ಖುದ್ದು ಬರ ಪರಿಸ್ಥಿತಿ ಪರಿಶೀಲನೆ ಮಾಡ್ತೀನಿ : ಸಿಎಂ

Published : Jul 20, 2026, 09:08 AM IST
DK Shivakumar

ಸಾರಾಂಶ

ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನೂ ಸಮಯ ಹೊಂದಿಸಿಕೊಂಡು ಶೀಘ್ರದಲ್ಲೇ ಖುದ್ದು ರಾಜ್ಯದ ವಿವಿಧೆಡೆ ತೆರಳಿ ಬರ ಪರಿಸ್ಥಿ ಪರಿಶೀಲಿಸಲಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

  ಬೆಂಗಳೂರು :  ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನೂ ಸಮಯ ಹೊಂದಿಸಿಕೊಂಡು ಶೀಘ್ರದಲ್ಲೇ ಖುದ್ದು ರಾಜ್ಯದ ವಿವಿಧೆಡೆ ತೆರಳಿ ಬರ ಪರಿಸ್ಥಿ ಪರಿಶೀಲಿಸಲಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಭಾನುವಾರ ವಿಧಾನಸೌಧದಲ್ಲಿ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ವರ್ಚುಯಲ್‌ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ವಲಸೆ ಹೋಗದಂತೆ ನೋಡಿಕೊಳ್ಳಿ:

ಯಾವ ಭಾಗದ ಜನ ವಲಸೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇನ್ನು ಮುಂದಿನ 15 ದಿನಗಳಲ್ಲಿ ನಾವು ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ವರದಿ ನೀಡಬೇಕು. ನಂತರ ಕೇಂದ್ರ ತಂಡ ಬಂದಾಗ ಅವರಿಗೆ ನಿಖರವಾಗಿ ಮಾಹಿತಿ ನೀಡಬೇಕು. ಕೇಂದ್ರ ತಂಡ ಕಳುಹಿಸುವ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಮೇವು, ಗೊಬ್ಬರ ಪೂರೈಕೆಗೆ ಸೂಚಿಸಲಾಗಿದೆ. ಪ್ರತಿ ಕೊಳವೆ ಬಾವಿ ಕೊರೆಯುವಾಗ ನಕಲಿ ಬಿಲ್ ಗಳು ಬಾರದಂತೆ ನೋಡಿಕೊಳ್ಳಬೇಕು. ಕೊಳವೆ ಬಾವಿ ಕೊರೆಯುವಾಗ ವಿಡಿಯೋ ದಾಖಲೆ ಇರಬೇಕು. ವಿದ್ಯುತ್ ಇಲಾಖೆಯವರು ಟ್ರಾನ್ಸ್‌ಫಾರ್ಮರ್ ರಿಪೇರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.

ವಾರದೊಳಗೆ ವರದಿ ಕೊಡಿ:

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ರಾಜ್ಯದ ಬರಪರಿಸ್ಥಿತಿ ಬಗ್ಗೆ ಮುಂದಿನ 15 ದಿನಗಳೊಳಗೆ ನಾನು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕಿರುವುದರಿಂದ ಎಲ್ಲಾ ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಬಗ್ಗೆ ಪರಿಶೀಲೀಸಬೇಕು. ವಾರದೊಳಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಇದೇ ವೇಳೆ ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಪಿ.ಡಿ ಖಾತೆಯಲ್ಲಿ 329.60 ಕೋಟಿ ರು. ಲಭ್ಯ:

ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಖಾತ್ರಿಪಡಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಮೇವಿನ ಬೀಜ ಬಿತ್ತನೆ ಮಾಡಬೇಕು. ಲಭ್ಯವಿರುವ ನೀರಾವರಿ ಸೌಲಭ್ಯ ಬಳಸಿಕೊಂಡು ಮೇವಿನ ಬೀಜ ಬಿತ್ತನೆಗೆ ಕ್ರಮ ವಹಿಸಿ. ಬರ ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ವಿಪತ್ತು ಪಿ.ಡಿ.ಖಾತೆಯಲ್ಲಿ ಒಟ್ಟು 329.60 ಕೋಟಿ ರು. ಅನುದಾನ ಲಭ್ಯವಿದೆ ಎಂದು ಸಿಎಂ ತಿಳಿಸಿದರು.

