2024ರಲ್ಲಿ ಬಿಜೆಪಿ ಸೋಲಿಸಲು ವಿಪಕ್ಷ ಪಣ

KannadaprabhaNewsNetwork |  
Published : Dec 23, 2023, 01:47 AM IST
ಪ್ರತಿಭಟನೆ | Kannada Prabha

ಸಾರಾಂಶ

146 ಸಂಸದರ ಸಸ್ಪೆಂಡ್‌ ಖಂಡಿಸಿ ದೇಶಾದ್ಯಂತ ‘ಇಂಡಿಯಾ’ ಶಕ್ತಿಪ್ರದರ್ಶನ ಮಾಡಿದ್ದು, ನಾವೆಲ್ಲ ಒಗ್ಗಟ್ಟಾದ್ರೆ ಪ್ರಧಾನಿ ಮೋದಿಗೆ ಏನೂ ಮಾಡೋಕಾಗಲ್ಲ ಎಂದು ಖರ್ಗೆ ತಿಳಿಸಿದ್ದಾರೆ. ಜೊತೆಗೆ ಬಿಜೆಪಿ ಮುಕ್ತ ಭಾರತ ನಿರ್ಮಾಣಕ್ಕೆ ಇಂಡಿಯಾ ಕೂಟದ ನಾಯಕರು ಕರೆ ನೀಡಿದ್ದಾರೆ.

ನವದೆಹಲಿ: ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ 146 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಶಕ್ತಿಪ್ರದರ್ಶನ ನಡೆಸಿಸಿರುವ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳು, ‘ಪ್ರತಿಪಕ್ಷಗಳ ದನಿಯನ್ನು ಹತ್ತಿಕ್ಕುತ್ತಿರುವ 2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಬೇಕು’ ಎಂದು ಒಕ್ಕೊರಲ ಪಣ ತೊಟ್ಟಿವೆ.

ಶುಕ್ರವಾರ ದೇಶದ ವಿವಿಧ ಭಾಗಗಳು ಹಾಗೂ ದೆಹಲಿಯ ಜಂತರ್‌ ಮಂತರ್‌ನಲ್ಲಿ ಇಂಡಿಯಾ ಕೂಟದ ನಾಯಕರು ಭಾರೀ ಪ್ರತಿಭಟನೆ ನಡೆಸಿದರು. ‘ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು. ಇದಕ್ಕಾಗಿ ಜನರು ಒಂದಾಗಬೇಕು’ ಎಂದು ವಿಪಕ್ಷ ನಾಯಕರು ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ‘ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಎಲ್ಲರೂ ಒಗ್ಗೂಡಿದಾಗ, ಪ್ರಧಾನಿ ನರೇಂದ್ರ ಮೋದಿಯವರಿಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ನೀವು ನಮ್ಮನ್ನು ತುಳಿಯಲು ಎಷ್ಟು ಪ್ರಯತ್ನಿಸುತ್ತೀರೋ ಅಷ್ಟು ನಾವು ಮೇಲಕ್ಕೆ ಏರುತ್ತೇವೆ. ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಒಗ್ಗಟ್ಟಿನಿಂದ ಹೋರಾಡುತ್ತಿದ್ದೇವೆ’ ಎಂದು ಕಿಡಿಕಾರಿದರು.

ಅಲ್ಲದೇ ‘ಸರ್ಕಾರವು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ತನ್ನ ವಿರುದ್ಧದ ಆರೋಪವನ್ನು ಮರೆಮಾಚಬಹುದು ಎಂದು ಅದು ಬಿಜೆಪಿ ಭಾವಿಸಿದೆ. ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಯಾವುದೇ ಬೆಲೆ ತೆರಲು ಸಿದ್ಧರಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ದಲಿತರು ಅಸಮಾಧಾನಗೊಂಡಿದ್ದಾರೆ. ನಾವು ಜವಾಬ್ದಾರಿ ತೆಗೆದುಕೊಳ್ಳಬೇಕು. ಕಷ್ಟಪಟ್ಟು ದುಡಿಯುತ್ತೇವೆ ಮತ್ತು ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಈ ಶಕ್ತಿ (ಬಿಜೆಪಿ)ಯನ್ನು 2024ರಲ್ಲಿ ಸೋಲಿಸುತ್ತೇವೆ’ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಗುಡುಗಿದರು.

ಇದೇ ವೇಳೆ ಮಾತನಾಡಿದ ವಿವಿಧ ನಾಯಕರು, ‘ಬಿಜೆಪಿ ಪ್ರಜಾಪ್ರಭುತ್ವದ ಕೊಲೆ ಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿಗೆ ಪ್ರಜಾಪ್ರಭುತ್ವ ಮುಕ್ತ ಭಾರತ ಬೇಕಾಗಿದೆ. ಆದರೆ ಭಾರತವನ್ನು ಬಿಜೆಪಿ ಮುಕ್ತಗೊಳಿಸಬೇಕು ಎಂದು ನಾವು ಜನರಲ್ಲಿ ವಿನಂತಿ ಮಾಡುತ್ತೇವೆ’ ಎಂದು ಕರೆ ನೀಡಿದರು.

‘ಮೋದಿ ಸರ್ಕಾರ ಸರ್ವಾಧಿಕಾರಿಯಾಗಿದೆ. ಇದು ಕೇವಲ ಅಮಾನತುಗೊಂಡ ಸಂಸದರ ಹೋರಾಟವಲ್ಲ. ಪ್ರಧಾನಿ ವಿದೇಶಗಳಿಗೆ ಹೋದಾಗ ಅವರು ಪ್ರಜಾಪ್ರಭುತ್ವದ ತಾಯಿಯಿಂದ (ಭಾರತ) ಬಂದವರು ಎಂದು ಹೇಳುತ್ತಾರೆ. 146 ಸಂಸದರನ್ನು ಅಮಾನತು ಮಾಡಿರುವ ಅವರು ಈಗ ಅದನ್ನು ಹೇಗೆ ಹೇಳುತ್ತಾರೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಸಂಸತ್ತಿಗೆ ಅವಮಾನ ಮಾಡಿದೆ. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಹಿಂದೆ ನಾವು ಮಹಾತ್ಮಾ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು, ಚೌಧರಿ ಚರಣ್ ಸಿಂಗ್ ಇದ್ದರು. ಇಂದು ನಮ್ಮಲ್ಲಿ ಅವರಿಲ್ಲ, ಆದ್ದರಿಂದ ಭಾರತದ ಪ್ರತಿಯೊಬ್ಬ ನಾಗರಿಕರು ಒಗ್ಗೂಡಬೇಕಾಗಿದೆ’ ಎಂದು ಬಿಜೆಪಿ ಹಾಗೂ ಮೋದಿ ವಿರುದ್ಧ ನಾಯಕರು ಭಾರೀ ಆಕ್ರೋಶ ಹೊರಹಾಕಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎನ್‌ಸಿಪಿ ನಾಯಕ ಶರದ್ ಪವಾರ್, ಸಿಪಿಐನ ಸೀತಾರಾಂ ಯೆಚೂರಿ, ಸಿಪಿಐನ ಡಿ ರಾಜಾ, ಜೆಎಂಎಂನ ಮಹುವಾ ಮಾಜಿ, ಡಿಎಂಕೆಯ ತಿರುಚ್ಚಿ ಶಿವ, ಆರ್‌ಜೆಡಿಯ ಮನೋಜ್ ಕುಮಾರ್ ಝಾ, ಟಿಎಂಸಿಯ ಮೌಸಮ್ ನೂರ್, ಎನ್‌ಸಿಯ ಹಸನೈನ್ ಮಸೂದಿ, ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಎನ್‌.ಕೆ. ಪ್ರೇಮಚಂದ್ರನ್ ಮತ್ತು ಎಸ್‌ಪಿ ಮುಖಂಡ ಎಸ್‌.ಟಿ. ಹಸನ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ‘ಸುಸ್ಥಿರ ಡೇಟಾ ಸೆಂಟರ್‌’
ಕಾರಂತ ಬಡಾವಣೆ ರೈತರಿಗೆ ನಿವೇಶನ ನೀಡಲು ಕ್ರಮ: ಡಿ.ಕೆ.ಶಿವಕುಮಾರ್‌ ಭರವಸೆ