ಕೂತು ಏನೋ ಮಾತನಾಡಿದ್ದೇವೆ, ಅದನ್ನು ಬಹಿರಂಗವಾಗಿ ಹೇಳಲಿಕ್ಕಾಗಲ್ಲ: ಡಿಸಿಎಂ ಡಿಕೆಶಿ

ಸಾರಾಂಶ

‘ಅಧಿಕಾರ ಹಂಚಿಕೆ ಬಗ್ಗೆ ನಾವು ಕುಳಿತು ಏನೋ ಮಾತನಾಡಿದ್ದೇವೆ ಎಂದು ವಾಹಿನಿಯೊಂದಕ್ಕೆ ಹೇಳಿದ್ದೇನೆ. ಆದರೆ ಏನು ಮಾತನಾಡಿದ್ದೇವೆ ಎಂಬುದನ್ನು ಬಹಿರಂಗವಾಗಿ ಹೇಳಲು ಆಗುತ್ತದೆಯೇ?’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು : ‘ಅಧಿಕಾರ ಹಂಚಿಕೆ ಬಗ್ಗೆ ನಾವು ಕುಳಿತು ಏನೋ ಮಾತನಾಡಿದ್ದೇವೆ ಎಂದು ವಾಹಿನಿಯೊಂದಕ್ಕೆ ಹೇಳಿದ್ದೇನೆ. ಆದರೆ ಏನು ಮಾತನಾಡಿದ್ದೇವೆ ಎಂಬುದನ್ನು ಬಹಿರಂಗವಾಗಿ ಹೇಳಲು ಆಗುತ್ತದೆಯೇ?’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ಅಧಿಕಾರ ಹಂಚಿಕೆ ಕುರಿತ ಚರ್ಚೆಯನ್ನು ಜೀವಂತವಾಗಿ ಉಳಿಸುವ ಪ್ರಯತ್ನ ಮಾಡಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಅವರಿಬ್ಬರೇ ಒಪ್ಪಂದ ಮಾಡಿಕೊಳ್ಳುವುದಾದರೆ ನಾವೇಕೆ ಇರಬೇಕು? ಅವರೇ ರಾಜಕಾರಣ ಮಾಡಿಕೊಳ್ಳಲಿ’ ಎಂಬ ಡಾ.ಜಿ.ಪರಮೇಶ್ವರ್‌ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.

ಅಧಿಕಾರ ಹಂಚಿಕೆ ಸಂಬಂಧ ನಾನು ಯಾರೊಂದಿಗೂ ಮಾತನಾಡಿಲ್ಲ. ನಿಮ್ಮೊಂದಿಗೆ ಆಗಲಿ, ಪರಮೇಶ್ವರ್‌ ಅವರೊಂದಿಗೆ ಆಗಲಿ ಮಾತನಾಡಿಲ್ಲ. ವಾಹಿನಿಯೊಂದರಲ್ಲಿ ನನ್ನದೇ ಆದ ವಿಚಾರ ಪ್ರಸ್ತಾಪ ಮಾಡಿದ್ದೆ. ಅಧಿಕಾರ ಹಂಚಿಕೆ ಬಗ್ಗೆ ನಾವು ಕುಳಿತು ಏನೋ ಮಾತನಾಡಿದ್ದೇವೆ ಎಂದು ಹೇಳಿದ್ದೇನೆ. ಆದರೆ ಅದನ್ನು ಬಹಿರಂಗವಾಗಿ ಹೇಳಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಈ ವಿಚಾರವಾಗಿ ಮುಖ್ಯಮಂತ್ರಿಗಳು ಬುಧವಾರ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಹಸ್ತಾಂತರ ಚರ್ಚೆ ಇಲ್ಲ ಎಂಬ ಸಿದ್ದರಾಮಯ್ಯ ಅವರ ಮಾತನ್ನು ನಾನು ಒಪ್ಪುತ್ತೇನೆ. ಹೀಗಾಗಿ ನಾನು ಚರ್ಚೆ ಮಾಡುವುದಿಲ್ಲ. ಸದ್ಯಕ್ಕೆ ಅಧಿಕಾರ ಹಸ್ತಾಂತರದ ಪ್ರಸ್ತಾಪವಿಲ್ಲ’ ಎಂದು ಹೇಳಿದರು.

ಪರಮೇಶ್ವರ್‌ ಜತೆ ಭಿನ್ನಾಭಿಪ್ರಾಯ ಇದೆಯೇ ಎಂಬ ಪ್ರಶ್ನೆಗೆ, ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯವಿಲ್ಲ. ರಾಜಕೀಯದಲ್ಲಿ ನನಗೆ ಯಾರೂ ವೈರಿಗಳಲ್ಲ. ಎಲ್ಲರೂ ನನ್ನ ಸ್ನೇಹಿತರೇ. ಪಕ್ಷದಲ್ಲಿ ನಾವು ಜತೆಗೂಡಿ ಕೆಲಸ ಮಾಡಿದ್ದು, ಮುಂದೆಯೂ ಜತೆಯಲ್ಲೇ ಸಾಗುತ್ತೇವೆ. ಜತೆಗೂಡಿ ಯಶಸ್ಸು ಕಾಣುತ್ತೇವೆ’ ಎಂದು ಹೇಳಿದರು.

Share this article