ರಾಜ್ಯದಲ್ಲಿ ಜೆಡಿಎಸ್ ಅತ್ಯಂತ ಪ್ರಬಲ, ಜನ ವಿಶ್ವಾಸಿ ಪಕ್ಷವಾಗಿದೆ: ನಿಖಿಲ್‌ ಕುಮಾರಸ್ವಾಮಿ

KannadaprabhaNewsNetwork |  
Published : Feb 19, 2026, 01:15 AM IST
59 | Kannada Prabha

ಸಾರಾಂಶ

ಕೇವಲ ಭಾಷಣ ಮಾಡಿದರಷ್ಟೇ ಪಕ್ಷ ಸಂಘಟನೆ ಯಾಗುವುದಿಲ್ಲ, ಹಾಗಾಗಿ ಕಾರ್ಯಕರ್ತರನ್ನು ಸಂಘಟಿಸಿ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು.ಮುಂದಿನ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳು ಎದುರಾಗಲಿವೆ, ಹಾಗಾಗಿ ಈ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ರಾಜ್ಯದಲ್ಲಿ ಜೆಡಿಎಸ್ ಅತ್ಯಂತ ಪ್ರಬಲ ಹಾಗೂ ಜನ ವಿಶ್ವಾಸಿ ಪಕ್ಷವಾಗಿದ್ದು, ಈ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಬಲಪಡಿಸುವ ಅಗತ್ಯವಿರುವುದರಿಂದ ರಾಜ್ಯಾದ್ಯಂತ ಜನರೊಂದಿಗೆ ಜನತಾದಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಶ್ರೀ ಸಾಯಿ ಸಮುದಾಯ ಭವನದ ಆವರಣದಲ್ಲಿ ಜೆಡಿಎಸ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ಗೆ ಕಾರ್ಯಕರ್ತರೇ ಜೀವಾಳ ಎಂದರು.

ಕೇವಲ ಭಾಷಣ ಮಾಡಿದರಷ್ಟೇ ಪಕ್ಷ ಸಂಘಟನೆ ಯಾಗುವುದಿಲ್ಲ, ಹಾಗಾಗಿ ಕಾರ್ಯಕರ್ತರನ್ನು ಸಂಘಟಿಸಿ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು.ಮುಂದಿನ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳು ಎದುರಾಗಲಿವೆ, ಹಾಗಾಗಿ ಈ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸುವ ಕೆಲಸ ಮಾಡಬೇಕು, 2028ರ ವಿಧಾನಸಭಾ ಚುನಾವಣೆ‌ಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರು ಶ್ರಮಸಬೇಕು. ಇನ್ನೂ ಚುನಾವಣೆಗೆ ಮೂರು ವರ್ಷವಿದೆ ಎಂದು ಕಾರ್ಯಕರ್ತರು ಕೈ ಕಟ್ಟಿ ಕೊರದೆ, ಅತ್ಯಂತ ಎಚ್ಚರಿಕೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಹಾಗಾಗಿ ಬೂತ್‌ ಮಟ್ಟದಲ್ಲಿ‌ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಕಟ್ಟಬೇಕು ಎಂದರು.

ತೆರಿಗೆಯಿಂದ ಜನರಿಗೆ ಸಾಕಷ್ಟು ತೊಂದರೆ:

ರಾಜ್ಯ ಕಾಂಗ್ರೆಸ್ ಸರ್ಕಾರವು ಇಲ್ಲಸಲ್ಲದ ತೆರಿಗೆ ಹಣವನ್ನು ಜನರ ಮೇಲೆ ಹಾಕಿ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ರಾಜ್ಯದ ಜನತೆಗೆ ನೀಡಿದ ಉತ್ತಮ ಆಡಳಿತ ಇಂದಿಗೂ ಕೂಡ ಅಜರಾಮರವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕರ್ತರನ್ನು ಒಗ್ಗಟ್ಟಿನಲ್ಲಿ ಕರೆದೊಯ್ಯಬೇಕು:

ತಾಲೂಕಿನಲ್ಲಿ ಜೆಡಿಎಸ್ ನ್ನು ಸಂಘಟಿಸಿ, ಅಭ್ಯರ್ಥಿಗಳನ್ನು ಗೆಲ್ಲಿಸುವ ತನಕ ಕಾರ್ಯಕರ್ತರು ವಿಶ್ರಮಿಸಬಾರದು. ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿರುವ ಶಾಸಕ ಮಾಜಿ ಶಾಸಕ ಕೆ. ಮಹದೇವ್ ಹಾಗೂ ಮಾಜಿ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಪಕ್ಷ ಸಂಘಟನೆಗೆ ಕೈಜೋಡಿಸಬೇಕು ಎಂದರು.