ರಾಜ್ಯದ ಬರಸ್ಥಿತಿ ಕುರಿತು ವರದಿ ಸಿದ್ಧಪಡಿಸಲು ಜಿಲ್ಲೆಗಳ ಎಲ್ಲಾ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಬರ ಪರಿಸ್ಥಿತಿ ನಿಭಾಯಿಸಲು ಎಲ್ಲಾ ತಾಲೂಕು, ಹೋಬಳಿಗಳಿಗೆ ನೋಡೆಲ್‌ ಅಧಿಕಾರಿಗಳನ್ನು ನೇಮಿಸಬೇಕು. ರಾಜ್ಯದ ಎಲ್ಲ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು. ಕೇವಲ ಪೇಪರ್‌ ವರದಿ ನೀಡಿದರೆ ನಾನು ಕೇಳುವುದಿಲ್ಲ. ನನಗೆ ಫೀಲ್ಡ್‌ ರಿಪೋರ್ಟ್‌ ಮುಖ್ಯ. ನಿಮ್ಮ ಅನುಭವ ಮತ್ತು ಕಾರ್ಯಕ್ಷಮತೆ ತೋರಿಸಿ. ಆಡಳಿತಾತ್ಮಕವಾಗಿ ಟೀಮ್‌ ವರ್ಕ್‌ ಪ್ರದರ್ಶಿಸಿ ಎಂದು ತಾಕೀತು ಮಾಡಿದರು.

ಹಳೆ ಕಾಮಗಾರಿಗೆ ಹೊಸ ಬಿಲ್‌ ಸಹಿಸಲ್ಲ:

ಪಂಚಾಯತಿ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ವಿಬಿ ರಾಮ್ ಜಿ ಯೋಜನೆಯಡಿ ಕೈಗೊಳ್ಳಬೇಕು. ಗುತ್ತಿಗೆದಾರರಿಗೆ ಅನುಕೂಲವಾಗುವಂಥ ಕಾಮಗಾರಿ ಕೈಗೊಳ್ಳಬಾರದು. ವೈಯಕ್ತಿಕ ಕುಟುಂಬಗಳಿಗೆ ಅನುಕೂಲವಾಗುವ ಜೀವನೋಪಾಯ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಲು ಆದ್ಯತೆ ನೀಡಬೇಕು. ಯೋಜನೆಯ ಪ್ರತಿಯೊಂದು ಸ್ಥಳದಲ್ಲಿ ಕಾಮಗಾರಿ ವಿವರಗಳ ಬೋರ್ಡ್ ಅಳವಡಿಸಬೇಕು. ಗುತ್ತಿಗೆದಾರನ ಹಳೆ ಕಾಮಗಾರಿಗೆ ಹೊಸ ಬಿಲ್ ಮಾಡಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭಾರತ್‌ ಜೋಡೋ ಯುವ ಕ್ಲಬ್‌ಗಳ ನೋಂದಣಿಗೆ ವೇಗ:

ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪಟ್ಟಿ ಪರಿಶೀಲನೆ ಕಾರ್ಯ ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. 10 ಸಾವಿರ ಭಾರತ್‌ ಜೋಡೋ ಯುವ ಕ್ಲಬ್‌ಗಳ ನೋಂದಣಿ ಕಾರ್ಯ ವೇಗವಾಗಿ ಮಾಡಬೇಕು. ಆ.20ಕ್ಕೆ ಈ ಯೋಜನೆಯನ್ನು ದೊಡ್ಡಮಟ್ಟದಲ್ಲಿ ಉದ್ಘಾಟಿಸುವ ಉದ್ದೇಶವಿದೆ. ಈ ಅವಧಿಯೊಳಗೆ ಕ್ಲಬ್‌ ಗಳ ರಚನೆ ಸಿದ್ದವಾಗಿರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾ ರೆಡ್ಡಿ, ಯು.ಟಿ.ಖಾದರ್, ಯತೀಂದ್ರ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳು ಕೇಂದ್ರ ಪ್ರದೇಶದಲ್ಲಿ ಇರಬೇಕು. ಯಾವುದೇ ಕೆಲಸ ಆಗಬೇಕಾದರೂ ಖುದ್ದಾಗಿ ಇರಬೇಕು ಎಂದು ಸೂಚಿಸಿದ್ದೇನೆ. ಬೆಳೆ ವಿಮೆ ವಿಚಾರವಾಗಿ ಎಲ್ಲೆಲ್ಲಿ ಅನ್ಯಾಯ ಆಗಿದೆ ಎಂದು ಪ್ರತ್ಯೇಕ ಸಭೆ ಮಾಡಿ ಪರಿಶೀಲಿಸಲಾಗುವುದು ಎಂದು ಇದೇ ವೇಳೆ ಅವರು ಮುಖ್ಯಮಂತ್ರಿಗಳು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಂಪುಟ ವಿಸ್ತರಣೆ ಚರ್ಚೆಗಾಗಿ ಇಂದು ಡಿಕೆ, ಬಿಕೆ, ಸಿದ್ದು ದಿಲ್ಲಿಗೆ
ಕೇಂದ್ರಕ್ಕೆ ಜಿರಳೆ ಪಕ್ಷದ ಮೂರು ಬೇಡಿಕೆ