;Resize=(412,232))
ಬೆಂಗಳೂರು : ಆರ್‌ಎಸ್‌ಎಸ್, ಬಿಜೆಪಿ ಮತ್ತು ಪ್ರಧಾನಿ ಮೋದಿ ದೇಶವನ್ನು ಹಾಳು ಮಾಡುತ್ತಿದ್ದು, ನರೇಂದ್ರ ಮೋದಿ ಅವರಿಗೆ ಶೀಘ್ರ ಸಂಕಷ್ಟ ಎದುರಾಗಲಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಿದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅಲ್ಲದೆ, ಅಯೋಧ್ಯೆ ರಾಮಮಂದಿರದ ಹೆಸರಿನಲ್ಲೂ ಅಕ್ರಮ ಎಸೆಗಲಾಗಿದ್ದು, ಅದರ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು ಎಂದೂ ಅವರು ಆಗ್ರಹಿಸಿದರು.
ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿ.ಕೆ.ಹರಿಪ್ರಸಾದ್ ಅವರ ಕೆಪಿಸಿಸಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರಾಮನ ಹೆಸರಿನಲ್ಲಿ ಚುನಾವಣೆ ನಡೆಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೀಗ ರಾಮಮಂದಿರದ ಪೂಜಾರಿಯೇ ಹುಂಡಿ ದುಡ್ಡು ಹೊಡೆದಿದ್ದಾರೆ. ರಾಮನ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗಿದೆ. ರಾಮಮಂದಿರದ ಹುಂಡಿ ದುಡ್ಡನ್ನು ಬಿಜೆಪಿ ನಾಯಕರ ಶಿಷ್ಯರೇ ಹೊಡೆದಿದ್ದಾರೆಯೇ? ಅಥವಾ ಬೇರೆಯವರೇ ಎಂಬ ಬಗ್ಗೆ ತನಿಖೆಯಾಗಬೇಕು. ಅದಕ್ಕಾಗಿ ಅಲ್ಲಿನ ಸರ್ಕಾರ ಎಸ್‌ಐಟಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ನೀಟ್ ಪರೀಕ್ಷೆ ಸಮರ್ಪಕವಾಗಿ ನಡೆಸಲಾಗದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಮಸ್ಯೆ ಮಾಡಲಾಗಿದೆ. ನೀಟ್ ಪರೀಕ್ಷೆ ಬದಲು ಕರ್ನಾಟಕ ಮಾದರಿಯ ಸಿಇಟಿ ಪರೀಕ್ಷೆ ಮಾಡಬೇಕು. ಅದಕ್ಕೆ ಪಿಯು ಅಂಕಗಳನ್ನು ಸೇರಿಸಬೇಕು. ಮೆಡಿಕಲ್ ಸೀಟುಗಳು ಶ್ರೀಮಂತರ ಪಾಲಾಗುತ್ತಿದೆ. ಬಡ ಮಕ್ಕಳು, ಪ್ರತಿಭಾವಂತರು ಒದ್ದಾಡುವಂತಾಗಿದೆ. ನೀಟ್ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಬಿಜೆಪಿ ಮತ್ತು ಧರ್ಮೇಂದ್ರ ಪ್ರಧಾನ್ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಆರ್‌ಎಸ್‌ಎಸ್, ಬಿಜೆಪಿ ಮತ್ತು ಪ್ರಧಾನಿ ಮೋದಿ ದೇಶವನ್ನು ಹಾಳು ಮಾಡುತ್ತಿದ್ದಾರೆ. 2029ರ ಚುನಾವಣೆಯಲ್ಲಿ ನಾವು ಗೆದ್ದು ಅಧಿಕಾರಕ್ಕೆ ಬಾರದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಅವರ ಅಕ್ರಮಗಳ ಪರಿಣಾಮ ದೇಶದ ಯುವಜನತೆ ಮತ್ತು ಮಹಿಳೆಯರ ಮೇಲೆ ಬೀಳುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಣ್ಣ ಬೆಲೆ ಏರಿಕೆಯಾದರೂ ಪ್ರತಿಭಟನೆ ಮಾಡುತ್ತಿದ್ದರು. ಈಗ ಅವರೆಲ್ಲ ಎಲ್ಲಿದ್ದಾರೆ ಎಂಬುದೇ ಕಾಣುತ್ತಿಲ್ಲ. 12 ವರ್ಷಗಳಲ್ಲಿ ಮೋದಿ ನೀಡಿದ್ದು ಕೇವಲ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಮತ್ತು ಸುಳ್ಳು ಭರವಸೆಗಳು ಮಾತ್ರ ಎಂದರು.
ಒಂದಲ್ಲ ಒಂದು ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರ ಬಿದ್ದೇ ಬೀಳುತ್ತದೆ. ಮೊದಿ ಅವರಿಗೆ ಶೀಘ್ರದಲ್ಲಿ ಸಂಕಷ್ಟ ಎದುರಾಗುತ್ತದೆ. ದೇಶದ ಶಿಕ್ಷಣದಲ್ಲಿ ದಿಕ್ಕು ತಪ್ಪಿಸುವ ಪಾಠಗಳನ್ನು ಸೇರಿಸಲಾಗಿದೆ. ಶಿಕ್ಷಕರು ಸೇರಿ ಅನೇಕ ಹುದ್ದೆಗಳಿಗೆ ಆರ್‌ಎಸ್‌ಎಸ್ ಹಿನ್ನೆಲೆಯ ಜನರನ್ನು ಸೇರಿಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ದೇಶ ಹಾಳಾಗುತ್ತದೆ. ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದೇ ಮೋದಿ ಸಾಧನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕೇಂದ್ರದಿಂದ ಜನರ ಲೂಟಿ-ಸುರ್ಜೇವಾಲಾ:
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಸಮಾಜದ ಕಟ್ಟಕಡೆಯ ಪ್ರಜೆಗೂ ನ್ಯಾಯ ಸಿಗಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ. ಆದರೆ, ಬಿಜೆಪಿ ಮಾತ್ರ ಬೆಲೆ ಏರಿಕೆ ಸೇರಿ ಇನ್ನಿತರ ಅಕ್ರಮದಿಂದಾಗಿ ಜನರ ಮೇಲೆ ಪ್ರಹಾರ ಮಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ 12 ವರ್ಷಗಳಲ್ಲಿ ತೈಲಗಳ ಮೇಲೆ ತೆರಿಗೆ ಹಾಕಿ ಕೊಳ್ಳೆ ಹೊಡೆದಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಜನರನ್ನು ಲೂಟಿ ಮಾಡಲಾಗಿದೆ. ಕ್ಯಾನ್ಸರ್ ಲಸಿಕೆ ಬೆಲೆ ಏರಿಸಿ ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಹೇಳಿದರು.
ನೀಟ್ ಸೇರಿ ಎಲ್ಲ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದೆ. ಆದರೂ, ಪ್ರಧಾನಿ ಮೋದಿ ಮೌನವಾಗಿದ್ದಾರೆ. ಇನ್ನು, ಕರ್ನಾಟಕಕ್ಕೆ ಅನುದಾನ ಹಂಚಿಕೆ ವಿಚಾರದಲ್ಲಿ ಭಾರೀ ಅನ್ಯಾಯ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸುಮಾರು 1.87 ಲಕ್ಷ ಕೋಟಿ ರು. ಅನುದಾನ ಬಾಕಿ ಉಳಿಸಿಕೊಂಡಿದೆ ಎಂದರು.