ಬಿಬಿಎಂಪಿಯ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ : ಕನ್ನಡಪರ ಸಂಘಟನೆಗಳಿಂದ ಆರೋಪ

KannadaprabhaNewsNetwork | Updated : Feb 28 2025, 04:04 AM IST

ಸಾರಾಂಶ

ಬಿಬಿಎಂಪಿಯು ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿದೆ ಎಂದು ಕರುನಾಡ ಸೇವಕರು, ಕನ್ನಡ ಮೊದಲ ಬಳಗ, ನಮ್ಮ ಕನ್ನಡಿಗರು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಆರೋಪಿಸಿವೆ.

 ಬೆಂಗಳೂರು : ಬಿಬಿಎಂಪಿಯು ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿದೆ ಎಂದು ಕರುನಾಡ ಸೇವಕರು, ಕನ್ನಡ ಮೊದಲ ಬಳಗ, ನಮ್ಮ ಕನ್ನಡಿಗರು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಆರೋಪಿಸಿವೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ಅಧ್ಯಕ್ಷ ಲೋಕೇಶ್‌ ಗೌಡ, ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಅರ್ಹ ಪೌರಕಾರ್ಮಿಕರು ಕನ್ನಡ ಮಾತನಾಡಲು ತಿಳಿದಿರಬೇಕೆಂಬ ಮಾನದಂಡ ಕೈಬಿಟ್ಟು ನೇಮಕಾತಿ ನಡೆಸಲಾಗಿದೆ.

ನೇಮಕಾತಿಯಲ್ಲಿ ಯಾವುದೇ ವಿದ್ಯಾರ್ಹತೆ ಕೇಳಿಲ್ಲ. ಬದಲಿಗೆ ಅರ್ಹ ಪೌರಕಾರ್ಮಿಕರಿಗೆ ಕನ್ನಡ ಮಾತನಾಡಲು ತಿಳಿದಿರಬೇಕು ಎಂಬುದು ಅರ್ಹತಾ ನಿಯಮವಾಗಿದೆ. ಈ ನಿಯಮವನ್ನೂ ಬಿಬಿಎಂಪಿ ಗಾಳಿಗೆ ತೂರಿ ಕನ್ನಡ ಬಾರದ ಪೌರಕಾರ್ಮಿಕರನ್ನು ನೇಮಕಗೊಳಿಸಿ ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಿದೆ. ಅರ್ಹ ಪೌರಕಾರ್ಮಿಕರಿಗೆ ಕನ್ನಡ ಮಾತನಾಡಲು ತಿಳಿದಿರುವ ಬಗ್ಗೆ ಯಾವುದೆ ಸಂದರ್ಶನ ನಡೆಸಿಲ್ಲ ಎಂದು ದೂರಿದರು.

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯನಡೆದರೆ, ರಾಜಧಾನಿಯಲ್ಲಿ ಕನ್ನಡವನ್ನು ಕಡೆಗಾಣಿಸಿ ಪರಭಾಷಿಕರಿಗೆ ಮಣೆ ಹಾಕಲಾಗಿದೆ. ಇದರಿಂದಾಗಿ ಅರ್ಹ ಕನ್ನಡಿಗರಿಗೆ ಉದ್ಯೋಗವಕಾಶ ಇಲ್ಲದಂತೆ ಮಾಡಲಾಗಿದೆ. ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿಗಳ ಹುದ್ದೆಗೂ ಕನ್ನಡಿಗರು ಅರ್ಜಿ ಸಲ್ಲಿಸದಂತೆ ನಿಯಮ ರೂಪಿಸಲಾಗಿದೆ. ಬಿಬಿಎಂಪಿ ಕನ್ನಡ ತಿಳಿದಿರಬೇಕೆಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಕನ್ನಡ ಮಾಧ್ಯಮ ಹಾಗೂ ಗ್ರಾಮೀಣಾ ಅಭ್ಯರ್ಥಿ ಹುದ್ದೆಗಳಿಗೆ ಕನ್ನಡಿಗರು ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ನೀಡಬೇಕು. ಈ ನಿಯಮಗಳು ಜಾರಿಗೆ ಬರುವವರೆಗೂ ಯಾವುದೇ ನೇಮಕಾತಿ ಆದೇಶ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

ಪರೀಕ್ಷೆ ಮಾಡಬೇಕು:

ನೇಮಕಾತಿ ಮಾಡಿಕೊಂಡ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಮಾತನಾಡಲು ಬರಲಿದೆಯೇ ಎಂಬುರ ಬಗ್ಗೆ ಮೌಖಿಕ ಪರೀಕ್ಷೆ ನಡೆಸಬೇಕು. ಆಗ ಎಷ್ಟು ಜನರಿಗೆ ಕನ್ನಡ ಬರಲಿದೆ ಎಂಬುದು ಬೆಳಕಿಗೆ ಬರಲಿದೆ. ಒಂದು ವೇಳೆ ಪರೀಕ್ಷೆ ನಡೆಸದೇ ನೇಮಕಾತಿ ಪ್ರಮಾಣ ಪತ್ರ ನೀಡಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಲೋಕಾಯುಕ್ತದಲ್ಲಿ ದೂರು:

ಪೌರಕಾರ್ಮಿಕರ ನೇಮಕಾತಿ ಸಂದರ್ಭದಲ್ಲಿ 800 ಮಂದಿ ಮೇಲ್ವಿಚಾರಕರನ್ನು ಪೌರಕಾರ್ಮಿಕರೆಂದು ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಮನಿಸಬೇಕೆಂದು ಆಗ್ರಹಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕನ್ನಡ ಮೊದಲು ಬಳಗದ ಜ್ಞಾನೇಶ್ವರ, ನಮ್ಮ ಕನ್ನಡಿಗರು ಸಂಘಟನೆಯ ಜ್ಯೋತಿ, ಕರುನಾಡು ಸೇವಕರು ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಾರಿಕ, ಪ್ರಧಾನ ಕಾರ್ಯದರ್ಶಿ ಮಾದೇಶಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಚಂದ್ರಣ್ಣ, ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣ ಗೌಡ ಇದ್ದರು.

ವಿಶೇಷ ಆಯುಕ್ತರಿಗೆ ಮನವಿ

ಪೌರಕಾರ್ಮಿಕರ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಬಿಬಿಎಂಪಿಯ ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್‌ ಮೆನನ್‌ ಅವರಿಗೆ ಗುರುವಾರ ಮನವಿ ಸಲ್ಲಿಸಲಾಗಿದ್ದು, ಈ ಕುರಿತು ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.

Share this article