ಹೋರ್ಮುಜ್‌ನಲ್ಲಿ ಭಾರತದ ತೈಲ ಹಡಗಿಗೆ ಇರಾನ್‌ ಗುಂಡು!

Published : Apr 19, 2026, 12:32 PM IST
iran hormuz

ಸಾರಾಂಶ

ಶುಕ್ರವಾರವಷ್ಟೇ ಹೋರ್ಮುಜ್‌ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ತೆರವು ಮಾಡಿದ್ದ ಇರಾನ್‌, ಶನಿವಾರ ಪುನಃ ಅದನ್ನು ಬಂದ್‌ ಮಾಡಿದೆ. ಅದರ ಬೆನ್ನಲ್ಲೇ, ’ಭಾರತ ನಮ್ಮ ಮಿತ್ರ. ಅದರ ಹಡಗುಗಳ ಮೇಲೆ ನಾವು ಕ್ರಮ ಜರುಗಿಸಲ್ಲ’ ಎನ್ನುತ್ತಿದ್ದ ಇರಾನ್‌ ರಾಗ ಬದಲಿಸಿದೆ ಹಾಗೂ ಜಲಸಂಧಿ ದಾಟಿ ಭಾರತದತ್ತ ಹೊರಟಿದ್ದ 14 ಹಡಗುಗಳನ್ನು ತಡೆದಿದೆ

 ಟೆಹ್ರಾನ್‌ :  ಶುಕ್ರವಾರವಷ್ಟೇ ಹೋರ್ಮುಜ್‌ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ತೆರವು ಮಾಡಿದ್ದ ಇರಾನ್‌, ಶನಿವಾರ ಪುನಃ ಅದನ್ನು ಬಂದ್‌ ಮಾಡಿದೆ. ಅದರ ಬೆನ್ನಲ್ಲೇ, ’ಭಾರತ ನಮ್ಮ ಮಿತ್ರ. ಅದರ ಹಡಗುಗಳ ಮೇಲೆ ನಾವು ಕ್ರಮ ಜರುಗಿಸಲ್ಲ’ ಎನ್ನುತ್ತಿದ್ದ ಇರಾನ್‌ ರಾಗ ಬದಲಿಸಿದೆ ಹಾಗೂ ಜಲಸಂಧಿ ದಾಟಿ ಭಾರತದತ್ತ ಹೊರಟಿದ್ದ 14 ಹಡಗುಗಳನ್ನು ತಡೆದಿದೆ. ಈ ಪೈಕಿ ಒಂದು ಹಡಗಿನ ಮೇಲೆ ಗುಂಡಿನ ದಾಳಿ ಕೂಡಾ ನಡೆದಿದೆ. ಇದರ ನಡುವೆ ಭಾರತದ ಒಂದು ಹಡಗು ಮಾತ್ರ ಜಲಸಂಧಿ ದಾಟುವಲ್ಲಿ ಯಶಸ್ವಿಯಾಗಿದೆ.

ಮತ್ತೊಂದೆಡೆ ಬ್ರಿಟನ್‌ ಕೂಡಾ ತನ್ನ 2 ವಾಣಿಜ್ಯ ಹಡಗಿನ ಮೇಲೆ ಹೋರ್ಮುಜ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳಿಕೊಂಡಿದೆ.

ಹಡಗಿನ ಮೇಲೆ ದಾಳಿ:

ವಿವಿಧ ದೇಶಗಳಿಂದ ಕಚ್ಚಾತೈಲ, ಎಲ್‌ಪಿಜಿ, ರಸಗೊಬ್ಬರ ಹೊತ್ತು ಭಾರತದತ್ತ ಹೊರಟಿದ್ದ 14 ಹಡಗುಗಳನ್ನು ಹೋರ್ಮುಜ್‌ ಜಲಸಂಧಿ ಬಳಿ ಇರಾನ್‌ ಶನಿವಾರ ತಡೆದಿದೆ. ಬೋಟ್‌ನಲ್ಲಿ ಬಂದಿದ್ದ ಇರಾನ್‌ನ ಅರೆಸೇನಾಪಡೆಯ ಯೋಧರು ಯಾವುದೇ ಮುನ್ಸೂಚನೆ ನೀಡದೇ ಹಡಗುಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಈ ಪೈಕಿ ಒಂದು ಹಡಗಿನ ಮೇಲೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಯೋಧರು ಹಾರಿಸಿದ ಗುಂಡು ತಗುಲಿದೆ. ಈ ವೇಳೆ ಹಡಗಿಗೆ ಹಾನಿಯಾಗಿದೆಯಾದರೂ ದೊಡ್ಡ ಅಪಾಯ ಸಂಭವಿಸಿಲ್ಲ. ಜೊತೆಗೆ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ 13 ಹಡಗುಗಳು ಪರ್ಷಿಯನ್‌ ಕೊಲ್ಲಿಯಲ್ಲಿನ ವಿವಿಧ ಸ್ಥಾನಗಳಿಗೆ ಮರಳಿವೆ. ಆದರೆ ಈ ದಾಳಿಯ ನಡುವೆಯೇ ಕಚ್ಚಾತೈಲ ಹೊತ್ತ ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೆಷನ್‌ನ ಒಂದು ಹಡಗು ಮಾತ್ರ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತದತ್ತ ಹೊರಟಿದೆ ಎಂದು ಮೂಲಗಳು ತಿಳಿಸಿವೆ.

