ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ದೊಡ್ಡಕೌಲಂದೆ ಗ್ರಾಮದಲ್ಲಿ ವಿವಿಧ ಪೊಲೀಸ್ ಠಾಣೆ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು. ಹಿಜಾಬ್‌ಗೆ ಸಂಬಂಧಿಸಿ ಸಭಿಕರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ನಿರ್ಧಾರ ಹಿಂಪಡೆಯಲಾಗುವುದು ಎಂದರು.
ಇನ್ನು ಮುಂದೆ ರಾಜ್ಯದಲ್ಲಿ ಹಿಜಾಬ್ ಮೇಲೆ ಯಾವುದೇ ನಿರ್ಬಂಧ ಇರಲ್ಲ. ಯಾವ ಬಟ್ಟೆ ಹಾಕಬೇಕು, ಏನನ್ನು ತಿನ್ನಬೇಕು ಎಂಬುದು ವೈಯಕ್ತಿಕ ಆಯ್ಕೆ. ಈ ವಿಚಾರದಲ್ಲಿ ಸರ್ಕಾರ ಯಾಕೆ ಅಡ್ಡಿ ಮಾಡಬೇಕು? ಯಾರು ಯಾವ ಬಟ್ಟೆಯನ್ನಾದರೂ ಧರಿಸಿ ಹೋಗಬಹುದು. ಯಾರು ಯಾವ ಊಟವನ್ನಾದರೂ ಮಾಡಬಹುದು. ನಾನು ಪಂಚೆ ಧರಿಸುತ್ತೇನೆ, ನೀವು ಪ್ಯಾಂಟ್ ಮತ್ತು ಶರ್ಟ್ ಧರಿಸುತ್ತೀರಿ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಧಿರಿಸು ಮತ್ತು ಊಟದಲ್ಲಿ ರಾಜಕಾರಣ ಮಾಡಬಾರದು. ಕಾಂಗ್ರೆಸ್ ಮತ್ತು ನಮ್ಮ ಸರ್ಕಾರ ದಲಿತರು, ಹಿಂದುಳಿದವರು, ಶೋಷಿತರು, ಎಲ್ಲರಿಗೂ ನ್ಯಾಯ ಒದಗಿಸುತ್ತದೆ. ಇದರಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ ಈ ವಿಚಾರವಾಗಿ ಟ್ವೀಟ್ ಕೂಡ ಮಾಡಿರುವ ಸಿದ್ದರಾಮಯ್ಯ, ಹಿಜಾಬ್ ನಿರ್ಬಂಧ ಆದೇಶ ಹಿಂಪಡೆಯುವ ವಿಚಾರವಾಗಿ ಶೀಘ್ರ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದ್ದಾರೆ.
ಹಿಜಾಬ್ ವಿವಾದದ ಹಿನ್ನೆಲೆ:
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಹಲವು ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಲು ಶುರುಮಾಡಿದ್ದು ಸಂಘರ್ಷದ ವಾತಾವರಣ ನಿರ್ಮಿಸಿತ್ತು.