ಯುದ್ಧ ಬೇಡವೇ ಬೇಡ ಅಂತ ನಾನು ಹೇಳಿಲ್ಲ : ಸಿದ್ದು ಸ್ಪಷ್ಟನೆ

Published : Apr 28, 2025, 10:21 AM IST
CM Siddaramaiah (File Photo/ANI)

ಸಾರಾಂಶ

ನಾನು ಅನಿವಾರ್ಯವಾದಾಗ ಯುದ್ಧ ಮಾಡಬೇಕು ಎಂದಿದ್ದೇನೆಯೇ ಹೊರತು ಯುದ್ಧ ಮಾಡಲೇಬಾರದು ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

 ಬೆಂಗಳೂರು : ನಾನು ಅನಿವಾರ್ಯವಾದಾಗ ಯುದ್ಧ ಮಾಡಬೇಕು ಎಂದಿದ್ದೇನೆಯೇ ಹೊರತು ಯುದ್ಧ ಮಾಡಲೇಬಾರದು ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಪಹಲ್ಗಾಂ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಜತೆಗೆ ಪ್ರತೀಕಾರದ ಯುದ್ಧ ಬೇಡ ಎಂಬ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿ, ‘ಪಾಕ್‌ ಮೇಲೆ ಯುದ್ಧದ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ನನ್ನ ಹೇಳಿಕೆ ತಿರುಚಲಾಗಿದೆ. ತಕ್ಷಣಕ್ಕೆ ಯುದ್ಧ ಬೇಡ, ಆದರೆ ಯುದ್ಧ ಮಾಡಲೇಬಾರದು ಅಂತ ಏನೂ ಹೇಳಿಲ್ಲ. ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ, ಭಾರತವನ್ನು ಕೆಣಕಿದಾಗ ಅದು ಪಾಕಿಸ್ತಾನವೇ ಇರಲಿ ಅಥವಾ ಯಾವುದೇ ದೇಶವಾಗಿರಲಿ ಸಹಿಸಲು ಸಾಧ್ಯವೇ ಇಲ್ಲ. ಅನಿವಾರ್ಯವಾದಾಗ ಪಾಕ್‌ ವಿರುದ್ಧ ಭಾರತ ಯುದ್ಧ ಮಾಡಿಯೇ ಸಿದ್ಧ. ಇದನ್ನು ಪ್ರತಿ ಸಂದರ್ಭದಲ್ಲೂ ಭಾರತ ಸಾಬೀತುಪಡಿಸಿದೆ’ ಎಂದರು.

ಭಾರತವನ್ನು ಕೆಣಕಿದರೆ ಅದು ಪಾಕಿಸ್ತಾನವೇ ಇರಲಿ ಯಾವುದೇ ದೇಶವಾಗಲಿ ನಾವು ಸಹಿಸಲ್ಲ.‌ ಯಾವುದೇ ಹಂತದ ಯುದ್ಧಕ್ಕೂ ಭಾರತ ಸದಾ ಸನ್ನದ್ಧವಾಗಿರುತ್ತದೆ. ಅನಿವಾರ್ಯತೆ ಎದುರಾದಾಗ ಯುದ್ಧಕ್ಕೆ ಮುಂದಡಿ ಇಟ್ಟು ನಮ್ಮ ಸಾರ್ವಭೌಮತೆ ಕಾಪಾಡಿಕೊಳ್ಳುವುದು ನಮಗೆ ಗೊತ್ತಿದೆ. ಇತಿಹಾಸದುದ್ದಕ್ಕೂ ನಾವು ಈ ಎಚ್ಚರವನ್ನು ಮತ್ತು ಸಾರ್ವಭೌಮತೆಯನ್ನು ಕಾಪಾಡಿಕೊಂಡೇ ಬಂದಿದ್ದೇವೆ. ಮುಂದೆಯೂ ಇದನ್ನು ಕಾಪಾಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅನಿವಾರ್ಯ ಆದಾಗಷ್ಟೇ ಯುದ್ಧ:

