ನಾನು ಹುಟ್ಟುತ್ತ ಒಕ್ಕಲಿಗ, ಬೆಳೆಯುತ್ತ ವಿಶ್ವ ಮಾನವ: ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ

KannadaprabhaNewsNetwork | Published : Mar 29, 2024 12:56 AM

ಸಾರಾಂಶ

ನಾನು ಒಕ್ಕಲಿಗ ಅಲ್ಲ ಅಂಥ ಬಿಜೆಪಿಯವರು ಒಕ್ಕಲಿಗರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ನಾನು ಒಕ್ಕಲಿಗ ಅಂಥ ಸುಳ್ಳು ಹೇಳುವ ಅಗತ್ಯವಿಲ್ಲ. ಪ್ರತಾಪ್ ಸಿಂಹ ಮೊದಲ ಬಾರಿ ಬಂದಾಗ ಗೌಡ ಅಂಥ ಹೆಸರು ಬದಲಾಯಿಸಿಕೊಂಡರು. ಅದೇ ರೀತಿ ನಾನು ಲಕ್ಷ್ಮಣ್ ಗೌಡ ಅಂಥ ಬದಲಾಯಿಸಿಕೊಳ್ಳಬೇಕಾ? ಹಣೆಯ ಮೇಲೆ ಒಕ್ಕಲಿಗ ಅಂಥ ಬರೆದುಕೊಂಡು ಓಡಾಡಲು ಸಾಧ್ಯನಾ ಎಂದು ಎಂ.ಲಕ್ಷ್ಮಣ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಾನು ಹುಟ್ಟುತ್ತ ಒಕ್ಕಲಿಗ, ಬೆಳೆಯುತ್ತ ವಿಶ್ವ ಮಾನವ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಒಕ್ಕಲಿಗ ಜಾತಿ ಕಾರ್ಡ್ ವಿಚಾರವು ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಜಾತಿ ಪ್ರಮಾಣ ಪತ್ರ ಪ್ರದರ್ಶಿಸುವ ಮೂಲಕ ಪ್ರತಿಕ್ರಿಯಿಸಿದರು.

ನಾನು ಒಕ್ಕಲಿಗ ಅಲ್ಲ ಅಂಥ ಬಿಜೆಪಿಯವರು ಒಕ್ಕಲಿಗರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ನಾನು ಒಕ್ಕಲಿಗ ಅಂಥ ಸುಳ್ಳು ಹೇಳುವ ಅಗತ್ಯವಿಲ್ಲ. ಪ್ರತಾಪ್ ಸಿಂಹ ಮೊದಲ ಬಾರಿ ಬಂದಾಗ ಗೌಡ ಅಂಥ ಹೆಸರು ಬದಲಾಯಿಸಿಕೊಂಡರು. ಅದೇ ರೀತಿ ನಾನು ಲಕ್ಷ್ಮಣ್ ಗೌಡ ಅಂಥ ಬದಲಾಯಿಸಿಕೊಳ್ಳಬೇಕಾ? ಹಣೆಯ ಮೇಲೆ ಒಕ್ಕಲಿಗ ಅಂಥ ಬರೆದುಕೊಂಡು ಓಡಾಡಲು ಸಾಧ್ಯನಾ ಎಂದು ಅವರು ಪ್ರಶ್ನಿಸಿದರು.

ಸುಮ್ಮನೇ ಜಾತಿ ವಿಚಾರ ಪ್ರಸ್ತಾಪ ಮಾಡಬೇಡಿ. ನನಗೆ ಅದು ಈ ಕ್ಷಣವೂ ನಾವು ಇಷ್ಟ ಪಡುವುದಿಲ್ಲ. ಪ್ರತಾಪ್ ಸಿಂಹಗೆ ಒಕ್ಕಲಿಗರು 10 ವರ್ಷ ಅವಕಾಶ ಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಎಂದು ಕೇಳುವುದು ತಪ್ಪಾ ಎಂದು ಅವರು ಕೇಳಿದರು.

ದಾಖಲೆ ಇಲ್ಲದ 8.13 ಲಕ್ಷ ಮೌಲ್ಯದ ಮದ್ಯ, 1 ಲಕ್ಷ ಹಣ ವಶಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಯಲು ತಪಾಸಣಾ ನಡೆಸುತ್ತಿರುವ ಪೊಲೀಸ್, ಅಬಕಾರಿ ಹಾಗೂ ವಿವಿಧ ತಂಡಗಳ ಅಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 1 ಲಕ್ಷ ರೂ. ಹಣ ಹಾಗೂ 8.13 ಲಕ್ಷ ರೂ. ಮೌಲ್ಯದ 2840 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ 9 ರಿಂದ ಗುರುವಾರ ಬೆಳಗ್ಗೆ 9 ರವರೆಗೆ ನಡೆಸಿದ ತಪಾಸಣೆಯಲ್ಲಿ ಎಸ್ಎಸ್ ಟಿ ತಂಡವು 1 ಲಕ್ಷ ರೂ. ಹಣ ವಶಪಡಿಸಿಕೊಂಡಿದೆ. ಹಾಗೆಯೆ, ಅಬಕಾರಿ ಇಲಾಖೆಯವರು 812510 ರೂ. ಮೌಲ್ಯದ 2837.83 ಲೀಟರ್ ಮದ್ಯ ಹಾಗೂ ಪೊಲೀಸರು 1000 ರೂ. ಮೌಲ್ಯದ 2.25 ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿದೆ.

Share this article