ಬೆಂಗಳೂರನ್ನು ಒಡೆಯುವ ಬದಲು, ಒಟ್ಟಾಗಿ ಕಟ್ಟೋಣ : ಕಾಂಗ್ರೆಸ್‌ ನಾಯಕರು

KannadaprabhaNewsNetwork |  
Published : Oct 15, 2025, 02:07 AM ISTUpdated : Oct 15, 2025, 04:16 AM IST
Greater Bengaluru Authority

ಸಾರಾಂಶ

ಬೆಂಗಳೂರಿನ ಮೂಲಸೌಲಭ್ಯ, ಕಸದ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಉದ್ಯಮಿ ಕಿರಣ್‌ ಮಜುಂದಾರ್‌ ಶಾ ಅವರಿಗೆ ಕಾಂಗ್ರೆಸ್‌ ಸಚಿವರು ಕಿಡಿಕಾರಿದ್ದಾರೆ.  ಬೆಂಗಳೂರನ್ನು ಒಡೆಯುವ ಬದಲು, ಒಟ್ಟಾಗಿ ಕಟ್ಟೋಣ ಎಂದು ತಿರುಗೇಟು ನೀಡಿದ್ದಾರೆ.

  ಬೆಂಗಳೂರು :  ಬೆಂಗಳೂರಿನ ಮೂಲಸೌಲಭ್ಯ, ಕಸದ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಉದ್ಯಮಿ ಕಿರಣ್‌ ಮಜುಂದಾರ್‌ ಶಾ ಅವರಿಗೆ ಕಾಂಗ್ರೆಸ್‌ ಸಚಿವರು ಕಿಡಿಕಾರಿದ್ದಾರೆ. ಬೆಂಗಳೂರನ್ನು ಒಡೆಯುವ ಬದಲು, ಒಟ್ಟಾಗಿ ಕಟ್ಟೋಣ. ನಮ್ಮನ್ನು ಟೀಕಿಸುವವರು ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿನ ಸಮಸ್ಯೆ ಬಗ್ಗೆ ಟೀಕಿಸಿದರೆ ಅವರಿಗೆ ಜೈಲೇ ಗತಿಯಾದೀತು ಎಂದು ತಿರುಗೇಟು ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ ಕಿರಣ್‌ ಮಜುಂದಾರ್‌ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಎಕ್ಸ್‌ ಖಾತೆ ಮೂಲಕ ಕಿರಣ್‌ ಮಜುಂದಾರ್‌ಗೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್‌, ಬೆಂಗಳೂರು ನಗರ ಲಕ್ಷಾಂತರ ಜನರಿಗೆ ಅವಕಾಶ ನೀಡಿ, ಗುರುತು ನೀಡಿ, ಯಶಸ್ವಿಯಾಗುವಂತೆ ಮಾಡಿದೆ. ಅದೆಲ್ಲವೂ ಸಾಮೂಹಿಕ ಪ್ರಯತ್ನದಿಂದ ಸಾಕಾರವಾಗಿದೆಯೇ ಹೊರತು ನಿರಂತರ ಟೀಕೆಯಿಂದ ಅಲ್ಲ. ಬೆಂಗಳೂರಿನಲ್ಲಿ ಸವಾಲುಗಳಿವೆ. ಅದನ್ನು ಎದುರಿಸಿ, ಪರಿಹರಿಸಲು ಎಲ್ಲ ರೀತಿಯ ಕೆಲಸ ಮಾಡಲಾಗುತ್ತಿದೆ. ಬೆಂಗಳೂರನ್ನು ಒಡೆಯುವ ಬದಲು ನಾವೆಲ್ಲ ಒಟ್ಟಾಗಿ ಕಟ್ಟೋಣ ಎಂದಿದ್ದಾರೆ.

ಗುಂಡಿ ಮುಚ್ಚಲು ಹಣ ಮಂಜೂರು:

ಬೆಂಗಳೂರಿನ ರಸ್ತೆ ದುರಸ್ತಿಗಾಗಿ 1,100 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚಿನ ಗುಂಡಿಗಳನ್ನು ಗುರುತಿಸಲಾಗಿದ್ದು, 5 ಸಾವಿರ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಲಾಗಿದೆ. ಬೆಂಗಳೂರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಪ್ರಮುಖ ಮೂಲಸೌಕರ್ಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದರಲ್ಲೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಪೂರ್ವ ನಗರ ಪಾಲಿಕೆಯಲ್ಲಿನ 50 ವಾರ್ಡ್‌ಗಳಲ್ಲಿ ಮೂಲಸೌಕರ್ಯ ಸುಧಾರಿಸಲು 1,673 ಕೋಟಿ ರು. ವ್ಯಯಿಸಲಿದೆ. ಇದು ಐಟಿ ಕಾರಿಡಾರ್‌ಗೆ ನೇರ ಅನುಕೂಲವಾಗಲಿದೆ. ಎಲಿವೇಟೆಡ್‌ ಕಾರಿಡಾರ್‌ಗಳಂತಹ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಒಂದೂವರೆ ತಿಂಗಳಿನಿಂದ ನಿರಂತರವಾಗಿ ಅನಿರೀಕ್ಷಿತ ಮಳೆಯಾಗುತ್ತಿದೆ. ರಸ್ತೆ ಗುಂಡಿ ಮುಚ್ಚಲು ಮುಖ್ಯಮಂತ್ರಿ ಗಡುವು ನೀಡಿದ್ದಾರೆ. ಕಿರಣ್‌ ಮಜುಂದಾರ್‌ ಶಾ, ಮೋಹನ್‌ದಾಸ್‌ ಪೈರಂಥ ಉದ್ಯಮಿಗಳು ಏನೇ ಸಮಸ್ಯೆಯಿದ್ದರೂ ನಮ್ಮ ಬಳಿ ಮಾತನಾಡಬಹುದು. ಎಲ್ಲರೂ ತಮ್ಮ ತಮ್ಮ ಪಾತ್ರ ನಿರ್ವಹಿಸಿದರೆ ರಾಜ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.

ನಮ್ಮಲ್ಲಿ ಏನೇ ಸಮಸ್ಯೆಯಾದರು ಬೇರೆ ರಾಜ್ಯದವರು ನಮ್ಮಲ್ಲಿನ ಉದ್ಯಮಿಗಳಿಗೆ ಆಹ್ವಾನ ಕೊಡುತ್ತಿದ್ದಾರೆ. ಅದರಲ್ಲೂ ಆಂಧ್ರದ ಐಟಿ-ಬಿಟಿ ಸಚಿವರು ರಣಹದ್ದು ರೀತಿ ಕಾಯುತ್ತಾ ಇರುತ್ತಾರೆ. ನಮ್ಮನ್ನು ಟೀಕಿಸುವವರು ಮಹಾರಾಷ್ಟ್ರ, ಉತ್ತರ ಪ್ರದೇಶದ ಸಮಸ್ಯೆ ಬಗ್ಗೆ ಟೀಕಿಸಲಿ ನೋಡೋಣ. ಅಲ್ಲಿ ಟೀಕಿಸಿದರೆ ಜೈಲಲ್ಲಿರಬೇಕಾಗುತ್ತದೆ. ನಾವು ಕೇಳುತ್ತೇವೆಂದು ಹೀಗೆಲ್ಲ ಮಾಡುತ್ತಿದ್ದಾರೆ. ಪ್ರತಿ ಪಟ್ಟಣಕ್ಕೂ ಅದರದ್ದೇ ಸಮಸ್ಯೆ ಇರುತ್ತದೆ. ಅದನ್ನು ಮೀರಿ ನಾವು ಜನರಿಗೆ ಕೆಲಸ ಮಾಡಬೇಕಾಗುತ್ತದೆ. ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಬಿಜೆಪಿ ಬಗ್ಗೆ ಮಾತನಾಡಲ್ಲ: ರೆಡ್ಡಿ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿವೆ. ಅದನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ. ನಗರ ಪಾಲಿಕೆಗಳು ರಸ್ತೆ ಗುಂಡಿ ಬೀಳದಂತೆ ನೋಡಿಕೊಳ್ಳಬೇಕಿತ್ತು. ಇನ್ನು, ಮೋಹನ್‌ದಾಸ್‌ ಪೈ ಬಿಜೆಪಿ ಬಗ್ಗೆ ಮಾತನಾಡುವುದಿಲ್ಲ. ಕಾಂಗ್ರೆಸ್‌ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಹೇಳಿದರು.

PREV
Read more Articles on

Recommended Stories

ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟು ಬಳಿಕ ಹಿಂಪಡೆದ ಆರ್‌ಜೆಡಿ! ಹೈ ಡ್ರಾಮಾ
ಮಾಲೂರು ನಂಜೇಗೌಡ ಶಾಸಕತ್ವ ರದ್ದು : ಹೈ ಆದೇಶಕ್ಕೆ ಸುಪ್ರೀಂ ತಡೆ