ನಮ್ಮ ಸ್ಥಾನ ಉಳಿಸಿಕೊಂಡರೆ
ರಾಯಚೂರು : ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಿಸಬೇಕೋ ಇಲ್ಲವೇ ಪುನರ್ ರಚನೆ ಮಾಡಬೇಕೋ ಎನ್ನುವ ಸಂಗತಿಗಳು ವರಿಷ್ಠರಿಗೆ ಬಿಟ್ಟಿದ್ದು, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಸೋಮವಾರ ಮಾತನಾಡಿದ ಅವರು, ನಾವು ನಮ್ಮ ಸ್ಥಾನ ಉಳಿಸಿಕೊಂಡರೆ ಸಾಕಾಗಿದೆ. ಬೇರೆಯವರನ್ನು ತೆಗೆಯುವುದು, ಕೊಡಿಸುವುದು ದೂರದ ಮಾತಾಗಿದೆ ಎಂದರು.
ರಾಜಕೀಯ ನಿಂತ ನೀರಲ್ಲ. ಹರಿಯುತ್ತಲೇ ಇರುತ್ತದೆ. ಸರ್ಕಾರದಲ್ಲಿ ಏರಿಳಿತಗಳು ಸಹಜ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂವರು ಸಿಎಂಗಳಾಗಿದ್ದರು. ಅನೇಕ ಬಾರಿ ಸಚಿವ ಸಂಪುಟವನ್ನು ಬದಲಿಸಲಾಯಿತು. ನಮ್ಮ ಸರ್ಕಾರದಲ್ಲಿ ಇಲ್ಲಿನ ತನಕ ಅದು ನಡೆದಿಲ್ಲ. ಯಾವುದೂ ಶಾಶ್ವತವಲ್ಲ. ಸಚಿವ ಸಂಪುಟ ಬದಲಾವಣೆ ಆಗಬಹುದು, ಐದು ಬಾರಿ ಗೆದ್ದವರು ಸಚಿವರಾಗಬೇಕು ಎಂಬ ಬೇಡಿಕೆಯಿದೆ. ಐದು ವರ್ಷ ಸಿದ್ಧರಾಮಯ್ಯನವರು ಸಿಎಂ ಆಗಿ ಇರುತ್ತಾರೆ ಎಂದು ಹೇಳಿದರು.
ರಾಜಕೀಯದಲ್ಲಿ ಏನು ಹೇಳಲು ಆಗುವುದಿಲ್ಲ, ಸಚಿವ ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ವಿಚಾರಗಳ ಬಗ್ಗೆ ಹೇಳಿಕೆ ನೀಡುವ ಅಧಿಕಾರ ನಮಗಿಲ್ಲ ಎಂದರು.ಸಿಎಂ ಬದಲಾವಣೆಯಾಗುತ್ತಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ ನಮ್ಮ ಪಕ್ಷದವರಲ್ಲ. ಅದನ್ನು ಹೇಳಲು ಅವರು ಯಾರು ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದಿಂದ ಮರು ಜಾತಿ ಸಮೀಕ್ಷೆ ತೀರ್ಮಾನದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮರು ಸಮೀಕ್ಷೆ ಮಾಡಿದರೆ ತಪ್ಪೇನು? ವಿವಿಧ ಸಮುದಾಯಗಳು ಜಾತಿ ಸಮೀಕ್ಷೆ ಕುರಿತು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸುವಂತೆ ವರಿಷ್ಠರು ಸೂಚಿಸಿದ್ದಾರೆ ಎಂದು ಹೇಳಿದರು.