ಹಡಗಿನಲ್ಲಿ ಏನಿತ್ತು?

ಭಾರತದತ್ತ ಹೊರಟಿದ್ದ 14 ಹಡಗುಗಳ ಪೈಕಿ 7 ಭಾರತದ ಧ್ವಜ ಹೊತ್ತಿದ್ದವು, 4 ಲೈಬೀರಿಯಾ ಧ್ವಜ, 2 ಮಾರ್ಷಲ್‌ ದ್ವೀಪ ಮತ್ತು 1 ವಿಯೆಟ್ನಾಂ ಧ್ವಜ ಹೊತ್ತಿದ್ದವು. ಈ ಪೈಕಿ 6 ಕಚ್ಚಾತೈಲ, 3 ಎಲ್‌ಪಿಜಿ, 4 ರಸಗೊಬ್ಬರ ಹೊತ್ತಿದ್ದವು ಎಂದು ಮೂಲಗಳು ಖಚಿತಪಡಿಸಿವೆ.

ಟ್ರಂಪ್‌ ಕಿರಿಕ್‌:

ಇಸ್ರೇಲ್‌ ಮತ್ತು ಲೆಬನಾನ್‌ ನಡುವೆ 10 ದಿನಗಳ ಕದನವಿರಾಮ ಘೋಷಣೆ ಹಿನ್ನೆಲೆಯಲ್ಲಿ ಯುದ್ಧ ಆರಂಭವಾದಾಗಿನಿಂದಲೂ ನಿರ್ಬಂಧ ಹೇರಲಾಗಿದ್ದ ಜಲಸಂಧಿಯನ್ನು 10 ದಿನಗಳ ಅವಧಿಗೆ ಮುಕ್ತ ಮಾಡುವುದಾಗಿ ಶುಕ್ರವಾರ ಇರಾನ್‌ ಘೋಷಿಸಿತ್ತು. ಇರಾನ್‌ನ ನಿರ್ಣಯವನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ ‘ಥ್ಯಾಂಕ್‌ ಯೂ’ ಎನ್ನುವ ಮೂಲಕ ಸ್ವಾಗತಿಸಿದ್ದರು.

ಆದರೆ ಏ.21ರವರೆಗೆ ಇರುವ ಕದನವಿರಾಮ ವಿಸ್ತರಣೆ ಉದ್ದೇಶ ಇಲ್ಲ. ಅಷ್ಟರೊಳಗೆ ಯುರೇನಿಯಂ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಇರಾನ್‌ ನಮ್ಮ ಜೊತೆಗೆ ಒಪ್ಪಂದಕ್ಕೆ ಬರಬೇಕು. ಇಲ್ಲದೇ ಹೋದಲ್ಲಿ ನಾವು ಮತ್ತೆ ಬಾಂಬ್‌ ದಾಳಿ ನಡೆಸಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಸಿದ್ದರು. ಅಲ್ಲದೆ ಒಪ್ಪಂದ ಆಗುವವರೆಗೂ ಹೋರ್ಮುಜ್‌ ಜಲಸಂಧಿಯಲ್ಲಿ ನಾವು ಹಾಕಿರುವ ನಿರ್ಬಂಧಗಳು ಮುಂದುವರೆಯಲಿವೆ ಎಂದು ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಇರಾನ್‌ ಹೋರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚುವ ನಿರ್ಧಾರ ಕೈಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಅದು, ‘ಹೋರ್ಮುಜ್‌ ಜಲಸಂಧಿಯ ಮೇಲೆ ನಾವು ಮತ್ತೆ ನಿಯಂತ್ರಣ ಸಾಧಿಸಿದ್ದೇವೆ. ಮಾರ್ಗವನ್ನು ಮುಕ್ತಗೊಳಿಸುವ ಮುನ್ನ ಇದ್ದ ಸ್ಥಿತಿಯಲ್ಲಿ ಮತ್ತೆ ನಾವು ಇದೀಗ ಇದ್ದೇವೆ. ಇಡೀ ಪ್ರದೇಶದ ಮೇಲೆ ನಮ್ಮ ನಿಯಂತ್ರಣ ಇದೆ. ನಾವು ಇಡೀ ಪ್ರದೇಶವನ್ನು ನಿರ್ವಹಿಸುತ್ತಿದ್ದೇವೆ ಎಂದು ಎಂದು ಇರಾನ್‌ನ ಜಂಟಿ ಸೇನಾ ಕಮಾಂಡ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದಾಳಿಗೆ ಭಾರತ ಕಿಡಿ : ಇರಾನ್‌ ದೂತನ ಕರೆಸಿ ಆಕ್ಷೇಪ ಸಲ್ಲಿಕೆ

