ್ನು ಚರ್ಚಿಸೋಣ’ ಎಂದು ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಭಾನುವಾರ ಹಾಸನದಲ್ಲಿ ಮಾತನಾಡಿದ್ದ ಕುಮಾರಸ್ವಾಮಿಯವರು, ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ತಡೆಹಿಡಿಯಲು ಸಚಿವರು ₹75 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಡಿಸಿ ಅವರ ಆಪ್ತ ಸಹಾಯಕ ಹಾಗೂ ಸ್ಟೋನ್ ಕ್ರಷರ್ ಮ್ಯಾನೇಜರ್‌ವೊಬ್ಬರ ನಡುವೆ ನಡೆದಿದೆ ಎನ್ನಲಾದ ವಾಟ್ಸಾಪ್ ಚಾಟ್ ಪ್ರತಿಯನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದರು.

ನಗರದ ಹಾಸನಾಂಬ ದೇವಾಲಯದ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಲಿಂಗೇಗೌಡ, ಈ ಲಂಚದ ಆರೋಪವನ್ನು ಸಾರಾ ಸಗಟಾಗಿ ತಿರಸ್ಕರಿಸಿದರು. ‘ಹಾಸನಾಂಬೆ ತಾಯಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ. ಡಿಸಿ ವರ್ಗಾವಣೆ ವಿಚಾರದಲ್ಲಿ 1 ಪೈಸೆ ಮುಟ್ಟಿದ್ದರೆ ತಾಯಿ ನೋಡಿಕೊಳ್ಳಲಿ. ಆರೋಪ ಮಾಡಿದವರು ಕೂಡ ದೇವಿಯ ಮುಂದೆ ನಿಂತು ತಮ್ಮ ಆರೋಪ ಸತ್ಯವೆಂದು ಪ್ರಮಾಣ ಮಾಡಲಿ. ಸತ್ಯ ಯಾವುದು ಎಂಬುದನ್ನು ಆ ತಾಯಿಯೇ ನಿರ್ಧರಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಟ್‌ನಲ್ಲಿ ಹೆಸರು ಪ್ರಸ್ತಾಪವಾಗಿರುವ ಜಿಲ್ಲಾಧಿಕಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಅವರು ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಮ್ಮ ಮೊಬೈಲ್ ಅನ್ನು ಪೊಲೀಸರಿಗೆ ಒಪ್ಪಿಸಿ, ಯಾವುದೇ ತನಿಖೆಗೂ ಸಿದ್ಧ ಎಂದು ತಿಳಿಸಿದ್ದಾರೆ. ಹೀಗಿರುವಾಗ ತನಿಖೆ ಪೂರ್ಣಗೊಳ್ಳುವ ಮೊದಲೇ ಆರೋಪಗಳನ್ನು ಸತ್ಯವೆಂಬಂತೆ ಬಿಂಬಿಸುವುದು ಸರಿಯಲ್ಲ. ತನಿಖೆಯಿಂದ ನಿಜಾಂಶ ಹೊರಬರಲಿ ಎಂದು ಹೇಳಿದರು.

ಸಂಭಾಷಣೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ

ಇಂದಿನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕಾಲದಲ್ಲಿ ಯಾರ ಹೆಸರಿನಲ್ಲಾದರೂ ಇಂತಹ ಸಂಭಾಷಣೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಹೀಗಾಗಿ, ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡುವ ಮುನ್ನ ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಕೇಂದ್ರ ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ಆಧಾರರಹಿತ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದು ಸರಿಯಲ್ಲ. ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮಾತನಾಡಬೇಕಿತ್ತು. ಮುಂದೆ ಈ ಆರೋಪಗಳು ಸುಳ್ಳು ಎಂದು ಸಾಬೀತಾದರೆ ನಿಮ್ಮ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ, ಈ ಮಾಹಿತಿ ನೀಡಿದವರು ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಅಗೌರವ ತರುವಂತಹ ಯಾವುದೇ ಕೆಲಸ ಮಾಡಿಲ್ಲ

ಕುಮಾರಸ್ವಾಮಿ ಜೊತೆ ಸುಮಾರು 20 ವರ್ಷ ರಾಜಕೀಯವಾಗಿ ಒಟ್ಟಿಗೆ ಇದ್ದುದನ್ನು ಸ್ಮರಿಸಿದ ಶಿವಲಿಂಗೇಗೌಡ, ‘ನಾನು ನಿಮ್ಮೊಂದಿಗಿದ್ದಾಗ ನಿಮಗೆ ಅಗೌರವ ತರುವಂತಹ ಯಾವುದೇ ಕೆಲಸ ಮಾಡಿಲ್ಲ. ಈಗ ಸಚಿವನಾಗಿದ್ದೇನೆ ಎಂಬ ಕಾರಣಕ್ಕೆ ಹೊಟ್ಟೆಕಿಚ್ಚಿನಿಂದ ಇಂತಹ ಆರೋಪ ಮಾಡುತ್ತಿದ್ದೀರಿ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ನಾಲ್ಕು ತಿಂಗಳಾಗುವಷ್ಟರಲ್ಲಿ ಇಂತಹ ಆರೋಪಗಳನ್ನು ಎದುರಿಸಬೇಕಾಗಿದ್ದಕ್ಕೆ ಮನಸ್ಸಿಗೆ ತುಂಬಾ ನೋವಾಗುತ್ತಿದೆ’ ಎಂದು ಭಾವುಕರಾಗಿ ನುಡಿದರು.

ಕುಮಾರಸ್ವಾಮಿಯವರದು ಯಾವಾಗಲೂ ಹಿಟ್ ಆ್ಯಂಡ್‌ ರನ್ ರಾಜಕಾರಣ. ವಿಧಾನಸಭೆಯಲ್ಲಿ ಎರಡು ಬಾರಿ ಪೆನ್‌ಡ್ರೈವ್ ತೋರಿಸಿದ್ದನ್ನು ನಾನು ನೋಡಿದ್ದೇನೆ. ಆದರೆ, ಅದರಲ್ಲಿರುವ ಅಂಶಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ. ಈಗಲೂ ಅಂತವುದೇ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಅವುಗಳ ಸತ್ಯಾಸತ್ಯತೆ ಕುರಿತು ಸ್ಪಷ್ಟನೆ ನೀಡುತ್ತಿಲ್ಲ. ಮರ್ಯಾದಸ್ಥರ ಮಾನಹಾನಿ ಮಾಡುವಂತಹ ಪ್ರವೃತ್ತಿಯನ್ನು ಅವರು ಬಿಡಬೇಕು ಎಂದು ತೀಕ್ಷ್ಣವಾಗಿ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಫಾರಿನ್‌ನಿಂದ ಮರಳಿದ ಸ್ಟಿಂಗ್‌ ಕೃಪಾ ಆಳ್ವಗೆ ಪೊಲೀಸ್‌ ಗ್ರಿಲ್‌ - 4 ತಾಸು ವಿಚಾರಣೆ
ಸಿದ್ದರಾಮಯ್ಯ ಜೊತೆ ಸಿಎಂ ಸುದೀರ್ಘ ಮಾತುಕತೆ - ಸಿದ್ದು ಜತೆ ಮುನಿಸಿಲ್ಲ: ಡಿಕೆ