ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ : ಖರ್ಗೆ ಭಾವುಕ

ಸಾರಾಂಶ

ರಾಧಾಕೃಷ್ಣಗೆ ಮತ ಕೊಟ್ಟು ನೋಡಿ,‌ ಮುಂದಿನ 5 ವರ್ಷದಲ್ಲಿ ಏನ್ ಬದಲಾವಣೆ ಆಗುತ್ತೇ ಅಂತ, ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ ಕೆಲಸ ಮಾಡಲು ಬದ್ದನಾಗಿದ್ದೇನೆ, ಹೀಗೆಂದು ತುಂಬಾ ಭಾವುಕರಾಗಿ ಹೇಳಿದ್ದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ರಾಧಾಕೃಷ್ಣಗೆ ಮತ ಕೊಟ್ಟು ನೋಡಿ,‌ ಮುಂದಿನ 5 ವರ್ಷದಲ್ಲಿ ಏನ್ ಬದಲಾವಣೆ ಆಗುತ್ತೇ ಅಂತ, ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ ಕೆಲಸ ಮಾಡಲು ಬದ್ದನಾಗಿದ್ದೇನೆ, ಹೀಗೆಂದು ತುಂಬಾ ಭಾವುಕರಾಗಿ ಹೇಳಿದ್ದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ.ತಮ್ಮ ಅಳಿಯ ರಾಧಾಕೃಷ್ಣರನ್ನು ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿಸಿರುವ ಕಲಬುರಗಿಯಲ್ಲಿಂದು ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ಮಾತಿನ ಕೊನೆಯಲ್ಲಿ ತುಂಬಾ ಭಾವುಕರಾದರು.

ನಾನು ಏನು ಮಾಡಿದ್ದೇನೆ ಅಂತಾ ನೀವು ಅರ್ಥ ಮಾಡಿಕೊಂಡಿದ್ದಿರಾ? ನಾನು ಕೆಲಸಗಾರ ಅಂತಿರಿ. ಆದ್ರೆ ಮತಗಟ್ಟೆಗೆ ಹೋದಾಗ ಏನ್ ಅನಿಸುತ್ತೋ.. ಏನ್ ಆಗುತ್ತೋ ಗೊತ್ತಿಲ್ಲ.. ನಮ್ಮನ್ನು ಮರೆತು ಬಿಡ್ತಿರಿ. ಬೂತ್‌ನಲ್ಲಿ ಹೋದಾಗ ನಮ್ಮನ್ನೇಕೆ ಮರೀತಿರಿ? ಎಂದು ಸೇರಿದ್ದ ಕಾರ್ಯಕರ್ತರಿಗೆ ಪ್ರಶ್ನಿಸಿದರು.

ಇದು ರಾಧಾಕೃಷ್ಣನ, ಖರ್ಗೆಯವರ ಚುನಾವಣೆಯಲ್ಲ, ಸಂವಿಧಾನದ ಅಳಿವು- ಉಳಿವಿನ ಚುನಾವಣೆ. ಪ್ರಜಾಪ್ರಭುತ್ವದ ಸಂರತ್ರಕ್ಷಣೆಗಾಗಿ ನಡೆಯುತ್ತಿರುವ ಚುನಾವಣೆ. ನಾನು ಯಾರೋ ಶಾಸಕರನ್ನೋ, ಸಂಸದರನ್ನೋ ಗೆಲ್ಲಿಸಲು ಚುನಾವಣೆ ಮಾಡೋನಲ್ಲ. ಸಮಾಜದಲ್ಲಿ ಬದಲಾವಣೆ ತರೋದು ನನ್ನ ಗುರಿ ಎಂದರು.

ಈಗಾಗಲೆ ಮೋದಿ ಎಲ್ಲ ಮಷಿನರಿ ಬಳಸಿಕೊಂಡು ಪ್ರಜಾಪ್ರಭುತ್ವ ಹಾಳು ಮಾಡ್ತಿದ್ದಾರೆ. ನಮ್ಮ ಸರಕಾರ ಬಂದರೆ ಮನೆ ಯಜಮಾನಿಗೆ ಒಂದು ಲಕ್ಷ ಕೊಡುತ್ತೇವೆ. ಅಪ್ರೇಂಟಿಸ್ ಕೆಲಸ ಮಾಡುವ ಯುವಕರಿಗೆ ಒಂದೂ ಲಕ್ಷ ವೇತನ ಕೊಡುತ್ತೇವೆ. ಈ ರೀತಿ ಒಟ್ಟು 25 ಗ್ಯಾರಂಟಿಗಳಿವೆ. ಅದನ್ನೆಲ್ಲವನ್ನು ನಾವು ಮಾಡಿ ತೊರಿಸುತ್ತೇವೆಂದು 25ಕ್ಕೂ ಹೆಚ್ಚು ಕಾಂಗ್ರೆಸ್‌ ಗ್ಯಾರಂಟಿಗಳನ್ನು ವಿವರಿಸಿದರು.

 ಖರ್ಗೆಗೆ ಪ್ರಧಾನಿ ಯೋಗ ಕೂಡಿ ಬಂದಿದೆ: ಚಿಂಚನಸೂರ್‌

ಇಂದಿರಾಗಾಂಧಿಯವರು ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಆಗುತ್ತಾರೆ. ಖರ್ಗೆಯವರನ್ನ ಪ್ರಧಾನಿ ಸ್ಥಾನದಲ್ಲಿ ನೋಡಬೇಕಾಗಿದೆ, ರಾಧಾಕೃಷ್ಣರನ್ನ ಗೆಲಿಸಬೇಕಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್‌ ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್‌ನಂಥ ಸುಳ್ಳು ವ್ಯಕ್ತಿ ದೇಶದಲ್ಲಿ ಯಾರು ಇಲ್ಲ. ನನ್ನನ್ನ ಗೆಲ್ಲಿಸುವಂತೆ ಪತ್ನಿ ಜೊತೆಗೆ ಮನೆಗೆ ಬಂದು ನನ್ನ ಕಾಲು ಬಿದ್ದಿದ್ದರು, ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ಕೆಲಸ ಮಾಡುವೆ ಅಂತ ಭರವಸೆ ಕೊಟ್ಟಿದ್ದರು. ದೇಶದ ಸುಳ್ಳಿನ ಯುನಿವರ್ಸಿಟಿಯ ವೈಸ್ ಚಾನ್ಸ್‌ಲರ್‌ನ್ನಾಗಿ ಜಾಧವ್‌ರನ್ನ ನೇಮಕ ಮಾಡಬೇಕು ಎಂದು ಉಮೇಶ ಜಾಧವ್ ವಿರುದ್ಧ ಚಿಂಚನಸೂರ ಆಕ್ರೋಶ ಹೊರಹಾಕಿದರು.

Share this article