ಈ ಗುಂಡಿನ ದಾಳಿಯ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ನವದೆಹಲಿಯಲ್ಲಿನ ಇರಾನ್‌ ರಾಯಭಾರಿ ಮೊಹಮ್ಮದ್‌ ಫಥಾಲಿ ಅವರನ್ನು ಕರೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಬ್ಲ್ಯಾಕ್‌ಮೇಲ್‌ ನಡೆಯಲ್ಲ

ನಾವು ಇರಾನ್‌ ಜತೆ ಮಾತನಾಡುತ್ತಿದ್ದೇವೆ. ತೆರೆದಿದ್ದ ಜಲಸಂಧಿಯನ್ನು ಮತ್ತೆ ಅವರು ಮುಚ್ಚಿದ್ದಾರೆ. ನಿಮಗೆ ತಿಳಿದಿದೆ, ಅವರು ವರ್ಷಗಳಿಂದ ಇದನ್ನೇ ಮಾಡುತ್ತಾ ಬಂದಿದ್ದಾರೆ. ಅವರು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ.

- ಡೊನಾಲ್ಡ್ ಟ್ರಂಪ್‌, ಅಮೆರಿಕ ಅಧ್ಯಕ್ಷ

ಆಗಿದ್ದೇನು?

- ಲೆಬನಾನ್‌-ಇಸ್ರೇಲ್‌ ಕದನವಿರಾಮ ನಂತರ ಶುಕ್ರವಾರ ಹೋರ್ಮುಜ್‌ ತೆರೆದಿದ್ದ ಇರಾನ್‌

- ಆದರೆ ಹೋರ್ಮುಜ್‌ ಮೇಲಿನ ದಿಗ್ಬಂಧನ ಮುಂದುವರಿಸುವೆ ಎಂದು ಹೇಳಿದ್ದ ಟ್ರಂಪ್‌

- ಇದಕ್ಕೆ ಇರಾನ್‌ ಆಕ್ರೋಶ. ಪುನಃ ಜಲಸಂಧಿ ಮುಚ್ಚಿ ತೈಲ ಹಡಗುಗಳಿಗೆ ಇರಾನ್‌ ತಡೆ

- ಆದಾಗ್ಯೂ ಅದನ್ನು ದಾಟುತ್ತಿದ್ದ 1 ಭಾರತ, 2 ಬ್ರಿಟನ್‌ ಹಡಗುಗಳಿಗೆ ಇರಾನ್‌ ಗುಂಡೇಟು

- ಸುದೈವವಶಾತ್‌ ಯಾರಿಗೂ ಗಾಯವಿಲ್ಲ. ಈ ಮಧ್ಯೆ ಜಲಸಂಧಿ ದಾಟಿದ 1 ಭಾರತ ಹಡಗು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೀದಿ ಬದಿ ಅಂಗಡಿಯಲ್ಲಿ ಮೋದಿ ಚುರುಮುರಿ ಖರೀದಿ ಭರಾಟೆ!
ದೇವರು ನಮ್ಮ ಪ್ರತಿ ನಡವಳಿಕೆ ಗಮನಿಸುತ್ತಿರುತ್ತಾನೆ : ಮುಖ್ಯಮಂತ್ರಿ ಸಿದ್ದರಾಮಯ್ಯ