ಹಕ್ಕುಪತ್ರ ವಿತರಣೆ ಮೂಲಕ ಬಡವರಿಗೆ ಆಸ್ತಿ ಹಕ್ಕು ನೀಡುವ ಇಂದಿರಾ ಕನಸು ಕನಸು
ಅರಸು ಕನಸಿನ ಉಳುವವನೇ ಭೂ ಒಡೆಯನ ರೀತಿ ವಾಸಿಸುವವನೇ ಮನೆ ಒಡೆಯ==
ಕೃಷ್ಣ ಲಮಾಣಿಕನ್ನಡಪ್ರಭ ವಾರ್ತೆ ಹೊಸಪೇಟೆ
ಬಡವರಿಗೆ ಆಸ್ತಿ ಹಕ್ಕು ನೀಡಬೇಕು ಎಂಬುದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕನಸಾಗಿತ್ತು. ಅದನ್ನು ಇದೀಗ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಈಡೇರಿಸಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ‘ಉಳುವವನೇ ಭೂ ಒಡೆಯ’ ಎಂದು ಸಾರಿದಂತೆ, ಸಿದ್ದರಾಮಯ್ಯ ಸರ್ಕಾರ ‘ವಾಸಿಸುವನೇ ಮನೆ ಒಡೆಯ’ ಎಂಬ ಯೋಜನೆ ಸಾಕಾರಗೊಳಿಸಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಶ್ಲಾಘಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮಂಗಳವಾರ ಎರಡು ವರ್ಷ ತುಂಬಿತು. ಇದರ ಸವಿನೆನಪಿಗಾಗಿ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಬೃಹತ್ ‘ಸಮರ್ಪಣೆ ಸಂಕಲ್ಪ ಸಮಾವೇಶ’ ಹಮ್ಮಿಕೊಳ್ಳಲಾಗಿತ್ತು. ಸಿರಿಧಾನ್ಯವನ್ನು ಮಡಕೆಯಲ್ಲಿ ಸುರಿಸುವ ಮೂಲಕ ರಾಹುಲ್ ಗಾಂಧಿಯವರು ಸಮಾವೇಶಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ, ‘ಪಂಚ ಗ್ಯಾರಂಟಿಯೊಂದಿಗೆ ಕಾಂಗ್ರೆಸ್ ಸರ್ಕಾರ ಇದೀಗ 6ನೇ ಗ್ಯಾರಂಟಿ ‘ಭೂ ಗ್ಯಾರಂಟಿ’ಯನ್ನೂ ಸಾಕಾರಗೊಳಿಸಿದೆ. ಆ ಮೂಲಕ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ 2,000 ದಾಖಲೆ ರಹಿತ ಹಟ್ಟಿ, ಹಾಡಿ, ತಾಂಡಾ, ಮಜರೆಗಳ 1,11,111 ಫಲಾನುಭವಿಗಳಿಗೆ ಭೂ ದಾಖಲೆ ನೀಡಿದೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ‘ಉಳುವವನೇ ಭೂ ಒಡೆಯ’ ಎಂದು ಸಾರಿದಂತೆ, ಸಿದ್ದರಾಮಯ್ಯ ಸರ್ಕಾರ ‘ವಾಸಿಸುವನೇ ಮನೆ ಒಡೆಯ’ ಎಂಬ ಯೋಜನೆ ಸಾಕಾರಗೊಳಿಸಿದೆ. ಇದಕ್ಕೆ ವಿಜಯನಗರ ನೆಲದ ಹೊಸಪೇಟೆಯ ಕ್ರೀಡಾಂಗಣದಲ್ಲಿ ಸೇರಿರುವ ಲಕ್ಷಾಂತರ ಜನಸ್ತೋಮವೇ ಸಾಕ್ಷಿ ಎಂದು ರಾಜ್ಯ ಸರ್ಕಾರವನ್ನು ಶ್ಲಾಘಿಸಿದರು.ಜನರಿಗೆ ಗ್ಯಾರಂಟಿ ಶಕ್ತಿ:
ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡಿ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಶಕ್ತಿಯ ಬಲ ನೀಡಿದೆ. ಬಡವರು ಆರ್ಥಿಕ ವಹಿವಾಟು ನಡೆಸಲು ಸರ್ಕಾರ ಬೆನ್ನುಲುಬಾಗಿ ನಿಂತಿದೆ. ಗ್ಯಾರಂಟಿಗಳಿಂದ ಕರ್ನಾಟಕದಲ್ಲಿ ಹಣದ ವಹಿವಾಟು ಹೆಚ್ಚಿದೆ. ಇದರಿಂದ ಉತ್ಪಾದನೆಯೂ ಹೆಚ್ಚಿದೆ ಎಂದು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಸರ್ಕಾರವನ್ನು ಬಣ್ಣಿಸಿದರು.ಸರ್ಕಾರಕ್ಕೆ ಹೊಸ ಟಾಸ್ಕ್:
ಬಡವರಿಗೆ ಆಸ್ತಿ ಹಕ್ಕು ನೀಡಬೇಕು ಎಂಬುದು ಇಂದಿರಾ ಗಾಂಧಿ ಅವರ ಕನಸಾಗಿತ್ತು. ಈಗ ಸಿದ್ದರಾಮಯ್ಯ ಸರ್ಕಾರ ಅದನ್ನು ಈಡೇರಿಸಿದೆ. 2,000 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮವನ್ನಾಗಿಸಲಾಗಿದೆ. ಇದೊಂದು ಐತಿಹಾಸಿಕ ತೀರ್ಮಾನ ಆಗಿದೆ. ರಾಜ್ಯದ ಜನತೆಯ ಆಸ್ತಿಗಳು ಡಿಜಿಟಲೀಕರಣ ಆಗಬೇಕಿದೆ. ಬಡವರ ಆಸ್ತಿ ಉಳಿಸುವ ಕಾರ್ಯವನ್ನು ಸರ್ಕಾರ ಮಾಡಲಿ. ಉಳಿದಿರುವ 500 ಜನವಸತಿ ಪ್ರದೇಶಗಳನ್ನೂ ಸರ್ಕಾರ ಆರು ತಿಂಗಳಲ್ಲೇ ಡಿಜಿಟಲೀಕರಣ ಮಾಡಲಿ ಎಂದು ರಾಹುಲ್ ಗಾಂಧಿಯವರು ರಾಜ್ಯ ಸರ್ಕಾರಕ್ಕೆ ಹೊಸ ಟಾಸ್ಕ್ ನೀಡಿದರು.ಭೂ ಗ್ಯಾರಂಟಿಯಿಂದ ಲಂಬಾಣಿ, ಬೋವಿ, ಗೊಲ್ಲ, ನಾಯಕ, ಕಾಡು ಕುರುಬರು ಸೇರಿದಂತೆ ಬುಡಕಟ್ಟು ಜನರಿಗೆ ಅನುಕೂಲ ಆಗಲಿದೆ. ಇನ್ನೂ 50 ಸಾವಿರ ಹಕ್ಕುಪತ್ರಗಳನ್ನು ಆರು ತಿಂಗಳಲ್ಲೇ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಈ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರದ ಬೆನ್ನು ತಟ್ಟಿದರು.