ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಸಭಾ ಅವಧಿ ಮುಗಿದ ಬಳಿಕ ನಾನು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇನೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿರುವುದರಿಂದ ಬಿಜೆಪಿ ಪಕ್ಷನ್ನು ಸೇರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷ ಸೇರ್ಪಡೆಯಾಗಿಲ್ಲವೆಂಬ ವಿಚಾರವನ್ನು ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ. ರೆಕಾರ್ಡ್ ಪಟ್ಟಿ, ಕೆಲಸ ನೋಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕೆ ನನಗೆ ಮೈತ್ರಿ ಟಿಕೆಟ್ ಸಿಗುವ ಬಗ್ಗೆ ಪೂರ್ಣ ವಿಶ್ವಾಸವಿದೆ. ಬಿಜೆಪಿ ಪಕ್ಷ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಯಾವುದೂ ಫೈನಲ್ ಆಗುವುದಿಲ್ಲ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಅದು ನನ್ನ ವೈಯಕ್ತಿಕ. ಆದರೆ, ಪಕ್ಷದಿಂದ ಬರುವುದೇ ಅಧಿಕೃತ ಘೋಷಣೆ. ಸಂಸದೆಯಾಗಿ ಸುಮಲತಾ ಕಾರ್ಯವೈಖರಿ ನೋಡಿ ಬಿಜೆಪಿ ಟಿಕೆಟ್ ನೀಡಲಿದೆ. ಕಳೆದ ಎಂಪಿಗಳು ಮಾಡಿರುವ ಕೆಲಸಕ್ಕೂ ನನ್ನ ಕೆಲಸಕ್ಕೂ ವ್ಯತ್ಯಾಸವಿದೆ ಎಂದರು.
ಬಿಜೆಪಿ ಪಕ್ಷದ ಸಿದ್ಧಾಂತ, ನರೇಂದ್ರ ಮೋದಿ ಕೆಲಸದ ರೀತಿ ನೋಡಿ ನಾನು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ. ಮೋದಿ ಸೇವೆ ಮಾಡುವ ಮನೋಭಾವ ಇಟ್ಟಿಕೊಂಡಿದ್ದಾರೆ. ಅವರ ನೇತೃತ್ವದಲ್ಲಿ ನಮ್ಮ ದೇಶ ಪ್ರಗತಿ ಸಾಧಿಸಿದೆ. ಅವರ ಪಕ್ಷದಿಂದ ಅಭ್ಯರ್ಥಿಯಾದರೆ ಅವರ ಕೈ ಬಲಪಡಿಸುವ ಕೆಲಸ ಆಗುತ್ತದೆ. ಮೋದಿ ಅವರೇ ನನಗೆ ಸ್ಫೂರ್ತಿ. ಜಗತ್ತೇ ಅವರನ್ನು ವಿಶ್ವ ಗುರು ಅಂತ ಒಪ್ಪಿಕೊಂಡಿದೆ ಎಂದು ಬಣ್ಣಿಸಿದರು.
ಕ್ರೆಡಿಟ್‌ಗಾಗಿ ಶಾಸಕರ ಉಪವಾಸ:
ಹನಕೆರೆ ಗ್ರಾಮದ ಬಳಿ ಅಂಡರ್‌ಪಾಸ್‌ಗೆ ಒತ್ತಾಯಿಸಿ ಶಾಸಕ ಪಿ.ರವಿಕುಮಾರ್ ಕ್ರೆಡಿಟ್ ಪಡೆಯುವುದಕ್ಕೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಹನಕೆರೆಗೆ ಅಂಡರ್‌ಪಾಸ್ ಮಂಜೂರಾಗಿದ್ದರು. ಮಿನಿಸ್ಟರಿಯಿಂದ ಸಹಿಯಷ್ಟೇ ಬಾಕಿ ಇದೆ. ಮಂಡ್ಯ ಶಾಸಕರು ಬಹಳಷ್ಟು ಉತ್ಸುಕರಾಗಿದ್ದಾರೆ. ಆರಂಭವಾಗುವ ಕಾಮಗಾರಿಗೂ ಕ್ರೆಡಿಟ್ ತೆಗೆದುಕೊಳ್ಳುವ ಧಾವಂತದಲ್ಲಿದ್ದಾರೆ. ಹನಕೆರೆ ಅಂಡರ್‌ಪಾಸ್ ವಿಚಾರದಲ್ಲಿ ನಾನು ಸಾಕಷ್ಟು ಸಭೆ ಮಾಡಿದ್ದೇನೆ. ಸ್ಲಂ ಬೋರ್ಡ್ ವಿಚಾರದಲ್ಲಿ ನನ್ನ ಶ್ರಮವಿತ್ತು. ಹಕ್ಕುಪತ್ರ ಕೊಡಿಸುವಲ್ಲಿ ಶ್ರಮಿಸಿದ್ದೆ. ಈಗ ಬಂದು ಆಗಿರುವ ಕೆಲಸಗಳನ್ನು ನಾನೆ ಮಾಡಿದ್ದೇನೆ ಎನ್ನುತ್ತಿದ್ದಾರೆ. ಹಸಿ ಸುಳ್ಳನ್ನು ಜನರ ಮುಂದಿಡಬೇಡಿ. ನೀವು ಬಂದ ೬ ತಿಂಗಳಲ್ಲಿ ಎಲ್ಲಾ ಕೆಲಸ ಮಾಡಿಬಿಟ್ಟಿರಾ ಎಂದು ಪ್ರಶ್ನಿಸಿದರು.
ಟಿಕೆಟ್‌ಗೆ ದುಡ್ಡು ಕಾಂಗ್ರೆಸ್ ಸಂಸ್ಕೃತಿ:
ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ದುಡ್ಡು ಪಡೆಯುವ ಸಂಸ್ಕೃತಿ ಇದೆ. ಪಕ್ಷದೊಂದಿಗೆ ಸಂಪರ್ಕವೇ ಇಲ್ಲದವರನ್ನು ಕರೆತಂದು ಅಭ್ಯರ್ಥಿ ಮಾಡಿದ್ದಾರೆ. ಬೂದನೂರು ಉತ್ಸವ ಸರ್ಕಾರಿ ಹಣದಲ್ಲಿ ನಡೆದಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಎಂದು ಪರಿಚಯ ಮಾಡುತ್ತಾರೆ. ಸರ್ಕಾರಿ ಹಣ ಬಳಸಿ ನಿಮ್ಮ ಅಭ್ಯರ್ಥಿಯನ್ನು ಪರಿಚಯಿಸುತ್ತೀರಾ? ಹಾಗಾದರೆ ನೀವು ಹೇಗೆ ಎಲೆಕ್ಷನ್ ಮಾಡ್ತೀರಾ? ಕಾಂಗ್ರೆಸ್ ಪಕ್ಷದಲ್ಲಿ ದುಡ್ಡಿರುವವರಿಗೆ ಮಣೆ ಹಾಕುತ್ತಾರೆ. ಮಂಡ್ಯ ಜನ ದಡ್ಡರೇನಲ್ಲ. ಅವರನ್ನು ಯಾವ ಕಾರಣಕ್ಕೆ ಅಭ್ಯರ್ಥಿ ಮಾಡಿದ್ದಾರೆ ಎಂಬ ವಿಚಾರ ಗೊತ್ತಿದೆ. ದುಡ್ಡಿನಿಂದ ಮಂಡ್ಯ ಜನರನ್ನ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.