ಪೆರಿಫೆರಲ್‌ ರಿಂಗ್‌ ರೋಡ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಕ್ರಮ ಭೂಸ್ವಾಧೀನ : ಶ್ರೀನಿವಾಸ್‌

KannadaprabhaNewsNetwork | Updated : Apr 11 2025, 04:23 AM IST

ಸಾರಾಂಶ

 ರಿಂಗ್‌ ರೋಡ್‌ ನಿರ್ಮಾಣದ ಭೂಸ್ವಾಧೀನಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಾನೂನು ಉಲ್ಲಂಘಿಸಿ, ಬೆದರಿಸಿ ರೈತರಿಂದ ಸಂದಾನಿತ ದರ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದು,   ನಿಲ್ಲಿಸದಿದ್ದರೆ ಜೈಲ್‌ ಭರೋ ಚಳವಳಿ ನಡೆಸುವುದಾಗಿ ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘ ಎಚ್ಚರಿಸಿದೆ.

 ಬೆಂಗಳೂರು : ಪೆರಿಫೆರಲ್‌ ರಿಂಗ್‌ ರೋಡ್‌ ನಿರ್ಮಾಣದ ಭೂಸ್ವಾಧೀನಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಾನೂನು ಉಲ್ಲಂಘಿಸಿ, ಬೆದರಿಸಿ ರೈತರಿಂದ ಸಂದಾನಿತ ದರ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದು, ಈ ಧೋರಣೆ ನಿಲ್ಲಿಸದಿದ್ದರೆ ಜೈಲ್‌ ಭರೋ ಚಳವಳಿ ನಡೆಸುವುದಾಗಿ ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘ ಎಚ್ಚರಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾವಳಿಪುರ ಶ್ರೀನಿವಾಸ್‌, ಕಳೆದ ವರ್ಷ ಸರ್ಕಾರದಿಂದ ರೈತರಿಗೆ ಭೂ ಸ್ವಾಧೀನ ಕಾಯ್ದೆ 2013ರಂತೆ ಪರಿಹಾರ ಅಥವಾ ಟಿಡಿಆರ್ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು. ಆದರೆ, ಬಳಿಕ ರದ್ದುಪಡಿಸಿ ಭೂ ಸ್ವಾಧೀನ ಕಾಯ್ದೆ 1894ರ ಅನ್ವಯ ನಿಗದಿಸಲು ಆದೇಶಿಸಿದೆ. ಇದರ ವಿರುದ್ಧ 600ಕ್ಕೂ ಹೆಚ್ಚು ಜಮೀನಿನ ಹಾಗೂ ನಿವೇಶನದ ಮಾಲೀಕರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದರು.

ಆದರೆ, ಬಿಡಿಎ ಅಧಿಕಾರಿಗಳು ಬೆಂಗಳೂರು ಬಿಸಿನೆಸ್ ಕಾರಿಡಾರ್ ಹೆಸರಿನಲ್ಲಿ ರೈತರಿಗೆ ನೋಟಿಸ್‌ ನೀಡುವುದರ ಜೊತೆಗೆ ಕಳೆದ ವಾರ ತುಮಕೂರು ರಸ್ತೆಯಿಂದ ಏರ್‌ಪೋರ್ಟ್‌ ರಸ್ತೆವರೆಗಿನ ಯೋಜನೆಗೆ ಒಳಪಡುವ ಗ್ರಾಮಗಳ ರೈತರನ್ನು ಕರೆಸಿಕೊಂಡು ನಿಮ್ಮ ಜಮೀನುಗಳಿಗೆ 2013ರ ಹೊಸ ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡಲ್ಲ. 1894 ರ ಅನ್ವಯ ಸಂಧಾನ ಸೂತ್ರದ ಮೂಲಕ ಬಂದರೆ ಒಂದು ಎಕರೆಗೆ ₹ 2- ₹ 3 ಕೋಟಿ ವರೆಗೂ ಕೊಡಿಸುತ್ತೇವೆ ಎನ್ನುತ್ತಿದ್ದಾರೆ.

ಇಲ್ಲದಿದ್ದರೆ ನೀವು ಹತ್ತಾರು ವರ್ಷ ತಿರುಗಾಡಿ ಕೋರ್ಟ್‌ನಲ್ಲಿ ಪರಿಹಾರ ತೆಗೆದುಕೊಳ್ಳಬೇಕು. ಪ್ರಾಧಿಕಾರವು ಅವಾರ್ಡ್ ಮಾಡಿ ರಸ್ತೆ ಕಾಮಗಾರಿ ಪೂರೈಸುತ್ತೇವೆ, ಅಡ್ಡಿ ಪಡಿಸಿದರೆ ಜೈಲಿಗೆ ಹೋಗುತ್ತೀರಾ ಎಂದು ಹೆದರಿಸಿ ರೈತರಿಗೆ ಸುಳ್ಳು ಮಾಹಿತಿ ನೀಡಿ ಸಂಧಾನಿತ ದರ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲು ಆರಂಭಿಸಿದ್ದಾರೆ ಎಂದು ದೂರಿದರು.

ಸರ್ಕಾರ ಇಂತಹ ರೈತ ವಿರೋಧಿ ನೀತಿ ಅನುಸರಿಸದೆ ಈಗಿನ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಸೂಕ್ತ ಪರಿಹಾರ ನೀಡುವಂತೆ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ಯೋಜನೆಗೆ ಒಳಪಡುವ ರೈತರು ಜೈಲ್ ಬರೋ ಚಳವಳಿ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

Share this article