ಜನಾರ್ದನರೆಡ್ಡಿ ಮತ್ತು ಮುರುಗೇಶ್‌ ನಿರಾಣಿ ಕೇಸು : ರಾಜ್ಯಪಾಲಗೆ ಸ್ಪಷ್ಟನೆ ಸಲ್ಲಿಕೆ

Published : Aug 24, 2024, 06:54 AM IST
Janardhan Reddy

ಸಾರಾಂಶ

ಮಾಜಿ ಸಚಿವರಾದ ಜನಾರ್ದನರೆಡ್ಡಿ ಮತ್ತು ಮುರುಗೇಶ್‌ ನಿರಾಣಿ ವಿರುದ್ಧ ಪ್ರತ್ಯೇಕ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡುವ ಸಂಬಂಧ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು :  ಮಾಜಿ ಸಚಿವರಾದ ಜನಾರ್ದನರೆಡ್ಡಿ ಮತ್ತು ಮುರುಗೇಶ್‌ ನಿರಾಣಿ ವಿರುದ್ಧ ಪ್ರತ್ಯೇಕ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡುವ ಸಂಬಂಧ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮತ್ತು ಮುರುಗೇಶ್‌ ನಿರಾಣಿ ವಿರುದ್ಧ ಇನ್ವೆಸ್ಟ್ ಕರ್ನಾಟಕ ವಿಡಿಯೋ ಚಿತ್ರೀಕರಣ ಅಕ್ರಮ ಸಂಬಂಧ ಲೋಕಾಯುಕ್ತ ಪೊಲೀಸರು ಅಭಿಯೋಜನೆಗೆ ಅನುಮತಿ ಕೋರಿದ್ದರು. ಈ ಸಂಬಂಧ ರಾಜ್ಯಪಾಲರು ಕೆಲವು ಸ್ಪಷ್ಟೀಕರಣ ಕೇಳಿದ್ದರು. ಇದೀಗ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ, ಶೀಘ್ರದಲ್ಲಿಯೇ ಕಾನೂನು ಕ್ರಮ ಕೈಗೊಳ್ಳಲು ಅಭಿಯೋಜನೆಗೆ ಅನುಮತಿ ನೀಡುವಂತೆ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.

ರೆಡ್ಡಿ ಅಕ್ರಮ ಆಸ್ತಿ:  ಜನಾರ್ದನ ರೆಡ್ಡಿ ಕುಟುಂಬ ವಿರುದ್ದ 2006ರಿಂದ 2011ರ ಅವಧಿಯಲ್ಲಿ ಆದಾಯಕ್ಕಿಂತ ಶೇ.25.27ರಷ್ಟು ಹೆಚ್ಚಿನ ಅಕ್ರಮ ಆಸ್ತಿಯನ್ನು ಹೊಂದಿರುವುದು ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ. ಈ ವೇಳೆ ಅವರು ಸಚಿವರಾಗಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ವಿಚಾರಣೆಗೆ ಅನುಮತಿ ನೀಡುವಂತೆ ಕೋರಲಾಗಿದೆ. 2024ರ ಮಾ.27ರಂದು ಅಂತಿಮ ವರದಿ ಸಲ್ಲಿಕೆಯಾಗಿದ್ದು, 2024 ಮೇ13ರಂದು ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಅಭಿಯೋಜನೆಗೆ ಅನುಮತಿಗಾಗಿ ಮನವಿ ಮಾಡಲಾಗಿತ್ತು. ಬಳಿಕ ರಾಜ್ಯಪಾಲರು ಕೆಲವೊಂದು ಸ್ಪಷ್ಟೀಕರಣ ಕೇಳಿದ್ದು, ಲೋಕಾಯುಕ್ತ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಿರಾಣಿ ವಿರುದ್ಧ ಇನ್ವೆಸ್ಟ್ ಕರ್ನಾಟಕ ಆರೋಪ :  ಇನ್ನು, ಮಾಜಿ ಸಚಿವ ಮುರುಗೇಶ್‌ ನಿರಾಣಿ ಬೃಹತ್‌ ಕೈಗಾರಿಕಾ ಸಚಿವರಾಗಿದ್ದ ವೇಳೆ ಇನ್ವೆಸ್ಟ್ ಕರ್ನಾಟಕ ವಿಡಿಯೋ ಚಿತ್ರೀಕರಣ ವಿಚಾರದಲ್ಲಿ ಅಕ್ರಮ ಎಸಗಿದ್ದರು ಎಂಬ ಆರೋಪ ಇದೆ.

ಇನ್ವೆಸ್ಟ್ ಕರ್ನಾಟಕ 2022 ಎಂಬ ಹೆಸರಿನಲ್ಲಿ ಎರಡು ನಿಮಿಷಗಳ ಕಾಲಾವಕಾಶದ 3ಡಿ ವಿಡಿಯೋಗೆ 4 ಕೋಟಿ ರು.ಗಿಂತ ಹೆಚ್ಚು ಪಾವತಿಸಲಾಗಿದೆ. ಮುಂಬೈ ಮೂಲದ ಕಂಪನಿಗೆ ಟೆಂಡರ್‌ ನೀಡಲಾಗಿದ್ದು, ಕಾನೂನು ಬಾಹಿರವಾಗಿ ಸರ್ಕಾರದ ಹಣವನ್ನು ಬಿಡುಗಡೆ ಮಾಡಿಸಿ ಅಕ್ರಮ ಎಸಗಿದ್ದಾರೆ ಎಂದು ಹೇಳಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!
ನೈಸ್‌ ವಿರುದ್ಧ ಇಳಿವಯಸ್ಸಲ್ಲೂ ಕಾನೂನು ಹೋರಾಟ: ಗೌಡ