ಚಿಕ್ಕಬಳ್ಳಾಪುರ : ಕಾಂಗ್ರೆಸ್‌ಗೆ ಮತ ನೀಡಿದ್ದಕ್ಕೆ ಕಳೆದ 10 ತಿಂಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಜನರು ಕಾಂಗ್ರೆಸ್‌ಗೆ ಮತ ಹಾಕಿದರೆ ಡಬಲ್ ಕಷ್ಟ ಅನುಭವಿಸಬೇಕಾಗುತ್ತದೆ. ಉತ್ತಮ ಜೀವನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ ನೀಡಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮನವಿ ಮಾಡಿದರು. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಳೇಹಳ್ಳಿ, ಶ್ಯಾಂಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ,ದೇಶ ರಕ್ಷಣೆಯನ್ನು ಮಾಡಲು ನರೇಂದ್ರ ಮೋದಿಯವರಿಗೆ ಮಾತ್ರ ಸಾಧ್ಯ ಎಂದರು.
ಬಾಂಬ್, ಪಾಕ್ ಪರ ಘೋಷಣೆ
ಕಾಶ್ಮೀರದಲ್ಲಿ ಮೊದಲು ಕಲ್ಲು ಬಿಸಾಡುವಂತೆ ಬಾಂಬ್ ಬಿಸಾಡುತ್ತಿದ್ದರು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಬಾಂಬ್‌ನ ಶಬ್ದ ಕೂಡ ಕೇಳಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಬೆಂಗಳೂರಿನಲ್ಲಿ ಬಾಂಬ್ ಸಿಡಿದಿದೆ. ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರು ಆಯ್ಕೆಯಾದಾಗ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದಾರೆ.
ಹೀಗಾದರೆ ಮುಂದೆ ಏನಾಗುತ್ತದೆ ಎಂದು ಜನರು ಚಿಂತಿಸಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಬಡವರ ಪರವಾಗಿ ಚಿಂತಿಸುತ್ತಾರೆ. ಮಹಿಳೆಯರ ಆರೋಗ್ಯ ಹಾಳಾಗುವುದನ್ನು ನೋಡಿ 10 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಿದ್ದಾರೆ. ಮಹಿಳೆಯರು ದೂರದ ಕೆರೆ, ಬಾವಿಯಿಂದ ನೀರು ತರಬಾರದೆಂದು ಜಲಜೀವನ್ ಮಿಷನ್‌ನಡಿ ಮನೆಮನೆಗೆ ಕೊಳಾಯಿ ನೀರು ನೀಡಿದ್ದಾರೆ. ಕಿಸಾನ್ ಸಮ್ಮಾನ್‌ನಡಿ ರೈತರಿಗೆ ಹಣ ನೀಡಿದ್ದಾರೆ. ಆದರೆ ಅದನ್ನು ರಾಜ್ಯ ಸರ್ಕಾರ ಕಿತ್ತುಕೊಂಡಿದೆ. ಒಂದು ಕಡೆ ತಗೊಂಡು ಮತ್ತೊಂದು ಕಡೆ ಮರಳಿ ಪಡೆಯುವುದೇ ಕಾಂಗ್ರೆಸ್‌ನ ಗ್ಯಾರಂಟಿ ಎನಿಸಿಕೊಂಡಿದೆ ಎಂದು ದೂರಿದರು.ಸುಳ್ಳು ಗ್ಯಾರಂಟಿ ನೀಡುವುದಿಲ್ಲ
ಕಾಂಗ್ರೆಸ್ ನಾಯಕರು ವಿದ್ಯುತ್ ಉಚಿತವೆಂದು ಹೇಳಿ ಈಗ ದರ ಹೆಚ್ಚಳ ಮಾಡಿದ್ದಾರೆ. ಇದರಿಂದಾಗಿ ಪ್ರತಿ ಕುಟುಂಬಗಳ ಖರ್ಚು ಅಧಿಕವಾಗಿದೆ. 10 ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳಿ ಏನೂ ಕೊಟ್ಟಿಲ್ಲ. ಈಗಲೂ 5 ಕೆಜಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಪ್ರಧಾನಿ ಮೋದಿ ಅಕ್ಕಿ ಕೊಡುವ ಬಗ್ಗೆ ಹೇಳಿಕೊಳ್ಳದಿದ್ದರೂ, ಕಾಂಗ್ರೆಸ್ ನಾಯಕರು ಮಾತ್ರ ಅನ್ನಭಾಗ್ಯವನ್ನು ತಾವೇ ಕೊಟ್ಟಿದ್ದು ಎಂದು ಎಲ್ಲ ಕಡೆ ಹೇಳುತ್ತಿದ್ದಾರೆ. ಬಿಜೆಪಿ ಎಂದಿಗೂ ಸುಳ್ಳು ಗ್ಯಾರಂಟಿ ನೀಡುವುದಿಲ್ಲ. ಅದರ ಬದಲು ಬದುಕು ಕಟ್ಟಿಕೊಡುವ ಯೋಜನೆಗಳನ್ನು ನೀಡುತ್ತದೆ ಎಂದರು.
ಕಾರ್ಯಕರ್ತನ ಕೊರಳಿಗೆ ಹಾರ
ಈ ವೇಳೆ ಕಾಂಗ್ರೆಸ್ ತೊರೆದು ಹಲವಾರು ಮುಖಂಡರು ಬಿಜೆಪಿಯನ್ನು ಸೇರ್ಪಡೆಯಾದರು. ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಲು ಪಾದಯಾತ್ರೆಯಲ್ಲಿ ತೆರಳುವಾಗ ತಮಗೆ ಹಾರ ಹಾಕಲು ಬಂದ ಕಾರ್ಯಕರ್ತನಿಗೆ ಡಾ.ಕೆ.ಸುಧಾಕರ್ ಹಾರ ಹಾಕಿ ಅಭಿನಂದಿಸಿದರು. ಪ್ರಚಾರ ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಇದ್ದರು.