ಯುದ್ಧ ಅನಿವಾರ್ಯವಾದಾಗ ಮಾತ್ರ ಮಾಡಬೇಕು. ಅದೇ ಮೊದಲ ಆಯ್ಕೆ ಆಗಬಾರದು. ಪಹಲ್ಗಾಂ ಘಟನೆಯಲ್ಲಿ ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಯ ವೈಫಲ್ಯ ಇದೆ ಎಂದು ಹೇಳಿದ್ದೇನೆ. 28 ಪ್ರವಾಸಿಗರು ಉಗ್ರರ ದಾಳಿಯಲ್ಲಿ ಅಸುನೀಗಿದ್ದಾರೆ. ಹಿಂದೆ ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಮೃತಪಟ್ಟಿದ್ದರು. ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ಭದ್ರತೆ ಕೊಟ್ಟಿರಲಿಲ್ಲ ಎಂದರು.

ಪಾಕ್‌ಗೆ ತಕ್ಕ ಪಾಠ ಕಲಿಸಬೇಕು:

ಈ ಕುರಿತು ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಘಟನೆ ಬೆನ್ನಲ್ಲೇ ಸಿಂಧೂ ನದಿ ಒಪ್ಪಂದದ ರದ್ದತಿಯೂ ಸೇರಿ ಕೇಂದ್ರ ಸರ್ಕಾರ ಕೆಲ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಮುಂದೆ ಇದಕ್ಕಿಂತಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆ ನಮಗಿದೆ. ಪಾಕಿಸ್ತಾನ ಇಂದು ಆರ್ಥಿಕವಾಗಿ ದಿವಾಳಿಯಾಗಿರುವ ರೋಗಗ್ರಸ್ಥ ದೇಶ. ಹೊಸದಾಗಿ ಅವರು ಕಳೆದುಕೊಳ್ಳುವುದೇನೂ ಇಲ್ಲ, ಈ ಕಾರಣದಿಂದಾಗಿಯೇ ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗಿದೆ. ಈ ಸಂದರ್ಭದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳು ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಖಂಡಿಸಿ ಭಾರತದ ಪರ ನಿಂತಿವೆ. ಈ ಬೆಳವಣಿಗೆಯನ್ನು ಭಾರತ ಸದುಪಯೋಗಪಡಿಸಿಕೊಂಡು ಪಾಕ್‌ ಮುಂದೆಂದೂ ಇಂಥ ದುಸ್ಸಾಹಸಕ್ಕೆ ಕೈಹಾಕದಂತೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ತನ್ನ ವೈಫಲ್ಯ  ಸರಿಪಡಿಸಿಕೊಳ್ಳಬೇಕು: ಸಿಎಂ

ಪಹಲ್ಗಾಂನಲ್ಲಿ ನಡೆದ ಪಾಕ್‍ ಪ್ರೇರಿತ ಉಗ್ರರ ದಾಳಿಗೆ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವುದು ದೇಶದ ಜನತೆಗೆ ಮತ್ತು ಕೇಂದ್ರ ಸರ್ಕಾರಕ್ಕೂ ಮನವರಿಕೆಯಾಗಿದೆ. ಮೊದಲು ಈ ಲೋಪ ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಂಥ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಇದೇ ವೇಳೆ ಕೆಲ ಕಿಡಿಗೇಡಿಗಳು ಯುದ್ಧೋನ್ಮಾದ ಸೃಷ್ಟಿಸಿ ದೇಶದೊಳಗಿನ ಸೌಹಾರ್ದತೆ ಕಲಕುವ ಪ್ರಯತ್ನ ಮಾಡುತ್ತಿದ್ದು, ಇಂಥವರ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಂದು ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿದೆ. ಬಾಹ್ಯಶತ್ರು ಎದುರಿಸಬೇಕಾದರೆ, ಆಂತರಿಕವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು