ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಪಕ್ಷ ಗೆಲುವಿನಲ್ಲಿಯೂ ವಿಕೃತಿ ಮೆರೆಯುತ್ತಿದ್ದು, ಜೆಡಿಎಸ್ ಖಾಲಿ ಮಾಡಿಸುತ್ತೇನೆ ಎಂದ ವ್ಯಕ್ತಿ ರಾಜಕೀಯ ವ್ಯಾಪಾರಿ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಪಕ್ಷ ಗೆಲುವಿನಲ್ಲಿಯೂ ವಿಕೃತಿ ಮೆರೆಯುತ್ತಿದ್ದು, ಜೆಡಿಎಸ್ ಖಾಲಿ ಮಾಡಿಸುತ್ತೇನೆ ಎಂದ ವ್ಯಕ್ತಿ ರಾಜಕೀಯ ವ್ಯಾಪಾರಿ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆ ಫಲಿತಾಂಶ ಬಳಿಕ ಜೆಡಿಎಸ್ ಕಾರ್ಯಕರ್ತರಿಗೆ ಪತ್ರ ಬರೆದಿರುವ ಅವರು, ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು. ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುವುದಿಲ್ಲ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೆಸರು ಉಲ್ಲೇಖಿಸದೇ ಕಿಡಿಕಾರಿದ್ದಾರೆ.
‘ಪಕ್ಷ ನನಗೆ ಟಾಸ್ಕ್ ಕೊಡಲಿ, ಕೇವಲ 15 ದಿನದಲ್ಲಿ ಜೆಡಿಎಸ್ ಪಕ್ಷವನ್ನು ಖಾಲಿ ಮಾಡಿಬಿಡುತ್ತೇನೆ’ ಎನ್ನುವ ದರ್ಪ, ಅಹಂಕಾರ ಆ ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ. ಜನಾದೇಶವನ್ನು ದೈವ ನಿರ್ಣಯವೆಂದು ಭಾವಿಸಿ, ಕ್ಷೇತ್ರದ ಜನತೆಯ ಪದತಲಕ್ಕೆ ಅರ್ಪಣೆಯಾಗಬೇಕಿದ್ದ ಗೆಲುವು ವಿರೋಧ ಪಕ್ಷವನ್ನು ನಿರ್ನಾಮ ಮಾಡುವ, ಎದುರಾಳಿಯ ಸೋಲನ್ನು ಅವಹೇಳನ ಮಾಡುವ, ವಿರೋಧಿ ನಾಯಕರನ್ನು ಕೀಳಾಗಿ ನಿಂದಿಸುವ ವಿಕಾರಿ ಅವಸ್ಥೆಗೆ ಹೋಗಬಾರದಿತ್ತು ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ:
ನಮ್ಮ ಪಕ್ಷವೇನು? ನಾಯಕತ್ವದ ಬಲವೇನು? ಛಲದಂಕಮಲ್ಲರಾದ ಕಾರ್ಯಕರ್ತರ ಶಕ್ತಿಯೇನು? ಎಂಬುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇವೆ. ಪಕ್ಷವನ್ನು ಮರಳಿ ಕಟ್ಟಿ, ಬೀದಿಯಲ್ಲಿ ನಿಂತು ಜನಪರವಾಗಿ ಹೋರಾಡಲಾಗುವುದು ಎಂದು ತಿರುಗೇಟು ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕನೊಬ್ಬ, ಇನ್ನೂ ವಿಧಾನಸಭಾಧ್ಯಕ್ಷರಿಂದ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಸಂವಿಧಾನಬಾಹಿರ, ಜನತಂತ್ರ ವಿರೋಧಿ ಕೃತ್ಯಕ್ಕೆ ಇಳಿದು ಒಬ್ಬ ಕ್ರಿಮಿನಲ್ ರೀತಿ ಮಾತನಾಡುತ್ತಾನೆಂದರೆ, ಅದು ಎಂತಹ ಸ್ಥಿತಿಯಲ್ಲಿದೆ ಕರ್ನಾಟಕ ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.