ಪ್ರತಿ ಬೂತ್ ನಲ್ಲಿಯೂ ಪದಾಧಿಕಾರಿಗಳ ನೇಮಕ:

ಮಾಜಿ ಶಾಸಕ ಕೆ. ಮಹದೇವ್ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಆದೇಶದಂತೆ ತಾಲೂಕಿನ 34 ಪಂಚಾಯಿತಿ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಸಭೆ ನಡೆಸಿ, ಪ್ರತಿ ಬೂತ್ ನಲ್ಲಿಯೂ ಪದಾಧಿಕಾರಿಗಳನ್ನು ನೇಮಿಸಿದ್ದೇನೆ. ರಾಜ್ಯಾದ್ಯಂತ ಪಕ್ಷ ಸಂಘಟನೆಗಾಗಿ ಮುಂದಾಗಿರುವ ನಿಖಿಲ್‌ ಕುಮಾರಸ್ವಾಮಿ ಅವರು ಈಗಾಗಲೇ 9 ಸಾವಿರ ಕಿ.ಮೀ ಓಡಾಡಿ, 55 ಕ್ಷೇತ್ರದಲ್ಲಿ ಸಂಚಾರ ನಡೆಸಿ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.

ರೈತರ ಬವಣೆ ನೀಗಲು ಸಾಧ್ಯ:

ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಮಾತ್ರ ರೈತರ ಬವಣೆ ನೀಗಲು ಸಾಧ್ಯ, ಈ ಭಾಗದ ತಂಬಾಕು ಬೆಳೆಗಾರರ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬ ನಿರಂತರವಾಗಿ ಹೋರಾಟ ಮಾಡುವ ಮೂಲಕ ರೈತರ ಹಿತ ಕಾಯುವ ಕೆಲಸ ಮಾಡುತ್ತಿದೆ, ಹಾಗಾಗಿ ಸಮ್ಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ 7 ಕೋಟಿ ಕನ್ನಡಿಗರು ಸಹಕಾರ ನೀಡಬೇಕು ಎಂದರು.

ಕಾಂಗ್ರೆಸ್‌ ಸ್ವಾರ್ಥ ರಾಜಕಾರಣ ಮಾಡುತ್ತಿದೆ:

ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಜೆಡಿಎಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಹಿಳೆಯರ, ರೈತರ ಹಾಗೂ ಕಾರ್ಮಿಕರ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ನೊಂದವರ ಪರವಾಗಿತ್ತು. ಇಂದು ಕಾಂಗ್ರೆಸ್ ಸರ್ಕಾರವು ಜನರ ಹಿತವನ್ನು ಕಾಯದೆ ಸ್ವಾರ್ಥ ರಾಜಕಾರಣವನ್ನು ಮಾಡುತ್ತಿದೆ ಎಂದು ದೂರಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ವಿವೇಕಾನಂದ, ಮೈಸೂರು ನಗರ ಘಟಕದ ಅಧ್ಯಕ್ಷ ಎಸ್.ಬಿ.ಎಂ. ಮಂಜು, ಮಾಜಿ ಮೇಯರ್‌ ರವಿ, ಮುಖಂಡರಾದ ಗಗನ್ ತಿಲಕ್, ರಾಮು ಐಲಾಪುರ, ಸಿ.ಎನ್.ರವಿ, ರಾಜು ಮಾಸ್ಟರ್, ಪಿ.ಕೆ. ಕುಮಾರ್, ಸಂಜೀವ್ ಕುಮಾರ್, ಸತೀಶ್ ಬೆಕ್ಕೆ, ಅತ್ತರ್ ಮತ್ತಿನ್ ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ರಾಜಕಾರಣಕ್ಕಾಗಿ ಅಪ್ಪ-ಮಗನ ಬೇರ್ಪಡಿಸುವುದು ಸರಿಯಲ್ಲ: ಶಾಸಕ ಶ್ರೀನಿವಾಸ್
ಕಾಂಗ್ರೆಸ್‌ ಮಾಜಿ ರಾಜ್ಯಾಧ್ಯಕ್ಷ ಫೆ.22ರಂದು ಬಿಜೆಪಿಗೆ ಸೇರ್ಪಡೆ