ಸಂಪುಟ ಪುನಾರಚನೆ ಕುರಿತಂತೆ ಚರ್ಚೆ ನಡೆಯುತ್ತಿದ್ದು, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ. ದೆಹಲಿಯಿಂದ ಪಟ್ಟಿ ಬಂದರೆ ಕಥೆ ಮುಗಿಯಿತು. ಮನೆ ಖಾಲಿ ಮಾಡಿಕೊಂಡು ಹೋಗಬೇಕು ಅಷ್ಟೇ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ
ಬೆಂಗಳೂರು : ಸಂಪುಟ ಪುನಾರಚನೆ ಕುರಿತಂತೆ ಚರ್ಚೆ ನಡೆಯುತ್ತಿದ್ದು, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ. ದೆಹಲಿಯಿಂದ ಪಟ್ಟಿ ಬಂದರೆ ಕಥೆ ಮುಗಿಯಿತು. ಮನೆ ಖಾಲಿ ಮಾಡಿಕೊಂಡು ಹೋಗಬೇಕು ಅಷ್ಟೇ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಕೆಲವರ ಖಾತೆ ಬದಲಾವಣೆ ಬಗ್ಗೆಯೂ ಮಾತುಕತೆ ನಡೆದಿದೆ. ಆದರೆ, ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. ವರಿಷ್ಠರು ನಿರ್ಧರಿಸಿದರೆ ಸಚಿವ ಸಂಪುಟ ಪುನಾರಚನೆ ಆಗದೆಯೂ ಇರಬಹುದು ಎಂದರು.
ದೆಹಲಿ ನಾಯಕರೇ ಎಲ್ಲ ನಿರ್ಧಾರಕ್ಕೂ ಅಂತಿಮವಾಗಲಿದ್ದಾರೆ. ದೆಹಲಿಯಿಂದ ಪಟ್ಟಿ ಬಂದರೆ ಎಲ್ಲರೂ ಬದಲಾಗಬೇಕು ಹಾಗೂ ಕಥೆಯೂ ಮುಗಿಯುತ್ತದೆ. ಸಚಿವ ಸ್ಥಾನಕ್ಕಾಗಿ ಹಲವು ಆಕಾಂಕ್ಷಿಗಳಿದ್ದಾರೆ. ನಮ್ಮಲ್ಲಿ ಹಿರಿಯ ಶಾಸಕರಿದ್ದಾರೆ. ಹೈಕಮಾಂಡ್ ಸೂಚಿಸಿದರೆ ಎಲ್ಲರೂ ತ್ಯಾಗಕ್ಕೆ ಸಿದ್ಧರಿರಬೇಕು. ದೆಹಲಿಯಿಂದ ಪಟ್ಟಿ ಬಂದರೆ ಸಚಿವರಿಗೆ ನೀಡಿರುವ ಮನೆ ಖಾಲಿ ಮಾಡಿ ಹೊರಡುತ್ತಿರಬೇಕು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಲ್ಲು-ಮುಳ್ಳಿನ ಹಾದಿ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಸುಲಭವಲ್ಲ. ಅದು ಕಲ್ಲು-ಮುಳ್ಳಿನ ಹಾದಿ. ಆದರೆ, ಸದ್ಯಕ್ಕೆ ನನ್ನ ಮುಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಯೋಚನೆಯಿಲ್ಲ. ಮುಂದೆ ಏನಾಗುತ್ತದೆಯೋ ನೋಡಬೇಕು. ಸಚಿವ ಸಂಪುಟ ಪುನಾರಚನೆ ಜತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಹಿಂದೆ ಚರ್ಚೆಯಾಗಿತ್ತು. ಹೈಕಮಾಂಡ್ ಎಲ್ಲ ಬದಲಾವಣೆಗಳನ್ನು ಯಾವಾಗ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು ಎಂದರು.