ಸಿ.ಪಿ.ಯೋಗೇಶ್ವರ್ ರಾಜೀನಾಮೆ ಪರಿಣಾಮ : ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಮೊದಲ ಹೊಡೆತ

ಸಾರಾಂಶ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ರಾಜಕೀಯ ನಡೆಯಿಂದಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಮೊದಲ ಹೊಡೆತ ಬಿದ್ದಂತಾಗಿದೆ.

ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ರಾಜಕೀಯ ನಡೆಯಿಂದಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಮೊದಲ ಹೊಡೆತ ಬಿದ್ದಂತಾಗಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಉಭಯ ಪಕ್ಷಗಳ ಮೈತ್ರಿಗೆ ತಳಹದಿ ರೂಪಿಸಿದವರಲ್ಲಿ ಯೋಗೇಶ್ವರ್ ಅವರೂ ಒಬ್ಬ ಪ್ರಮುಖರು. ಪರಿಣಾಮ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ನಾಯಕ ಎಚ್‌.ಡಿ.ದೇವೇಗೌಡರ ಅಳಿಯ ಡಾ.ಸಿ.ಎನ್‌.ಮಂಜನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಅವರೇ ಈಗ ಮೈತ್ರಿಯನ್ನು ಧಿಕ್ಕರಿಸಿ ಹೊರಗೆ ಹೆಜ್ಜೆ ಹಾಕಿರುವುದು ಉಭಯ ಪಕ್ಷಗಳ ನಾಯಕರಿಗೆ ಮುಜುಗರ ಉಂಟಾಗಿದೆ.

ಹಾಗೆ ನೋಡಿದರೆ ಯೋಗೇಶ್ವರ್ ಅವರು ಮೊದಲಿನಿಂದಲೂ ತಾವು ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಇದ್ದರು. ಇದಕ್ಕೆ ಪೂರಕವಾಗಿ ಬಿಜೆಪಿಯ ರಾಜ್ಯ ನಾಯಕರನ್ನು ಕರೆದುಕೊಂಡು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆಯನ್ನೂ ನಡೆಸಿ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ, ಚನ್ನಪಟ್ಟಣ ಜೆಡಿಎಸ್‌ ತೆರವುಗೊಳಿಸಿದ ಕ್ಷೇತ್ರವಾಗಿದ್ದರಿಂದ ಅದನ್ನು ಬಿಟ್ಟುಕೊಡಿ ಎಂದು ಕೇಳುವುದಕ್ಕೆ ಬಿಜೆಪಿ ವರಿಷ್ಠರು ಮುಂದಾಗಲಿಲ್ಲ. ಜೆಡಿಎಸ್‌ ನಾಯಕರು ತಾವಾಗಿಯೇ ಬಿಟ್ಟುಕೊಟ್ಟರೆ ಒಳ್ಳೆಯದು ಎಂಬ ನಿಲವಿಗೆ ಬಂದರು.

ಇದು ಯೋಗೇಶ್ವರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಚುನಾವಣೆ ಘೋಷಣೆಯಾಗುವವರೆಗೂ ಯೋಗೇಶ್ವರ್ ಪ್ರಯತ್ನ ನಡೆಸುತ್ತಲೇ ಇದ್ದರು. ಬಿಜೆಪಿ ನಾಯಕರಾದ ಆರ್.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ.

ರಾಮನಗರ ಜಿಲ್ಲೆಯಲ್ಲಿ ಮೈತ್ರಿ ಕೂಟದ ಮಿತ್ರ ಪಕ್ಷವಾದ ಬಿಜೆಪಿಗೆ ಜೆಡಿಎಸ್ ಬಿಟ್ಟುಕೊಡಬಹುದಾದ ಕ್ಷೇತ್ರ ಎಂದರೆ ಅದು ಚನ್ನಪಟ್ಟಣ ಮಾತ್ರ. ಇಲ್ಲಿ ಮಾತ್ರ ಪಕ್ಷದ ಬಲವಿದೆ. ಬೇರೆ ಕ್ಷೇತ್ರಗಳನ್ನು ನಾವು ಕೇಳುವುದಕ್ಕೆ ಆಗುವುದಿಲ್ಲ ಎಂಬುದು ಯೋಗೇಶ್ವರ್‌ ನಿಲುವಾಗಿತ್ತು. ಆದರೆ, ಇದಕ್ಕೆ ಜೆಡಿಎಸ್ ನಾಯಕರು ಆರಂಭದಲ್ಲಿ ಒಪ್ಪಿರಲಿಲ್ಲ. ಅಂತಿಮ ಹಂತದಲ್ಲಿ ನೀವೇ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಿರಿ ಎಂಬ ಆಹ್ವಾನವನ್ನು ಜೆಡಿಎಸ್ ನಾಯಕರು ನೀಡಿದರೂ ಅಷ್ಟು ಹೊತ್ತಿಗೆ ಸಮಯ ಮಿಂಚಿ ಹೋಗಿತ್ತು. ಯೋಗೇಶ್ವರ್ ತಮ್ಮ ಮುಂದಿನ ಹಾದಿ ನಿರ್ಧರಿಸಿದ್ದರು.

ಮೈತ್ರಿ ಭವಿಷ್ಯಕ್ಕೆ ಆತಂಕ:

ಇದು ಕೇವಲ ಉಪಚುನಾವಣೆ ಎಂದು ಕಡೆಗಣಿಸುವಂತಿಲ್ಲ. ಹಳೆ ಮೈಸೂರು ಭಾಗದಲ್ಲಿ ಮುಂದಿನ ಇತರ ಚುನಾವಣೆಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಟಿಕೆಟ್ ಆಯ್ಕೆಗೆ ಇದೇ ರೀತಿಯ ಅಡ್ಡಿ ಆತಂಕಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂಬುದು ಚನ್ನಪಟ್ಟಣ ಕ್ಷೇತ್ರದ ಬೆಳವಣಿಗೆಯಿಂದ ವ್ಯಕ್ತವಾಗುವಂತಿದೆ.

Share this article