ಶಾ ಹೇಳಿದ್ದು ನಿಜವಾದರೆ ರಾಜಕೀಯ ನಿವೃತ್ತಿ: ಸಿಎಂ

KannadaprabhaNewsNetwork |  
Published : Apr 03, 2024, 01:43 AM ISTUpdated : Apr 03, 2024, 04:20 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ಬರ ಪರಿಹಾರ ನೀಡುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ  ಅಮಿತ್‌ ಶಾ ಅವರು ಬಿಜೆಪಿಯ ಚುನಾವಣಾ ಪ್ರಚಾರವನ್ನು  ಉದ್ಘಾಟಿಸಿದ್ದಾರೆ. ಅವರ ಸುಳ್ಳಿನ ಪ್ರಚಾರಕ್ಕೆ ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

 ಬೆಂಗಳೂರು :  ಬರ ಪರಿಹಾರ ನೀಡುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿಯ ಚುನಾವಣಾ ಪ್ರಚಾರವನ್ನು ಸುಳ್ಳುಗಳ ಮೂಲಕವೇ ಉದ್ಘಾಟಿಸಿದ್ದಾರೆ. ಅವರ ಸುಳ್ಳಿನ ಪ್ರಚಾರಕ್ಕೆ ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

‘ರಾಜ್ಯ ಸರ್ಕಾರ ಮೂರು ತಿಂಗಳು ವಿಳಂಬವಾಗಿ ಬರ ಪರಿಹಾರ ಕೋರಿ ಮನವಿ ಸಲ್ಲಿಸಿತ್ತು. ಅಷ್ಟರಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾದ ಕಾರಣ ಪರಿಹಾರ ನೀಡಲು ಸಾಧ್ಯವಾಗಿಲ್ಲ’ ಎಂದು ಹೇಳಿರುವ ಅಮಿತ್‌ ಶಾ ಅವರ ಹೇಳಿಕೆಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಬರ ಪರಿಹಾರ ನೀಡುವ ವಿಚಾರವಾಗಿ ರಾಮನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅಪ್ಪಟ ಸುಳ್ಳು ಹೇಳಿದ್ದೀರಿ. ಈ ಸುಳ್ಳನ್ನು ಹೇಳುವಾಗ ನಿಮ್ಮ ಆತ್ಮಸಾಕ್ಷಿಯಾದರೂ ಕುಟುಕಲಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ನಾನು ನಿಮ್ಮ ಮುಂದಿಡುವ ಸತ್ಯವನ್ನು ಸುಳ್ಳೆಂದು ನೀವು ಸಾಬೀತು ಮಾಡಿದರೆ ನಾನು ರಾಜಕೀಯದಿಂದಲೇ ನಿವೃತ್ತನಾಗುತ್ತೇನೆ. ಹಾಗೆಯೇ, ನೀವು ಹೇಳಿರುವ ಮಾತನ್ನು ಸತ್ಯ ಎಂದು ಸಾಬೀತು ಮಾಡಲಾಗದಿದ್ದರೆ ನೀವೇನು ಮಾಡುತ್ತೀರಿ ಎಂದು ನೀವೇ ನಿರ್ಧರಿಸಿ’ ಎಂದು ಸವಾಲು ಹಾಕಿದ್ದಾರೆ.

ಸಿದ್ದು ವಿವರಣೆ ಇಷ್ಟು:  ಮಳೆ ಅಭಾವದ ಸೂಚನೆ ಸಿಗುತ್ತಿದ್ದಂತೆಯೇ ರಾಜ್ಯ ಸರ್ಕಾರ 2023ರ ಆ. 22ರಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಸಂಪುಟ ಉಪಸಮಿತಿಯ ಮೊದಲ ಸಭೆ ನಡೆಸಿ, ರಾಜ್ಯದ 116 ತಾಲೂಕುಗಳಲ್ಲಿ ಬರಪೀಡಿತವಾಗಿರುವುದನ್ನು ದಾಖಲಿಸಿತು. ಅಂತಿಮವಾಗಿ ನನ್ನ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು.

ಅದರಂತೆ ಎನ್‌ಡಿಆರ್‌ಎಫ್‌ನಿಂದ ತುರ್ತು ಪರಿಹಾರವಾಗಿ 4,860 ಕೋಟಿ ರು. ನೀಡಬೇಕೆಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಸೆ. 22ರಂದು ರಾಜ್ಯ ಸರ್ಕಾರ ಮನವಿ ಸಲ್ಲಿಸಿತು. ಆ ಮನವಿಯಂತೆ ಕೇಂದ್ರ ಸರ್ಕಾರ 10 ಸದಸ್ಯರ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿತು ಹಾಗೂ ಆ ತಂಡವು ಅಕ್ಟೋಬರ್‌ 4ರಿಂದ 9ರವರೆಗೆ ರಾಜ್ಯದ ಬರ ಅಧ್ಯಯನ ನಡೆಸಿತು.

ಆನಂತರವೂ ರಾಜ್ಯದ ಸಂಪುಟ ಉಪಸಮಿತಿ ಅಕ್ಟೋಬರ್‌ನಲ್ಲಿ ನಾಲ್ಕು ಬಾರಿ ಸಭೆ ನಡೆಸಿ ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಎಂದು ಘೋಷಿಸಿತು. ಬರಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ನಡೆಸಲು ಎನ್‌ಡಿಆರ್‌ಎಫ್‌ನಿಂದ 18,171.44 ಕೋಟಿ ರು. ನೀಡಬೇಕೆಂದು ಕೇಂದ್ರ ಕೃಷಿ ಸಚಿವರಿಗೆ 2023ರ ನವೆಂಬರ್‌ 15ರಂದು ನಾನೇ ಮನವಿ ಪತ್ರವನ್ನು ಬರೆದಿದ್ದೆ.

ಆದರೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬರದ ಕಾರಣ 2023ರ ಡಿ. 19ರಂದು ನಾನು ಮತ್ತು ಕಂದಾಯ ಸಚಿವರು ಪ್ರಧಾನಿ ನರೇಂದ್ರ ಮೋದಿ ಹಾಗೂ ನಿಮ್ಮನ್ನು ಭೇಟಿಯಾಗಿ ಬರ ಪರಿಹಾರಕ್ಕಾಗಿ ಮನವಿ ಮಾಡಿದ್ದೆವು. ಆ ಭೇಟಿ ಸಮಯದಲ್ಲಿ ಒಂದು ವಾರದೊಳಗೆ ಉನ್ನತಾಧಿಕಾರಿಗಳ ಸಭೆ ನಡೆಸಿ ಪರಿಹಾರ ನೀಡುವ ನಿರ್ಧಾರ ಕೈಗೊಳ್ಳುವುದಾಗಿ ನೀವೇ ಆಶ್ವಾಸನೆ ನೀಡಿದ್ದೀರಿ.

ನೀವು ಕೊಟ್ಟ ಒಂದು ವಾರದ ಆಶ್ವಾಸನೆ ಮುಗಿದು ಮೂರು ತಿಂಗಳಾಗಿವೆ. ಈಗ ರಾಜ್ಯಕ್ಕೆ ಬಂದು ನೀವು ಮಾಡಿರುವ ಘನಘೋರ ಅನ್ಯಾಯವನ್ನು ಮುಚ್ಚಿಹಾಕಲು ಸುಳ್ಳಿನ ಮೊರೆ ಹೋಗಿದ್ದೀರಿ. ಆದರೆ, ಜಾಗೃತ ಕನ್ನಡಿಗರು ನಿಮ್ಮ ಸುಳ್ಳಿಗೆ ಬಲಿಯಾಗುವುದಿಲ್ಲ. ನಿಮ್ಮ ದ್ರೋಹಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ಬೆಂಗಳೂರು ಪಾಲಿಕೆ ತಡೆ