ಹಾಸನ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಡಿ.ಕೆ ಶಿವಕುಮಾರ್ ಬಂಡೆಯಂತೆ ನಿಲ್ಲುವುದಾಗಿ ಮೈಸೂರಿನಲ್ಲಿ ಹೇಳಿದ್ದೇನೆ. ಅವರ ಜತೆಗೆ ಈಗಲೂ ಇದ್ದೇನೆ, ನಾಳೆಯೂ ಇರುತ್ತೇನೆ. ಸಾಯುವವರೆಗೂ ಇರುತ್ತೇನೆ. ಇದು ಈ ಕನಕಪುರದ ಬಂಡೆಯ ಇತಿಹಾಸ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಗುರುವಾರ ಮಾತನಾಡಿ, ಹಾಸನದ ಇತಿಹಾಸ ನೋಡಿದರೆ ನೋವಾಗುತ್ತದೆ. ಅನೇಕ ರಾಜಕಾರಣಿಗಳು, ಕುಟುಂಬಗಳ ಕಣ್ಣಲ್ಲಿ ನೀರು ತರಿಸಿದ್ದಾರೆ. ಹಾಸನಾಂಬೆ ತಾಯಿ ಆ ಕಣ್ಣೀರು ಒರೆಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ತಾಯಂದಿರ ಸ್ವಾಭಿಮಾನ ಕಾಪಾಡಲು ಈ ಸಮಾವೇಶ ಹಮ್ಮಿಕೊಂಡಿದ್ದೇವೆ. ಇದು ಹಾಸನದ ದೊಡ್ಡ ಇತಿಹಾಸ ಎಂದರು.
ಚುನಾವಣೆ ಸಮಯದಲ್ಲಿ ಚನ್ನಪಟ್ಟಣಕ್ಕೆ ಬಂದು ಕಣ್ಣೀರು ಹಾಕುವ ಕುಮಾರಸ್ವಾಮಿ ಅವರೇ ನಿಮ್ಮ ಸಾಕ್ಷಿ ಗುಡ್ಡೆ ಏನು? ಹಾಸನದಲ್ಲಿ ದೇವೇಗೌಡರ ಕುಟುಂಬದ ಸಾಕ್ಷಿ ಗುಡ್ಡೆ ಏನು? ನಾನು ನಿಮ್ಮ ಕುಟುಂಬದ ಮಾಜಿ ಸಂಸದರ ಸಾಕ್ಷಿ ಗುಡ್ಡೆ ಬಗ್ಗೆ ಮಾತನಾಡುವುದಿಲ್ಲ. ಅದರ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತದೆ ಎಂದು ಹೇಳಿದರು.
ನಿಮ್ಮ ಕುತಂತ್ರಗಳು ಯಶಸ್ವಿಯಾಗಲಿಲ್ಲ ಎಂದು ಬಿಜೆಪಿ ನಾಯಕರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಕುತಂತ್ರಕ್ಕೆ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಂಡೂರು, ಕಿತ್ತೂರು ಕರ್ನಾಟಕದ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರನನ್ನು ಜನ ಸೋಲಿಸಿದ್ದಾರೆ. ಹಳೇ ಮೈಸೂರು ಭಾಗದ ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನನ್ನು ಜನ ಒಪ್ಪಿಲ್ಲ. ನಿಮ್ಮನ್ನು ಜನ ಮತ್ತೆ ಒಪ್ಪಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು..
ಕುಮಾರಸ್ವಾಮಿ, ದೇವೇಗೌಡರು ಉಪಚುನಾವಣೆ ಸಮಯದಲ್ಲಿ ಈ ಸರ್ಕಾರವನ್ನು ಆರು ತಿಂಗಳಲ್ಲಿ ಕಿತ್ತೊಗೆಯುತ್ತೇವೆ ಎಂದು ಹೇಳಿದರು. ದೇವೇಗೌಡರೇ ಕಿತ್ತುಹಾಕಲು ನಮ್ಮ ಸರ್ಕಾರ ಹಾಸನದಲ್ಲಿ ಬೆಳೆಯುವ ಆಲೂಗಡ್ಡೆ ಗಿಡವಲ್ಲ. 138 ಶಾಸಕರ ಜನಬೆಂಬಲವಿರುವ ಸರ್ಕಾರ ಇದು. ಇದನ್ನು ಕಿತ್ತುಹಾಕಲು ನಿಮ್ಮ ಹಣೆಯಲ್ಲಿ ಬರೆದಿಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಯಲ್ಲಿ ಈ ಜಿಲ್ಲೆಯ ಜನ ಕೇವಲ ಸಂಸದರು ಹಾಗೂ ಶಿವಲಿಂಗೇಗೌಡರನ್ನು ಮಾತ್ರ ಗೆಲ್ಲಿಸುವುದಲ್ಲ. ಇಲ್ಲಿರುವ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.