ಕೇಂದ್ರದಲ್ಲಿ ಕಬ್ಬಿಣದ ಮಂತ್ರಿ ಕುಮಾರ ಸ್ವಾಮಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

KannadaprabhaNewsNetwork | Updated : Aug 06 2024, 05:39 AM IST

ಸಾರಾಂಶ

 ಮತ ನೀಡದ ಮುಸ್ಲಿಮರ ಗತಿ ಏನಾಗುತ್ತದೆ ನೋಡಿ ಎಂದು ಕುಮಾರಸ್ವಾಮಿ ಅವರು ಧಮಕಿ ಹಾಕಿದ್ದಾರೆ. ಮುಸ್ಲಿಂ ಮತದಾರರು ಇಲ್ಲದಿದ್ದರೆ ನೀವು, ನಿಮ್ಮ ತಂದೆ ವಿಧಾನಸಭೆಗೆ ಹೋಗುತ್ತಲೇ ಇರಲಿಲ್ಲ. ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಹುಟ್ಟಿದರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದರು. ಈ ಮಾತು ಮರೆಯಬೇಡಿ 

 ಮದ್ದೂರು :  ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಕುಮಾರಸ್ವಾಮಿ ಕಬ್ಬಿಣದ ಮಂತ್ರಿ. ಈ ಕಬ್ಬಿಣದಿಂದ ಕತ್ತರಿಯನ್ನೂ ತಯಾರಿಸಬಹುದು, ಸೂಜಿಯನ್ನು ಉತ್ಪಾದಿಸಬಹುದು. ನೀವು ಮತ್ತು ಬಿಜೆಪಿಯವರು ಕತ್ತರಿ ತಯಾರು ಮಾಡುವವರು. ನಾವು ಸೂಜಿ ತಯಾರು ಮಾಡುವವರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ಲೇಷಿಸಿದರು.

ಸೋಮವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕೇಂದ್ರ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ಬಿಜೆಪಿ ಸರ್ಕಾರ ಹಿಂದಿನ ಭ್ರಷ್ಟಾಚಾರದ ವಿರುದ್ಧ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನೀವು ಸಮಾಜವನ್ನು ಕತ್ತರಿಯಿಂದ ಕತ್ತರಿಸುವವರು, ನಾವು ಸಮಾಜವನ್ನು ಸೂಜಿಯಿಂದ ಹೊಲಿಯುವವರು. ಜಾತಿ, ಧರ್ಮ, ಕುಟುಂಬ ಎಂದು ಎಲ್ಲವನ್ನೂ ಕತ್ತರಿಸುತ್ತೀರಿ. ಆದರೆ, ನಾವು ಎಲ್ಲರನ್ನು ಒಂದುಗೂಡಿಸುತ್ತೇವೆ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ ಎಂದು ಸೂಚ್ಯವಾಗಿ ನುಡಿದರು.

ಯಾವ ಮುಸಲ್ಮಾನ ಬಂಧುಗಳು ಹೆದರುವುದಿಲ್ಲ:

ನಮಗೆ ಮತ ನೀಡದ ಮುಸ್ಲಿಮರ ಗತಿ ಏನಾಗುತ್ತದೆ ನೋಡಿ ಎಂದು ಕುಮಾರಸ್ವಾಮಿ ಅವರು ಧಮಕಿ ಹಾಕಿದ್ದಾರೆ. ಮುಸ್ಲಿಂ ಮತದಾರರು ಇಲ್ಲದಿದ್ದರೆ ನೀವು, ನಿಮ್ಮ ತಂದೆ ವಿಧಾನಸಭೆಗೆ ಹೋಗುತ್ತಲೇ ಇರಲಿಲ್ಲ. ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಹುಟ್ಟಿದರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದರು. ಈ ಮಾತು ಮರೆಯಬೇಡಿ ನೆನಪಿನಲ್ಲಿಟ್ಟುಕೊಳ್ಳಿ ಎಂದರು.

ನಿಮ್ಮ ಗೊಡ್ಡು ಬೆದರಿಕೆಗಳಿಗೆ ಯಾರೂ ಬಗ್ಗುವುದಿಲ್ಲ. ಎಲ್ಲಾ ಧರ್ಮದವರು ಸಹೋದರರಂತೆ ಬಾಳಬೇಕು. ನಿಮ್ಮ ಧಮಕಿಗೆ ಯಾವ ಮುಸಲ್ಮಾನ ಬಂಧುಗಳು ಹೆದರುವುದಿಲ್ಲ. ಈ ವಿಚಾರದಲ್ಲಿ ಅವರಿಗೆ ಜ್ಞಾನ, ಪರಿಜ್ಞಾನ ಬರಲಿ ಎಂದರು.

ನನ್ನ ಅಧ್ಯಕ್ಷತೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 136  ಸ್ಥಾನಗಳನ್ನು ಗೆದ್ದಿದೆ. ನಿನ್ನ ಅಧ್ಯಕ್ಷತೆಯಲ್ಲಿ ಗೆದಿದ್ದು ಕೇವಲ ೧೯ ಸ್ಥಾನಗಳು ಮಾತ್ರ. ಈಗ ಎರಡು ಸೀಟು ಗೆದ್ದು, ಬಿಜೆಪಿಯವರನ್ನು ಬ್ಲಾಕ್‌ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದೀಯಾ. ನಿನ್ನ ಮಗ ಹಾಗೂ ಜಿ.ಟಿ.ದೇವೇಗೌಡರು ಪಾದಯಾತ್ರೆಗೆ ಹೋಗುವುದಿಲ್ಲ ಎಂದು ಏಕೆ ಹೇಳಿದರು ಎಂದು ವ್ಯಂಗ್ಯವಾಡಿದರು.

ವಿಲೀನ ಮಾಡಿದರೆ ಒಳ್ಳೆಯದು:

ಚನ್ನಪಟ್ಟಣದಲ್ಲಿ ಒಬ್ಬರಿಗೆ ಒಂದೇ ಒಂದು ಸೈಟು, ಮನೆ, ರೈತರಿಗೆ ಭೂಮಿ ಕೊಟ್ಟಿಲ್ಲ. ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಒಂದೇ ಒಂದು ಸಹಾಯ ಮಾಡಿಲ್ಲ. ಅಂದ ಮೇಲೆ ಜೆಡಿಎಸ್‌ನ್ನು ಬಿಜೆಪಿ ಜೊತೆ ವಿಲೀನ ಮಾಡಿದರೆ ಈ ದೇಶ ಹಾಗೂ ರಾಜ್ಯಕ್ಕೆ ಒಳ್ಳೆಯದು ಎಂದರಲ್ಲದೇ, ಎಸ್.ಎಂ.ಕೃಷ್ಣ ಅವರ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇದೆಯೇ?, ನೀನು ಪಾದಯಾತ್ರೆ ಮಾಡುತ್ತಿರುವ ರಸ್ತೆ ಕೃಷ್ಣ ಅವರು ಮಾಡಿಸಿದ್ದು. ಈ ರೀತಿಯ ಒಂದೇ ಒಂದು ಕೆಲಸ ಮಾಡಿದ್ದೀಯಾ. ಸೋಮನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಮಾಡಿಸಿದ್ದಾರೆ. ಅವರಂತೆ ನಿನಗೆ ಮಾಡಲು ಆಗುತ್ತದೆಯೇ? ಕೇವಲ ಖಾಲಿ, ಬುಡಬುಡಕೆ ಮಾತುಗಳು ಬೇಡ ಎಂದು ಚುಚ್ಚಿದರು.

Share this article