ಸಂಸದರ ಸಸ್ಪೆಂಡ್‌ ವಿರುದ್ಧ ದೇಶಾದ್ಯಂತ ಇಂಡಿ ಒಕ್ಕೂಟ ಧರಣಿ

KannadaprabhaNewsNetwork | Updated : Dec 23 2023, 11:44 AM IST

ಸಾರಾಂಶ

ಸಂಸತ್‌ನಲ್ಲಿ ವಿಪಕ್ಷ ಸಂಸದರನ್ನು ಅಮಾನತುಗೊಳಿಸಿರುವ ಸ್ಪೀಕರ್‌ ಹಾಗೂ ರಾಜ್ಯಸಭೆ ಅಧ್ಯಕ್ಷರ ನಡೆ ಖಂಡಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಶುಕ್ರವಾರ ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.

ನವದೆಹಲಿ: ಸಂಸತ್ತಿನ ಉಭಯ ಸದನಗಳ 146 ಸದಸ್ಯರನ್ನು ಅಮಾನತು ಮಾಡಿದ ನಿರ್ಧಾರ ಖಂಡಿಸಿ ಶುಕ್ರವಾರ ದೇಶವ್ಯಾಪಿ ಪ್ರತಿಭಟನೆ ನಡೆಸಲು ‘ಇಂಡಿಯಾ’ ಮೈತ್ರಿಕೂಟ ನಿರ್ಧರಿಸಿದೆ.ಸಂಸತ್‌ ಮೇಲೆ ಇತ್ತೀಚೆಗೆ ನಡೆದ ದಾಳಿಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಸಂಸತ್ತಿನ ಉಭಯ ಸದನಗಳಲ್ಲೂ ಕಳೆದೊಂದು ವಾರದಿಂದ ವಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದರು. ಹೀಗಾಗಿ ಲೋಕಸಭೆಯ 100 ಮತ್ತು ರಾಜ್ಯಸಭೆಯ 46 ಸದಸ್ಯರನ್ನು ಅಮಾನತು ಮಾಡಿ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್‌ ನಿರ್ಧಾರ ಪ್ರಕಟಿಸಿದ್ದಾರೆ.

ಈ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ವಿಪಕ್ಷಗಳ ಸದಸ್ಯರು, ಸರ್ಕಾರ ವಿವಾದಾತ್ಮಕ ಮಸೂದೆಗಳನ್ನು ಸೂಕ್ತ ಚರ್ಚೆ ನಡೆಸದೇ ಅಂಗೀಕಾರ ಪಡೆದುಕೊಳ್ಳಲು ವಿಪಕ್ಷಗಳ ಸದಸ್ಯರ ಅಮಾನತು ತಂತ್ರ ರೂಪಿಸಿದೆ ಎಂದು ಕಿಡಿಕಾರಿದೆ. ಇದೇ ಕಾರಣಕ್ಕೆ ಶುಕ್ರವಾರ ದೇಶವ್ಯಾಪಿ ಪ್ರತಿಭಟನೆ ನಡೆಸಲು ಇಂಡಿಯಾ ಮೈತ್ರಿಕೂಟದ ನಾಯಕರು ನಿರ್ಧರಿಸಿದ್ದಾರೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ಇಂಡಿಯಾ ಕೂಟದ ಪ್ರಮುಖ ನಾಯಕರು ಧರಣಿ ನಡೆಸಲಿದ್ದಾರೆ.ಇದೇ ವಿಷಯ ಮುಂದಿಟ್ಟುಕೊಂಡು ಗುರುವಾರ ಕೂಡ ಇಂಡಿಯಾ ಮೈತ್ರಿಕೂಟದ ಸದಸ್ಯರು ಸಂಸತ್‌ ಭವನದಿಂದ ವಿಜಯ್‌ ಚೌಕ್‌ವರೆಗೆ ಪ್ರತಿಭಟನೆ ನಡೆಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ‘ಸಂಸತ್ತಿನಲ್ಲಾದ ಭದ್ರತಾ ಲೋಪದ ಕುರಿತು ಚರ್ಚೆ ಮಾಡಿ ಎಂದು ಕೇಳಿದ್ದಕ್ಕೆ ಸಂಸದರನ್ನು ಅಮಾನತು ಮಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ದೇಶಾದ್ಯಂತ ಈ ಕುರಿತು ಮಾತನಾಡುತ್ತಾರೆ. ಆದರೆ ಸದನದಲ್ಲಿ ಮಾತನಾಡದೆ ಸಭಾ ಮರ್ಯಾದೆಗೆ ಕುತ್ತು ತಂದಿದ್ದಾರೆ. ಈ ಕುರಿತು ನಾವು ಈಗ ಧ್ವನಿಯೆತ್ತದಿದ್ದರೆ ಮುಂದಿನ ಪೀಳಿಗೆ ನಿರಂಕುಶ ಅಧಿಕಾರದಿಂದ ನರಳುತ್ತದೆ’ ಎಂದು ಹೇಳಿದರು.

Share this article