ಒಂದೇ ತಿಂಗಳಲ್ಲಿ 200 ಸ್ವತ್ತುಗಳಿಗೆ ಅಕ್ರಮವಾಗಿ ಎ ಖಾತಾ: ರಮೇಶ್‌

KannadaprabhaNewsNetwork | Updated : Mar 05 2024, 10:35 AM IST

ಸಾರಾಂಶ

ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೂರಾರು ಸ್ವತ್ತುಗಳಿಗೆ ನಕಲಿ ಖಾತೆಗಳನ್ನು ಮಾಡುವ ಮೂಲಕ ₹5 ಕೋಟಿನಷ್ಟು ಹಣವನ್ನು ಪಾಲಿಕೆಗೆ ವಂಚಿಸಿರುವ ಅಧಿಕಾರಿಗಳು ಮತ್ತು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೂರಾರು ಸ್ವತ್ತುಗಳಿಗೆ ನಕಲಿ ಖಾತೆಗಳನ್ನು ಮಾಡುವ ಮೂಲಕ ₹5 ಕೋಟಿನಷ್ಟು ಹಣವನ್ನು ಪಾಲಿಕೆಗೆ ವಂಚಿಸಿರುವ ಅಧಿಕಾರಿಗಳು ಮತ್ತು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪ ವಿಭಾಗದ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್‌ ವ್ಯಾಪ್ತಿಯಲ್ಲಿ ಇದೇ ತಿಂಗಳಲ್ಲಿ ಒಟ್ಟು 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ ‘ಎ’ ಖಾತಾಗಳನ್ನು ಮಾಡಿಕೊಡಲಾಗಿದೆ.

ಈ ಮೂಲಕ ಸುಮಾರು ₹5 ಕೋಟಿಗಿಂತ ಹೆಚ್ಚು ಮೊತ್ತವನ್ನು ಪಾಲಿಕೆಗೆ ನಷ್ಟ ಉಂಟು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಡಾ। ಬಸವರಾಜ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೇವರಾಜು, ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್, ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ಅಜಯ್ ಮತ್ತು ಮೆರು ಇನ್ಫೋ ಸಲ್ಯೂಷನ್‌ ಸಂಸ್ಥೆಯ ಮುಖ್ಯಸ್ಥರು ಹಗರಣದಲ್ಲಿ ಭಾಗಿಯಾಗಿದ್ದಾರೆ.

 ಹತ್ತಾರು ನಿವೇಶನಗಳನ್ನೊಳಗೊಂಡ ಖಾಸಗಿ ಬಡಾವಣೆಯ ಬಿಡಿ ನಿವೇಶನಗಳ ಖಾತಾ ಮಾಡಲು ಕಾನೂನು ರೀತ್ಯಾ ಅವಕಾಶವಿಲ್ಲ. 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ವತ್ತಿಗೆ ಯಾವುದೇ ಮಾಲೀಕನೂ ಸಹ ಖಾತಾ ಮಾಡಿಕೊಡುವಂತೆ ಅರ್ಜಿಗಳನ್ನೇ ಸಲ್ಲಿಸಿಲ್ಲ ಎಂದು ದೂರಿದ್ದಾರೆ.

ಯಾವುದೇ ಸ್ವತ್ತಿಗೆ ಖಾತಾಗಳನ್ನು ಮಾಡಿಕೊಡುವ ಮೊದಲು ಕಡ್ಡಾಯವಾಗಿ ಇರಬೇಕಾದ ಕಂದಾಯ ಪರಿವೀಕ್ಷಕರ ವರದಿಯನ್ನು ಈ ಪ್ರಕರಣದಲ್ಲಿ ಒಂದಕ್ಕೂ ಬರೆದಿಲ್ಲ. 

ಈ 200 ಖಾತಾಗಳಿಗೆ ಸಂಬಂಧಿಸಿದ ಕಡತಗಳಿಗೆ ಕೆಟಿಆರ್ ಸಂಖ್ಯೆಗಳು ನೀಡಲಾಗಿಲ್ಲ ಮತ್ತು ಎಂಆರ್‌ ಆಗಿಲ್ಲ. ವಾರ್ಡ್ ನಂಬರ್ 198ರ ‘ಎ’ ವಹಿ ಪುಸ್ತಕದಲ್ಲಿ ವಿಷಯ ನಿರ್ವಾಹಕ ಮತ್ತು ವ್ಯವಸ್ಥಾಪಕರು ತಮ್ಮ ಸಹಿಗಳನ್ನೇ ಹಾಕಿಲ್ಲ. ‘ಎ’ ವಹಿ ಪುಸ್ತಕವು ಯಾವ ದಿನಾಂಕದಿಂದ ಜಾರಿಗೆ ಬಂದಿದೆ ಎಂಬ ಬಗ್ಗೆ ದಾಖಲೆಗಳೇ ಇಲ್ಲ ಎಂದು ತಿಳಿಸಿದ್ದಾರೆ.

ಅಕ್ರಮ ಎಸಗಿರುವವರ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕು. -ಎನ್‌.ಆರ್‌.ರಮೇಶ್‌, ಬಿಜೆಪಿ ಮುಖಂಡ

Share this article