ಶೋಕಾಸ್ ನೋಟಿಸ್‌ಗೆ ನಿಗದಿತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ತಿಳಿಸಿರುವ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತೇನೆ ಎಂದೂ ಹೇಳಿದ್ದಾರೆ.
ಬೆಂಗಳೂರು : ಶೋಕಾಸ್ ನೋಟಿಸ್‌ಗೆ ನಿಗದಿತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ತಿಳಿಸಿರುವ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತೇನೆ ಎಂದೂ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ಪಕ್ಷದ ವಿರುದ್ಧವಾಗಿ ಮಾತಾಡಬಾರದು ಅಂತ ಹೇಳಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ನಾವು ಮಾತಾಡಿದೆವು ಅಷ್ಟೇ. ಅವರ ಮುಂದೆ ಮಾತಾಡುವ ಧೈರ್ಯ ಯಾರೂ ಮಾಡಿರಲಿಲ್ಲ. ಪಕ್ಷವೇ ನಮಗೆ ಸರ್ವೋಚ್ಛ. ಪಕ್ಷದ ವಿಚಾರ ಬಿಟ್ಟು ಇತರೆ ಯಾವುದೇ ವಿಚಾರ ಮಾತನಾಡಿಲ್ಲ ಎಂದು ಪ್ರತಿಪಾದಿಸಿದರು.
ಅವರು ನಮಗೆ ನೋಟಿಸ್ ನೀಡಿದ್ದು ಒಳ್ಳೆಯದೇ ಆಯ್ತು. ಅಮಿತ್ ಶಾ ಅವರ ಬಳಿ ನಾನು, ರೇಣುಕಾಚಾರ್ಯ ಇತರರು ಹೋಗಿ ಎಲ್ಲ ಮಾಹಿತಿ ನೀಡುತ್ತೇವೆ. ಮುಂದೆ ಅವರು ಸೂಚಿಸಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಟ್ಟಾ, ಯತ್ನಾಳ್, ಕುಮಾರ್ ಬಂಗಾರಪ್ಪ ಅವರು ಪಕ್ಷದ ಕಚೇರಿಗೆ ಬಂದು ಎಷ್ಟು ವರ್ಷಗಳಾಯ್ತು? ಅವರಿಂದ ಪಕ್ಷಕ್ಕೆ ಏನು ಕೊಡುಗೆ ಇದೆ. ವಿಜಯೇಂದ್ರ ಹೈಕಮಾಂಡ್ ನೇಮಿಸಿರುವ ರಾಜ್ಯಾಧ್ಯಕ್ಷರು. ಅವರು ಹೇಳಿದಂತೆ ನಾವು ಕೇಳುತ್ತೇವೆ ಎಂದು ತೀಕ್ಷ್ಣವಾಗಿ ಹೇಳಿದರು.