14 ಕೋಟಿ ಜನ ಅನರ್ಹವಾದ್ರೆ 2024ರ ಚುನಾವಣೆ ನ್ಯಾಯವೇ?

Published : Nov 15, 2026, 11:02 AM IST
Rahul Gandhi

ಸಾರಾಂಶ

ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ತಮ್ಮ ವಾಗ್ದಾಳಿ ತೀವ್ರಗೊಳಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ದೇಶದಲ್ಲಿ ಇದೀಗ ಪ್ರಜಾಪ್ರಭುತ್ವವೇ ಇಲ್ಲ, 2014ರಲ್ಲೇ ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗಿದೆ.

ತೆಲಂಗಾಣ: ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ತಮ್ಮ ವಾಗ್ದಾಳಿ ತೀವ್ರಗೊಳಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ದೇಶದಲ್ಲಿ ಇದೀಗ ಪ್ರಜಾಪ್ರಭುತ್ವವೇ ಇಲ್ಲ, 2014ರಲ್ಲೇ ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗಿದೆ. ಮತಪಟ್ಟಿ ಪರಿಷ್ಕರಣೆ ಬಳಿಕ 14 ಕೋಟಿ ಮತಗಳು ಅನರ್ಹವಾದರೆ 2024ರ ಚುನಾವಣೆ ಹೇಗೆ ನ್ಯಾಯಯುತವಾಗಿರುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

ಇಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ‘ಭಾರತ್‌ ಸಮ್ಮಿಟ್‌’ನಲ್ಲಿ ಮಾತನಾಡಿದ ರಾಹುಲ್‌, ‘2024ರಲ್ಲಿ ಮತ ಚಲಾಯಿಸಿದ 14 ಕೋಟಿ ಮತದಾರರನ್ನು ಚುನಾವಣಾ ಆಯೋಗ ಕೆಲ ತಿಂಗಳ ಹಿಂದೆ ಅಸ್ತಿತ್ವದಲ್ಲಿರದವರು ಮತ್ತು ಮತದಾರದಲ್ಲದವರು ಎಂದು ಘೋಷಿಸಿತ್ತು. ಮತ ಚಲಾಯಿಸಿದವರ ಪೈಕಿ ಶೇ.13 ಮತದಾರರು ಅಕ್ರಮ ಮತದಾರರು ಎಂದು ಘೋಷಿಸಿದ್ದಾರೆ. ಹೀಗಿದ್ದಾಗ ಚುನಾವಣೆ ಹೇಗೆ ಕಾನೂನುಬದ್ಧವಾಗಿರುತ್ತದೆ?’ ಎಂದಿದ್ದಾರೆ.

ಭಾರತವು ಪ್ರಜಾಪ್ರಭುತ್ವವಾಗಿ ಉಳಿಯುವುದು ನಮಗೆ ಮುಖ್ಯ

ಇದೇ ವೇಳೆ ಅವರು, ‘ಭಾರತವು ಪ್ರಜಾಪ್ರಭುತ್ವವಾಗಿ ಉಳಿಯುವುದು ನಮಗೆ ಮುಖ್ಯ. ಆದರೆ ಬಿಜೆಪಿ ಆಡಳಿತದಲ್ಲಿ ಭಾರತವು ವಾಸ್ತವವಾಗಿ ಪ್ರಜಾಪ್ರಭುತ್ವವಾಗಿ ಉಳಿದಿಲ್ಲ’ ಎಂದರು, ಜೊತೆಗೆ ಮುಂದಿನ ಚುನಾವಣೆಯಲ್ಲಿ ನಾವು ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲಿದ್ದೇವೆ. ಈ ವಿಷಯ ಇದೀಗ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾಗೂ ಅರ್ಥವಾಗಿದೆ. ಹೀಗಾಗಿಯೇ ಅವರ ಮುಖದಲ್ಲಿ ಭೀತಿ ಕಾಣಿಸುತ್ತಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗಿಗ್‌ ಕಾರ್ಮಿಕರ ಕಲ್ಯಾಣದ ಕುರಿತಾಗಿ ಮಾತನಾಡಿದ ಅವರು, ‘ಕಾಂಗ್ರೆಸ್ ಗಿಗ್ ಕಾರ್ಮಿಕರೊಂದಿಗೆ ಸದಾ ನಿಲ್ಲುತ್ತದೆ. ಅವರನ್ನು ಪ್ರಗತಿಗೆ ಪಾಲುದಾರರೆಂದು ಪರಿಗಣಿಸಲಾಗುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್‌ ಸಭೇಲಿ ಇಟಲಿ ಲೀಡರ್‌ ‘ವೋಟ್‌ ಚೋರ್‌, ಗದ್ದಿ ಛೋಡ್‌’ ಘೋಷಣೆ!

ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿಪಕ್ಷಗಳು ವ್ಯಾಪಕವಾಗಿ ಬಳಸುತ್ತಿರುವ ‘ವೋಟ್‌ ಚೋರ್‌, ಗದ್ದಿ ಛೋಡ್‌’ (ಮತಗಳ್ಳ, ಕುರ್ಚಿ ಬಿಡು) ಘೋಷಣೆಯನ್ನು ಶನಿವಾರ ಕಾಂಗ್ರೆಸ್‌ ಆಯೋಜಿಸಿದ್ದ ಸಮಾವೇಶದಲ್ಲಿ ಇಟಲಿಯ ನಾಯಕ ಗಿಯಾಕೊಮೊ ಫಿಲಿಬೆಕ್ ಹೇಳಿದ್ದಾರೆ. ವಿದೇಶಿ ಪ್ರಜೆಯೊಬ್ಬರು ನೀಡಿದ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ‘ಭಾರತ್ ಶೃಂಗಸಭೆ’ಯಲ್ಲಿ ಮಾತನಾಡಿದ ಯುರೋಪಿಯನ್ ಸೋಷಿಯಲಿಸ್ಟ್ ಪಾರ್ಟಿಯ (ಪಿಇಎಸ್‌) ಪ್ರಧಾನ ಕಾರ್ಯದರ್ಶಿ ಗಿಯಾಕೊಮೊ ಫಿಲಿಬೆಕ್, ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ನಾವು ಅದನ್ನು ರಕ್ಷಿಸಿಕೊಳ್ಳಬೇಕು ಮತ್ತು ಅದನ್ನು ರಕ್ಷಿಸಲು ಉತ್ತಮ ಮಾರ್ಗವೆಂದರೆ ರಾಹುಲ್ ಗಾಂಧಿ ಮತ್ತು ಭಾರತೀಯ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲುವುದು’ ಎಂದಿದ್ದಾರೆ. ಇದೇ ವೇಳೆ ಮೋದಿಯವರನ್ನು ಉಲ್ಲೇಖಿಸಿ ‘ವೋಟ್‌ ಚೋರ್‌, ಗದ್ದಿ ಛೋಡ್‌’ ಎಂದಿದ್ದಾರೆ.

ಬಿಜೆಪಿ ಕಿಡಿ: ಇಟಲಿ ವ್ಯಕ್ತಿಯ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಯವರ ರಾಜಕೀಯವು ಈಗ ರಾಜಕೀಯ ವಿರೋಧದ ಮಿತಿಗಳನ್ನು ಮೀರಿ, ರಾಷ್ಟ್ರವಿರೋಧಿ ಕಾರ್ಯಸೂಚಿಯತ್ತ ಸಾಗುತ್ತಿದೆ. ಕಾಂಗ್ರೆಸ್‌ ದೇಶವಿರೋಧಿ ಶಕ್ತಿಗಳನ್ನು ಆಹ್ವಾನಿಸುತ್ತಿದೆ ಎಂದು ಆರೋಪಿಸಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

₹ 15 ಕೋಟಿ ಚಿನ್ನ ಕದ್ದ ಯುಟ್ಯೂಬರ್ಸ್‌! ತನಿಷ್ಕ್‌ ಮಳಿಗೆಯಲ್ಲಿ ಕೃತ್ಯ
ನಿಖಿಲ್ ಕುಮಾರಸ್ವಾಮಿಗೆ ದೇವಸ್ಥಾನ ಪ್ರವೇಶ ನಿರಾಕರಣೆ