ಬೆಂಗಳೂರಿನ ಬೀದಿ ನಾಯಿಗೆ ಚಿಕನ್‌ ರೈಸ್‌ ಯೋಜನೆ ಬಹುತೇಕ ಸ್ಥಗಿತ?

KannadaprabhaNewsNetwork |  
Published : Sep 24, 2025, 02:10 AM IST

ಸಾರಾಂಶ

ರಾಜಧಾನಿ ಬೆಂಗಳೂರಿನ ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ನೀಡುವ ಯೋಜನೆಗೆ ದೇಶವ್ಯಾಪಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಮೂಲೆ ಸೇರುವಂತಾಗಿದ್ದು, ಬಹುತೇಕ ಸ್ಥಗಿತ ಎನ್ನಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ನೀಡುವ ಯೋಜನೆಗೆ ದೇಶವ್ಯಾಪಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಮೂಲೆ ಸೇರುವಂತಾಗಿದ್ದು, ಬಹುತೇಕ ಸ್ಥಗಿತ ಎನ್ನಲಾಗುತ್ತಿದೆ.

ನಗರದ 2.79 ಲಕ್ಷ ಬೀದಿ ನಾಯಿಗಳ ಪೈಕಿ 1 ನಾಯಿಗೆ ದಿನಕ್ಕೆ ₹22.42 ವೆಚ್ಚ ಮಾಡಿ 750 ಕ್ಯಾಲೋರಿ ಮೆನು ಸಿದ್ಧಪಡಿಸಿ, ಶೇ.50 ರಿಂದ 60 ರಷ್ಟು ಕಾರ್ಬೋಹೈಡ್ರೇಟ್‌ಗೆ 100 ಗ್ರಾಂ. ರೈಸ್‌, ಶೇ.15 ರಿಂದ 20 ರಷ್ಟು ಪ್ರೊಟೀನ್‌ಗೆ 150 ಗ್ರಾಂ. ಚಿಕನ್‌, ಶೇ.10 ರಿಂದ 15 ರಷ್ಟು ಕೊಬ್ಬಿಗೆ 10 ಗ್ರಾಂ. ಎಣ್ಣೆ, ವಿಟಮಿನ್‌ ಮತ್ತು ಮಿನರಲ್ಸ್‌ಗೆ 100 ಗ್ರಾಂ. ತರಕಾರಿ, 5 ಗ್ರಾಂ. ಉಪ್ಪು ಹಾಗೂ 2.5 ಗ್ರಾಂ. ಅರಿಶಿಣ ಬಳಕೆಯ 367 ಗ್ರಾಂ. ತೂಕದ ಚಿಕನ್‌ ರೈಸ್‌ ನೀಡಲು ಯೋಜನೆ ರೂಪಿಸಿತ್ತು. ಟೆಂಡರ್‌ ಸಹ ಆಹ್ವಾನಿಸಲಾಗಿತ್ತು. ಭಾರೀ ವಿರೋಧದ ನಡುವೆಯೂ ಅಧಿಕಾರಿಗಳು ಟೆಂಡರ್‌ ಪ್ರಕ್ರಿಯೆ ಮುಂದುವರಿಸಿ, ಈ ಹಿಂದೆ ಬಿಬಿಎಂಪಿಯಲ್ಲಿ ಅಸ್ತಿತ್ವದಲ್ಲಿದ್ದ 8 ವಲಯದ ಪೈಕಿ 3 ವಲಯಗಳನ್ನು ಒಬ್ಬ ಗುತ್ತಿಗೆದಾರರಿಗೆ, ಉಳಿದ 5 ವಲಯಗಳನ್ನು ಮತ್ತೊಬ್ಬ ಗುತ್ತಿಗೆದಾರರಿಗೆ ನೀಡಲು ಮುಂದಾಗಿತ್ತು.

ಈ ಕುರಿತು ಪಾಲಿಕೆ ಪಶುಪಾಲನೆ ವಿಭಾಗದಿಂದ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಹ ಸಲ್ಲಿಕೆಯಾಗಿತ್ತು. ಈ ನಡುವೆ ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು ಜಿಬಿಎ ಜಾರಿಗೆ ಬಂದಿದ್ದು, ಈ ಕಾರಣ ನೀಡಿ ಇದೀಗ ಯೋಜನೆಯನ್ನು ಮೂಲೆಗೆ ಸರಿಸಲಾಗಿದೆ.

ಜತೆಗೆ, ಟೆಂಡರ್‌ಗೆ ಸಂಬಂಧಪಟ್ಟ ಕಡತಗಳನ್ನು ಹೊಸದಾಗಿ ರಚನೆಯಾದ ಐದು ಪಾಲಿಕೆಗಳಿಗೆ ಕಳುಹಿಸಲಾಗುವುದು. ಯೋಜನೆ ಮುಂದುವರಿಸ ಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಆಯಾ ನಗರ ಪಾಲಿಕೆ ಆಯುಕ್ತರಿಗೆ ಇರಲಿದೆ. ಅವರು ಮುಂದಿನ ನಿರ್ಧಾರ ಮಾಡಲಿದ್ದಾರೆ ಎನ್ನುವ ಮೂಲಕ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭಕ್ಕೆ ಹೇಳಿದ್ದಾರೆ.

ಜಿಬಿಎ ರಚನೆ ಮುನ್ನವೇ ಕಡತ ಮೂಲೆಗೆ:

ಜುಲೈ ತಿಂಗಳಿನಲ್ಲಿ ಟೆಂಡರ್‌ ಆಹ್ವಾನಿಸಲಾಗಿತ್ತು. ಆಗಸ್ಟ್‌ನಲ್ಲಿ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಅಂದಿನ ಬಿಬಿಎಂಪಿ ಮುಖ್ಯ ಆಯುಕ್ತರ ಅನುಮೋದನೆಗೆ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಮುಖ್ಯ ಆಯುಕ್ತರು ಅನುಮೋದನೆ ನೀಡಿಲ್ಲ. ಇದೀಗ ನಗರ ಪಾಲಿಕೆಯ ಆಯುಕ್ತರಿಗೆ ಕಡತ ವಿಲೇವಾರಿ ಮಾಡುವುದಾಗಿ ಹೇಳಲಾಗುತ್ತಿದೆ. ಈ ಮೂಲಕ ಯೋಜನೆ ಕೈಬಿಡುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೇಶವ್ಯಾಪಿ ಸಂಚಲನ ಸೃಷ್ಟಿಸಿದ್ದ ವರದಿ:

ಬೀದಿ ನಾಯಿಗಳಿಗೆ ಚಿಕನ್‌ ರೈಸ್‌ ನೀಡುವ ಯೋಜನೆ ಕುರಿತು ಕನ್ನಡಪ್ರಭ ಜು.10 ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿ ದೇಶವ್ಯಾಪಿ ಸಂಚಲ ಸೃಷ್ಟಿಸಿ ಬೀದಿ ನಾಯಿಗಳಿಗೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಚಿಕನ್‌ ರೈಸ್‌ ನೀಡುವ ಬಗ್ಗೆ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜಿ ರಾಮ್‌ ಜಿ: ಈಗ ಎಚ್ಡಿಕೆಗೆ ಡಿಕೆಶಿ ಸವಾಲ್‌
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು